ಮನೆ ಮನೆಗೆ ತೆರಳಿ ನೀರಿನ ಬಾಕಿ ತೆರಿಗೆ ವಸೂಲಿ
ಮೈಸೂರು

ಮನೆ ಮನೆಗೆ ತೆರಳಿ ನೀರಿನ ಬಾಕಿ ತೆರಿಗೆ ವಸೂಲಿ

June 20, 2020

ಮೈಸೂರು, ಜೂ.19(ಆರ್‍ಕೆ)- ಮೈಸೂರು ನಗರದಾದ್ಯಂತ ಬಾಕಿ ಉಳಿದಿ ರುವ ನೀರಿನ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಇದೇ ಮೊದಲ ಭಾರಿ ಮೊಬೈಲ್ ತಂಡಗಳನ್ನು ರಚಿಸಿದೆ. ಅಲ್ಲದೇ ನಗರದ ಕೆಲ ಪ್ರದೇಶಗಳ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 6 ಮೊಬೈಲ್ ಆರ್‍ಓ ಪ್ಲಾಂಟ್ ವಾಹನಗಳನ್ನು ಸಜ್ಜುಗೊಳಿಸಿದೆ.

ನೀರಿನ ತೆರಿಗೆ ವಸೂಲಿಗಾಗಿ `ಕಬಿನಿ’ ಮತ್ತು `ಕಾವೇರಿ’ ಹೆಸರಿನಲ್ಲಿ ಎರಡು ಟಾಟಾ ಏಸ್ ವಾಹನಗಳನ್ನು ಸಜ್ಜುಗೊಳಿಸ ಲಾಗಿದ್ದು, ಅದರಲ್ಲಿ ತೆರಳುವ ಪಾಲಿಕೆಯ ವಾಣಿವಿಲಾಸ ವಾಟರ್ ವಕ್ರ್ಸ್ ಸಿಬ್ಬಂದಿ ನೀರಿನ ತೆರಿಗೆ ಬಾಕಿ ಸಂಗ್ರಹಿಸುವರು.

ಯಾವ ತಿಂಗಳಿನಿಂದ ನೀರಿನ ಕಂದಾಯ ಬಾಕಿ ಇದೆ, ಎಷ್ಟು ಬಾಕಿ ಇದೆ ಎಂಬು ದನ್ನು ಮನದಟ್ಟು ಮಾಡಿ, ಆ ಸಂದರ್ಭ ದಲ್ಲೇ ತೆರಿಗೆ ಪಾವತಿಸಿದರೆ ಸ್ಥಳದಲ್ಲೇ ರಶೀದಿ ನೀಡಲಾಗುವುದು. ಒಂದು ವೇಳೆ ಹಣ ಪಾವತಿಸದಿದ್ದರೆ ಇಂತಿಷ್ಟು ದಿನದೊಳಗೆ ಪಾವತಿಸದಿದ್ದಲ್ಲಿ ನೀರು ಸರಬರಾಜು ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚ ರಿಕೆ ನೀಡಿ, ವಾಯಿದೆಯೊಳಗೆ ನೀರಿನ ತೆರಿಗೆ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಿದ್ದಾರೆ. ಬಾಕಿ ಹಣ ಪಾವ ತಿಸಿದ ನಂತರವಷ್ಟೇ ನೀರಿನ ಸಂಪರ್ಕ ಕಲ್ಪಿಸುವರು. ಮೈಸೂರು ನಗರದಾದ್ಯಂತ 1,70,000 ಅಧಿಕೃತ ನೀರು ಸಂಪರ್ಕ ವಿದ್ದು, 180 ಕೋಟಿ ರೂ. ನೀರಿನ ತೆರಿಗೆ ಬಾಕಿ ಬರಬೇಕಿದೆ. ಅದರಲ್ಲಿ 40 ಕೋಟಿ ರೂ. ಸರ್ಕಾರಿ ಕಚೇರಿಗಳಿಂದ ಹಾಗೂ 46 ಕೋಟಿ ರೂ. ಬಡ್ಡಿ ರೂಪದ ಹಣ ಎಂದು ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ ಮೂರ್ತಿ ತಿಳಿಸಿದ್ದಾರೆ.

