ಹಸಿರು, ಶುದ್ಧ ಶಕ್ತಿ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು

ಹಸಿರು, ಶುದ್ಧ ಶಕ್ತಿ ಕುರಿತು ಜಾಗೃತಿ ಕಾರ್ಯಕ್ರಮ

February 18, 2021

ಮೈಸೂರು,ಫೆ.17-ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಸಿರು ಮತ್ತು ಶುದ್ಧ ಶಕ್ತಿ ಕುರಿತು ಜಾಗೃತಿ ಕಾರ್ಯಕ್ರಮ ‘ಸಕ್ಷಂ-2021’ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪಯೋಗ, ಮಹತ್ವ ಮತ್ತು ಸಂರಕ್ಷಣೆ ವಿಧಾನಗಳು, ಅದರಿಂದ ಕೆಟ್ಟ ಅನಿಲ ಹೊರಸೂಸುವಿಕೆ ಕಡಿತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವೇದನಾ ಭಾವನೆ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪಿಸಿಆರ್‍ಎ (ಪೆಟ್ರೋಲಿಯಂ ಸಂರಕ್ಷಣೆ ಮತ್ತು ಸಂಶೋಧನಾ ಸಂಘ)ದ ನೇತೃತ್ವದಲ್ಲಿ ಭಾರತೀಯ ತೈಲ ಒಕ್ಕೂಟದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. 35 ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಿ.ಎ. ವಿದ್ಯಾರ್ಥಿಗಳಾದ ಪೃಥ್ವಿರಾಜ್ ಮತ್ತು ಮನ್ ಮೋಹನ್ ವಿಜೇತರಾಗಿ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಕಾಲೇಜಿನ ಒಂದು ಭಾರತ ಒಂದು ಜನ ಸಮಿತಿ ಮತ್ತು ಐಕ್ಯೂಎಸಿ ಮುಂದಾಳತ್ವದಲ್ಲಿ ಈ ಕಾರ್ಯ ಕ್ರಮ ನಡೆಯಿತು. ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ, ಒಂದು ಭಾರತ ಒಂದು ಜನ ಸಮಿತಿಯ ಸಂಚಾಲಕಿ ವಾಣಿ ಮತ್ತು ಐಕ್ಯೂಎಸಿ ಸಂಚಾಲಕಿ ಶೈಲಾ ಹಾಗೂ ‘ಸಕ್ಷಂ-2021’ನ ಸಂಚಾಲಕ ಬಿಂದುಕಿರಣ್ ಉಪಸ್ಥಿತರಿದ್ದರು.

 

Translate »