ಮೈಸೂರು,ಆ.13(ಪಿಎಂ)-ಸ್ವಾತಂತ್ರ್ಯೋತ್ಸವ ಸಂಭ್ರಮಾ ಚರಣೆಗೂ ಕೊರೊನಾ ಕರಿನೆರಳು ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಹಿಂದಿನ ವರ್ಷಗಳಲ್ಲಿ ಇರುತ್ತಿದ್ದ ಸಡಗರ, ಸಂಭ್ರಮ ಇಲ್ಲವಾಗಲಿದೆ. ಸರಳವಾಗಿಯೇ ದೇಶಾಭಿಮಾನ ವ್ಯಕ್ತಪಡಿ ಸುವ ಅನಿವಾರ್ಯತೆಯನ್ನು ಕೊರೊನಾ ತಂದಿಟ್ಟಿದೆ.
ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈಸೂರಲ್ಲಿ ಕಾಣುತ್ತಿದ್ದ ತ್ರಿವರ್ಣ ಧ್ವಜ ಮಾರಾಟ ಭರಾಟೆ ಈ ಬಾರಿ ಕಾಣದಾಗಿದೆ. ಶಿವರಾಂಪೇಟೆ ದೇವರಾಜ ಮಾರುಕಟ್ಟೆ ಬಳಿಯ ನಾಲ್ಕೈದು ಫ್ಯಾನ್ಸಿ ಸ್ಟೋರ್ಗಳಲ್ಲಿ ಪ್ರತಿವರ್ಷ ರಾಷ್ಟ್ರಧ್ವಜ ಮಾರಾಟ ಜೋರಾಗಿ ನಡೆಯು ತ್ತದೆ. ವರ್ಷವಿಡೀ ಇತರ ದಿನ ಬಳಕೆ ವಸ್ತುಗಳ ಮಾರಾಟ ದಲ್ಲಿ ನಿರತರಾಗುವ ಈ ಮಳಿಗೆಯವರು ಆಗಸ್ಟ್ನಲ್ಲಿ ತ್ರಿವರ್ಣ ಧ್ವಜ ಮಾರಾಟದಿಂದ ಒಂದಿಷ್ಟು ಲಾಭ ಮಾಡುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಈ ಬಾರಿ ಕೊರೊನಾ ಅದಕ್ಕೆ ತಡೆಯೊಡ್ಡಿ ವ್ಯಾಪಾರಸ್ಥರಲ್ಲಿ ನಿರಾಸೆ ಮೂಡಿಸಿದೆ.
ಫ್ಯಾನ್ಸಿ ಸ್ಟೋರ್ ಮಾಲೀಕರ ಪ್ರಕಾರ ಈ ಬಾರಿ ತ್ರಿವರ್ಣ ಧ್ವಜದ ಮಾರಾಟದಲ್ಲಿ ಶೇ.80ರಿಂದ 90ರಷ್ಟು ಕುಸಿತ ಉಂಟಾಗಿದೆ. ಈ ಮಳಿಗೆಗಳಲ್ಲಿ ದಿನ ಬಳಕೆ ವಸ್ತುಗಳಿ ಗಿಂತ ತ್ರಿವರ್ಣ ಧ್ವಜ ಸೇರಿದಂತೆ ರಾಷ್ಟ್ರಾಭಿಮಾನ ವ್ಯಕ್ತಪಡಿಸುವ ತ್ರಿವರ್ಣ ಧ್ವಜದ ಬಣ್ಣಗಳನ್ನು ಹೊಂದಿ ರುವ ರಿಬ್ಬನ್, ಟೋಪಿ, ಬ್ಯಾಡ್ಜ್ಗಳಿಗೆ ಬೇಡಿಕೆ ಆಗಸ್ಟ್ ನಲ್ಲಿ ಹೆಚ್ಚಾಗುತ್ತಿತ್ತು. ಈ ವರ್ಷ ಅಂತಹ ವಾತಾ ವರಣವಿಲ್ಲ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ, ತ್ರಿವರ್ಣ ಧ್ವಜದ ಬ್ಯಾಂಡ್, ಟೋಪಿ, ಟೇಪ್ಗಳ ಖರೀದಿಗೆ ಇಷ್ಟೊತ್ತಿಗಾಗಲೇ ಮುಗಿಬೀಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಈ ಅಂಗಡಿಗಳತ್ತ ಅವರ ಸುಳಿವೇ ಇಲ್ಲವಾಗಿದೆ. ಖಾದಿ ಸೇರಿದಂತೆ ಕಾಟನ್, ಪಾಲಿಸ್ಟರ್ನ ವಿವಿಧ ಅಳತೆ ಬಾವುಟಗಳನ್ನು ಕೇಳುವವರಿಲ್ಲವಾಗಿದೆ.
ಇಲ್ಲಿನ ಭಗವತಿ ಫ್ಯಾನ್ಸಿ ಸ್ಟೋರ್ನ ವಿಜಯ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ವರ್ಷ ಆ.5 ರಿಂದಲೇ ತ್ರಿವರ್ಣ ಧ್ವಜ ಸೇರಿದಂತೆ ರಾಷ್ಟ್ರಾಭಿಮಾನ ಮೂಡಿಸುವ ರಿಬ್ಬನ್, ಟೋಪಿ, ಟೇಪ್ಗಳ ಖರೀದಿ ಜೋರಾಗಿತ್ತು. ಈ ಬಾರಿ ಆ.10 ಕಳೆದರೂ ಖರೀದಿ ಕಳೆಗಟ್ಟಿಲ್ಲ. ಲಾಕ್ಡೌನ್ನಿಂದ ಜನರ ಬಳಿ ಹಣವಿಲ್ಲ. ಶಾಲಾ-ಕಾಲೇಜು ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇತ್ತು ಸುಳಿಯುತ್ತಿಲ್ಲ. ಈ ಬಾರಿ ಶೇ.80ರಿಂದ 90ರಷ್ಟು ಖರೀದಿ ಇಲ್ಲವಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಸಗಟು, ಚಿಲ್ಲರೆ ಮಾರಾಟ ಎರಡೂ ಇದೆ. ಹಿಂದಿನ ವರ್ಷಗಳಂತೆ ವಹಿವಾಟು ಈಗ ಚುರುಕು ಗೊಂಡಿಲ್ಲ. ಕಾಗದ, ಪ್ಲಾಸ್ಟಿಕ್ ಧ್ವಜಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಬಟ್ಟೆಯ ಧ್ವಜಗಳು ಮಾತ್ರವೇ ಮಾರಾಟಕ್ಕಿವೆ. ನಿಗದಿತ ಅಳತೆಯ ಧ್ವಜಗಳು ಅವುಗಳ ಅಳತೆಯ ಆಧಾರ ದಲ್ಲಿ 10ರಿಂದ 500 ರೂ.ವರೆಗೆ ಬೆಲೆ ಇದೆ ಎಂದರು.