ಅದರ ಜೊತೆಗೆ ಮೈಸೂರಲ್ಲಿ 15,000 ಅನಧಿಕೃತ ಸಂಪರ್ಕಗಳಿದ್ದು, ಅಂತಹ ಗ್ರಾಹಕರಿಗೆ ಮೀಟರ್ ಅಳವಡಿಸಲು 2 ಕೋಟಿ ರೂ. ಅನುದಾನವನ್ನು ಪಾಲಿಕೆ ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಪ್ರತೀ ತಿಂಗಳು ಕನಿಷ್ಠ 150 ರೂ. ನೀರಿನ ಕಂದಾಯ ಮತ್ತು ಮೀಟರ್ ಅಳವಡಿಕೆ ಶುಲ್ಕವನ್ನು ಕಂತು ರೂಪದಲ್ಲಿ ವಸೂಲು ಮಾಡಲು ಪಾಲಿಕೆ ಯೋಜನೆ ರೂಪಿಸಿದೆÉ.

24×7 ನೀರು ಪೂರೈಸಲು ಮಹಾ ನಗರ ಪಾಲಿಕೆಯು ತಯಾರಿ ನಡೆಸಿ, ಈಗಾಗಲೇ ಕೆಲವು ಬಡಾವಣೆಗಳಿಗೆ ದಿನದ 24 ಗಂಟೆ ನಿರಂತರ ನೀರು ಪೂರೈಸುವ ಸಂಪರ್ಕ ಜಾಲ ಕಲ್ಪಿಸಿರುವುದರಿಂದ ನೀರಿನ ಕಂದಾಯ ವಸೂಲಿಗೆ ದಿಟ್ಟ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಬಳಸಿದ ನೀರಿಗೆ ನಿಗದಿಪಡಿಸಿರುವ ಕನಿಷ್ಠ ತೆರಿಗೆ ಯನ್ನು ಸ್ವಯಂ ಪ್ರೇರಿತವಾಗಿ ಪಾವತಿಸಿ ದರೆ ಗುಣಮಟ್ಟದ ಸೇವೆ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ನಾಗ ರಾಜ್ ಮೂರ್ತಿ ಹೇಳಿದ್ದಾರೆ.

ಶುದ್ಧ ಕುಡಿಯುವ ನೀರು ಸರಬರಾಜು: ಮೈಸೂರು ನಗರದ ಕೆಲವೆಡೆ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಮಹಾ ನಗರ ಪಾಲಿಕೆಯು 6 ಮೊಬೈಲ್ ಆರ್‍ಓ ಪ್ಲಾಂಟ್ ವಾಹನ ಗಳನ್ನು ಸಜ್ಜುಗೊಳಿಸಿದೆ. ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ಎರಡರಂತೆ 1,000 ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ಹೊಂದಿ ರುವ 6 ಟಾಟಾ ಏಸ್ ವಾಹನಗಳನ್ನು ಸಜ್ಜುಗೊಳಿಸಲಾಗಿದ್ದು, ವಾಣಿ ವಿಲಾಸ ವಾಟರ್ ವಕ್ರ್ಸ್ ಸಿಬ್ಬಂದಿಯನ್ನು ಮೊಬೈಲ್ ಆರ್‍ಓ ಪ್ಲಾಂಟ್‍ಗೆ ನಿಯೋಜಿಸಲಾಗಿದೆ.

ಆರ್‍ಓ ಪ್ಲಾಂಟ್‍ಗಳಿಂದ ಶುದ್ಧ ನೀರನ್ನು ಟ್ಯಾಂಕ್‍ಗೆ ತುಂಬಿಸಿಕೊಂಡು ಆರ್‍ಓ ಪ್ಲಾಂಟ್‍ಗಳಿಲ್ಲದ ಹಾಗೂ ಚಿಕ್ಕ ಚಿಕ್ಕ ರಸ್ತೆ ಗಳಲ್ಲಿ ವಾಸ ಮಾಡುವ ನಿವಾಸಿಗಳಿಗೆ ನೀರು ಪೂರೈಸಲಾಗುವುದು. ಹಾಗೆ ಆರ್‍ಓ ಪ್ಲಾಂಟ್ ನಿರ್ಮಿಸಲು ಸ್ಥಳಾವಕಾಶ ವಿಲ್ಲದ ರಾಜೀವನಗರ, ಶಾಂತಿನಗರ, ನಾಚನ ಹಳ್ಳಿ ಪಾಳ್ಯ, ಬೀಡಿ ಕಾಲೋನಿ, ಗಾಂಧಿ ನಗರ, ಎನ್.ಆರ್.ಮೊಹಲ್ಲಾ, ಮಂಡಿ ಮೊಹಲ್ಲಾಗಳಂತಹ ಬಡಾವಣೆಗಳ ಸಣ್ಣ ಸಣ್ಣ ರಸ್ತೆಗಳಿರುವ ಕಡೆ ಈ ವಾಹನಗಳಲ್ಲಿ ತೆರಳಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. 5 ರೂ. ನಾಣ್ಯ ಹಾಕಿ ಕ್ಯಾನ್‍ಗಳಿಗೆ 25 ಲೀಟರ್ ನೀರು ತುಂಬಿಸಿಕೊಳ್ಳಬಹುದು.

