ಇಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ, ಜು.29ಕ್ಕೆ ಸಿಎಂ ಮನೆ, ಡಿಸಿ ಕಚೇರಿಗೆ `ಆಶಾ’ ಮುತ್ತಿಗೆ
ಮೈಸೂರು

ಇಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ, ಜು.29ಕ್ಕೆ ಸಿಎಂ ಮನೆ, ಡಿಸಿ ಕಚೇರಿಗೆ `ಆಶಾ’ ಮುತ್ತಿಗೆ

July 27, 2020

ಮೈಸೂರು, ಜು.26(ಪಿಎಂ)- ಕೊರೊನಾ ಸೋಂಕು ಸಮುದಾಯಕ್ಕೆ ಹರಡುವಷ್ಟು ವ್ಯಾಪಕವಾಗುತ್ತಿದೆ. ನಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದೇ ಇದಕ್ಕೆ ಕಾರಣ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿರುವು ದರಿಂದ ಸೋಂಕಿತರನ್ನು ಗುರುತಿಸುವ ಕಾರ್ಯದಲ್ಲಿ ಹಿನ್ನಡೆ ಯಾಗಿದೆ. ಇಷ್ಟಾದರೂ ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವವನ್ನು ಸರ್ಕಾರ ಅರಿಯಲಿಲ್ಲ. ಬೇಡಿಕೆ ಈಡೇರಿ ಸುವ ಸಂಬಂಧ ಮಾತುಕತೆಗೂ ಮುಂದಾಗುತ್ತಿಲ್ಲ. ಇಂದಲ್ಲ, ನಾಳೆ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದರೂ ನಾವು ಸೇವೆ ಸ್ಥಗಿತಗೊಳಿಸುತ್ತಿರಲಿಲ್ಲ ಎಂದರು.

ನಾವು ಸೇವೆ ಸ್ಥಗಿತಗೊಳಿಸುವ ಮುನ್ನ ಮೈಸೂರಿನಲ್ಲಿ ಇಷ್ಟು ಪ್ರಮಾಣದ ಕೊರೊನಾ ಪಾಸಿಟಿವ್ ಕೇಸ್‍ಗಳು ಬರುತ್ತಿರಲಿಲ್ಲ. ಈಗ ದಿನಕ್ಕೆ 100, 200 ಕೇಸ್‍ಗಳು ದಾಖ ಲಾಗುತ್ತಿವೆ. ಇಷ್ಟಾದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ ಸಂಯೋ ಜಿತ) ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಶುಭಮಂಗಳ, ನಗರಾಧ್ಯಕ್ಷೆ ಕೋಮಲ, ಸದಸ್ಯೆ ಸುನೀತಾ ಸುದ್ದಿ ಗೋಷ್ಠಿಯಲ್ಲಿ ಕಿಡಿಕಾರಿದರು.

ಸಿಎಂ ಮನೆಗೆ ಮುತ್ತಿಗೆ: ಎಐಯುಟಿಯುಸಿ ಜಿಲ್ಲಾ ಕಾರ್ಯ ದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, 12 ಸಾವಿರ ರೂ.ಗೆ ಮಾಸಿಕ ಗೌರವಧನ ಹೆಚ್ಚಳ ಹಾಗೂ ಸಮರ್ಪಕ ಆರೋಗ್ಯ ರಕ್ಷಣಾ ಸಾಮಗ್ರಿಗೆ ಆಗ್ರಹಿಸಿ ಆರಂಭಿಸಿದ ಮುಷ್ಕರ ಮುಂದುವರೆಯಲಿದೆ. ಜು.29ರಂದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆ ಯರಿಗೆ 11 ಸಾವಿರ ರೂ. ಗೌರವಧನ ದೊರೆಯುತ್ತಿದೆ ಎಂದು ಹೇಳಿರುವುದು ವಾಸ್ತವವಲ್ಲ. ಬಹುತೇಕ ಆಶಾ ಕಾರ್ಯಕರ್ತೆಯರಿಗೆ 6-7 ಸಾವಿರ ರೂ. ಮಾತ್ರ ದೊರೆಯುತ್ತಿದೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಜುಲೈ 27ರಂದು ರಾಜ್ಯದ ಎಲ್ಲಾ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಸ್ಪಷ್ಟೀಕರಣ ಕೇಳಲಿದ್ದಾರೆ ಎಂದು ಹೇಳಿದರು.

Translate »