ಮೈಸೂರಲ್ಲಿ ಆಕ್ಸಿಜನ್ ಬೆಡ್ ಕೊರತೆ ಇಲ್ಲ
ಮೈಸೂರು

ಮೈಸೂರಲ್ಲಿ ಆಕ್ಸಿಜನ್ ಬೆಡ್ ಕೊರತೆ ಇಲ್ಲ

April 27, 2021

ಮೈಸೂರು, ಏ.26(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿದ್ದರೂ ಸದ್ಯಕ್ಕೆ ಆಕ್ಸಿಜನ್ ಬೆಡ್‍ಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿ ಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅನಗತ್ಯವಾಗಿ ಆಕ್ಸಿಜನ್ ಹಾಗೂ ವೆಂಟಿ ಲೇಟರ್ ಬೆಡ್ ಪಡೆಯದಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿರುವ ಕೊರೊನಾ ಪರಿಸ್ಥಿತಿ, ಕೈಗೊಂಡಿರುವ ಕ್ರಮಗಳ ಬಗ್ಗೆ ಫೇಸ್‍ಬುಕ್ ಲೈವ್ ಮೂಲಕ ಸೋಮವಾರ ವಿವರಿಸಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ 150 ಹಾಗೂ ಕೆ.ಆರ್. ಆಸ್ಪತ್ರೆಯಲ್ಲಿ 150 ಆಕ್ಸಿಜನ್ ಬೆಡ್‍ಗಳು ಲಭ್ಯವಿದ್ದು, ಸದ್ಯಕ್ಕೆ ಇದರ ಕೊರತೆಯಿಲ್ಲ. ಆದರೆ ಖಾಸಗಿ ಯಲ್ಲಿ ಒಂದು ಸೇರಿದಂತೆ ಜಿಲ್ಲೆಯಲ್ಲಿ ಕೇವಲ 10 ವೆಂಟಿಲೇಟರ್ ಬೆಡ್ ಲಭ್ಯ ವಿದೆ. ಮಂಡಕಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಯುವಕರು, ಉಸಿರಾಟದ ಸಮಸ್ಯೆ ಇಲ್ಲದವರೂ ಕೂಡ ಆತಂಕದಿಂದ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ ಗಳು ಬೇಕೆಂದು ಕೇಳು ತ್ತಿದ್ದಾರೆ. ಯಾರೂ ಕೂಡ ಈ ರೀತಿ ಆತಂಕಕ್ಕೆ ಒಳಗಾಗ ಬೇಡಿ. ಸೋಂಕಿತ ರಲ್ಲಿ ಶೇ. 95ರಷ್ಟು ಮಂದಿ ಹೋಂ ಐಸೊಲೇಷನ್‍ನಲ್ಲೇ ಶುಶ್ರೂಷೆ ಪಡೆದು, ಗುಣಮುಖರಾಗಿದ್ದಾರೆ. ಟೆಸ್ಟಿಂಗ್ ಮಾಡಿ ಸಲು ಸಾಧ್ಯವಾಗದಿದ್ದರೂ ರೋಗ ಗುಣ ಲಕ್ಷಣಗಳಿದ್ದವರು ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಾಲಿಸಿ. ಪ್ರತಿ ಯೊಂದು ಮನೆಯಲ್ಲೂ ಪಲ್ಸ್ ಆಕ್ಸಿ ಮೀಟರ್ ಇಟ್ಟುಕೊಂಡು, 2 ಗಂಟೆಗೊಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಅದು ಆಕ್ಸಿಜನ್ ಪ್ರಮಾಣ 94ಕ್ಕಿಂತ ಕಡಿಮೆಯಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿಕೊಡಿ ಎಂದು ಹೇಳಿದರು.