ಆರಂಭದಲ್ಲೇ ಅಪಸ್ವರ: ಉದ್ಘಾಟನೆ ಮುಂದೂಡಿಕೆ
ಮೈಸೂರು, ಜೂ.19-ನೀರಿನ ತೆರಿಗೆ ವಸೂಲಾತಿಗಾಗಿ ರಚಿಸಿರುವ ಮೊಬೈಲ್ ತಂಡ, ಶುದ್ಧ ಕುಡಿಯುವ ನೀರು ಪೂರೈಸುವ ಮೊಬೈಲ್ ಆರ್‍ಓ ಪ್ಲಾಂಟ್ ವಾಹನ ಮತ್ತು ವಾಣಿವಿಲಾಸ ವಾಟರ್ ವಕ್ರ್ಸ್‍ನ ನವೀಕೃತ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಆದರೆ ಕೆಲ ಕಾರ್ಪೊರೇಟರ್‍ಗಳ ಅಸಮಾಧಾನ ದಿಂದಾಗಿ ಈ ಕಾರ್ಯಕ್ರಮ ಮುಂದೂಡಲಾಯಿತು. ಕಾರ್ಯಕ್ರಮಕ್ಕಾಗಿ ವಾಣಿವಿಲಾಸ ವಾಟರ್ ವಕ್ರ್ಸ್ ಕಟ್ಟಡವನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು. ತೆರಿಗೆ ವಸೂಲಾತಿ ಮತ್ತು ಮೊಬೈಲ್ ಆರ್‍ಓ ಪ್ಲಾಂಟ್ ವಾಹನಗಳನ್ನೂ ಶೃಂಗರಿಸಿ ಸಮವಸ್ತ್ರ ಧರಿಸಿದ್ದ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಈ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತರ ಕಚೇರಿಯಿಂದ ವಾರ್ತಾ ಮತ್ತು ಪ್ರಚಾರ ಇಲಾಖೆ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ನಂತರ ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ ಎಂಬ ಸಂದೇಶವನ್ನು ರವಾನಿಸಲಾಯಿತು. ಕೆಲವೇ ನಿಮಿಷಗಳ ಅಂತರದಲ್ಲಿ ಕಾರ್ಯಕ್ರಮ ಮುಂದೂಡಲಾಗಿದ್ದು, ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತವಾಗಿ ತಿಳಿಸಲಾಯಿತು.

ಈ ಸಂಬಂಧ ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜಮೂರ್ತಿ ಅವರನ್ನು `ಮೈಸೂರು ಮಿತ್ರ’ ಸಂಪರ್ಕಿಸಿದಾಗ, `ಇದೊಂದು ಸಣ್ಣ ಕಾರ್ಯಕ್ರಮವಾದ್ದರಿಂದ ಪಾಲಿಕೆಯ ಕಮಿಟಿ ಅಧ್ಯಕ್ಷರುಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮೇಯರ್ ಅವರು ನಿನ್ನೆ ಈ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ದರು. ನಾವೂ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ಕೊನೇ ಘಳಿಗೆಯಲ್ಲಿ ಮೇಯರ್ ಅವರು ಕಾರ್ಯಕ್ರಮಕ್ಕೆ ಎಲ್ಲಾ ಕಾರ್ಪೊರೇಟರ್‍ಗಳಿಗೂ ಆಹ್ವಾನ ನೀಡಬೇಕಿತ್ತು. ಇಲ್ಲದಿದ್ದರೆ ಅವರು ಕೋಪಿಸಿಕೊಳ್ಳುತ್ತಾರೆ. ಆದ್ದರಿಂದ ಕಾರ್ಯಕ್ರಮ ಮುಂದೂಡಿ ಎಂದು ತಿಳಿಸಿದ ಮೇರೆಗೆ ಅನ್ಯ ಮಾರ್ಗವಿಲ್ಲದೆ ಕಾರ್ಯಕ್ರಮ ಮುಂದೂಡಲಾಯಿತು’ ಎಂದು ತಿಳಿಸಿದರು.

Translate »