ಶೀಘ್ರ ಹೆಚ್ಚುವರಿ 700 ಆಕ್ಸಿಜನ್ ಬೆಡ್: ಸರ್ಕಾರಿ ಆಸ್ಪತ್ರೆಗಳಲ್ಲಿ 2 ಸಾವಿರ, ಖಾಸಗಿ ಆಸ್ಪತ್ರೆಗಳಲ್ಲಿ 3 ಸಾವಿರ ಹಾಗೂ ಜಯದೇವ ಇನ್ನಿತರ ಆಸ್ಪತ್ರೆಗಳಿಂದ 2 ಸಾವಿರ ಸೇರಿ ಮೈಸೂರಿನಲ್ಲಿ ಒಟ್ಟು 7 ಸಾವಿರ ಬೆಡ್ ವ್ಯವಸ್ಥೆಯಿದೆ. ಮೈಸೂರು ಮಾತ್ರವಲ್ಲದೆ ಬೆಂಗಳೂರು ಇನ್ನಿತರೆ ಜಿಲ್ಲೆಗಳಿಂದಲೂ ಜನ ಬರುತ್ತಿರುವುದರಿಂದ ಬೆಡ್ ಸಮಸ್ಯೆಯ ಜೊತೆಗೆ ನಿರ್ವಹಣೆಯಲ್ಲಿ ಒತ್ತಡ ಹೆಚ್ಚಿದೆ. ಅಗತ್ಯ ಇಲ್ಲದವರೂ ಆತಂಕದಿಂದ ಆಸ್ಪತ್ರೆಗಳಿಗೆ ಬಂದು ದಾಖಲಾಗುತ್ತಿದ್ದಾರೆ. ಅದಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಒಂದು ವಾರ ಅಥವಾ 10 ದಿನಗಳಲ್ಲಿ ಇನ್ನೂ 700 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆಯಾಗಲಿದೆ. ಟ್ರಾಮಾ ಕೇರ್ ಸೆಂಟರ್‍ನಲ್ಲಿರುವ 200 ಬೆಡ್‍ಗಳಲ್ಲಿ 60 ಬೆಡ್ ಮಾತ್ರ ಭರ್ತಿಯಾಗಿದ್ದು, ಇವರಲ್ಲಿ ಇಬ್ಬರು ವೆಂಟಿಲೇಟರ್ ನಲ್ಲಿದ್ದಾರೆ. ಈ ಕೇಂದ್ರದಲ್ಲಿ ಹೆಚ್ಚುವರಿ 200, ಪಕ್ಕದ ಪಿಕೆಟಿಬಿಯಲ್ಲಿ 100 ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 200 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ಕೆ.ಆರ್.ಆಸ್ಪತ್ರೆ ಸ್ಟೋನ್ ಬಿಲ್ಡಿಂಗ್ ಸರ್ಜಿಕಲ್ ವಾರ್ಡ್‍ನಲ್ಲಿ ಇನ್ನು 3 ದಿನಗಳಲ್ಲಿ ಹೆಚ್ಚುವರಿಯಾಗಿ 200 ಆಕ್ಸಿಜನ್ ಬೆಡ್‍ಗಳನ್ನು ಕಲ್ಪಿಸಲಾಗುವುದು. ಅಲ್ಲದೆ ಸದ್ಯ 17 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಾದ 20-25 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲದಿದ್ದರೂ ಅಗತ್ಯವಿದ್ದವರಿಗೆ ಮಾತ್ರ ಬಳಕೆ ಮಾಡುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ದಿನದಲ್ಲಿ ರಿಪೋರ್ಟ್: ಜಿಲ್ಲೆಯಲ್ಲಿ ನಿತ್ಯ ಸುಮಾರು 7 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಸಿಎಫ್‍ಟಿಆರ್‍ಐ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಈ ಎರಡೂ ಲ್ಯಾಬ್‍ಗಳ ನಾಲ್ವರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದ ಕಾರಣದಿಂದ ನೆಗೆಟಿವ್ ವರದಿಗಳನ್ನು ಅಪ್‍ಲೋಡ್ ಮಾಡುವುದು ತಡವಾಗುತ್ತಿತ್ತು. ಆದರೆ ಬೇರೆ ಸಿಬ್ಬಂದಿ ನಿಯೋಜಿಸಿ ರುವುದರಿಂದ ಇನ್ನು ಒಂದು ದಿನದಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಿದರು.

ಲಸಿಕೆ ಪಡೆಯಿರಿ: ಮೈಸೂರು ನಗರಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಉತ್ತಮವಾಗಿದ್ದು, ಜಿಲ್ಲೆಯಲ್ಲಿ ಶೇ.57ರಷ್ಟು ಸಾಧನೆಯಾಗಿದೆ. ಮೇ 1ರಿಂದ 18ರಿಂದ ಮೇಲ್ಪಟ್ಟವರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. 2 ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೂ ಆರೋಗ್ಯ ಪರಿಸ್ಥಿತಿ ಗಂಭೀರವಾಗುವುದಿಲ್ಲ. ದೇಶದಲ್ಲಿ ಈವರೆಗೂ ಒಂದೂ ಸಾವಿನ ಪ್ರಕರಣ ವರದಿ ಯಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Translate »