ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ
ಮೈಸೂರು

ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ

August 27, 2021

ಮೈಸೂರು,ಆ.೨೬(ಪಿಎಂ)-ಶ್ರೀ ನಿರಂಜನ ಮಠದ ಯಾವುದೇ ಒಂದು ಮೂಲೆಯಲ್ಲಿಯೂ ವಿವೇಕ ಸ್ಮಾರಕ ನಿರ್ಮಿಸಲು ಅವಕಾಶ ಕೊಡುವುದಿಲ್ಲ. ಸ್ಮಾರಕ ನಿರ್ಮಿಸಲು ನಮ್ಮ ವಿರೋಧ ವಿಲ್ಲ. ಆದರೆ ನಮ್ಮ ಜಾಗದಲ್ಲಿ ನಿರ್ಮಿಸುವುದಕ್ಕೆ ವಿರೋಧ ವಿದೆ ಎಂದು ಗದಗ ಜಿಲ್ಲೆಯ ಬಾಳೇಹೊಸೂರು ಶ್ರೀ ದಿಂಗಾ ಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಮಠದ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರನ್ನು ದೇವರ ಸಮಾನವಾಗಿ ಕಾಣುತ್ತೇವೆ. ಆದರೆ ಅವರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟ ಈ ಮಠವನ್ನೇ ಹಗಲು ದರೋಡೆ ಮಾಡುವ ಕೆಲಸ ನಡೆ ಯುತ್ತಿದೆ. ನಮ್ಮ ಸಮುದಾಯದ ಆಸ್ತಿಯಲ್ಲಿ ಯಾರೂ ಅಕ್ರಮ ಪ್ರವೇಶ ಮಾಡಲು ಅವಕಾಶವಿಲ್ಲ. ಅದಕ್ಕೆ ಪ್ರಯತ್ನ ಮಾಡಿ ಸ್ವಾಮಿ ವಿವೇಕಾನಂದರ ಹೆಸರಿಗೆ ಮಸಿ ಬಳಿಯಲು ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿರುವ ಬೋರ್ಡ್ ಮತ್ತು ಫೋಟೋಗಳನ್ನು ನೋಡಿ ದರೆ ಇದು ಹಗಲು ದರೋಡೆಕೋರರ ಕೆಲಸ ಎನ್ನಲೇಬೇಕು. `ನವೀಕೃತ ವಿವೇಕ ಸ್ಮಾರಕದ ಉದ್ಘಾಟನೆ’ ಎಂದು ಇಲ್ಲಿ ಫಲಕ ಹಾಕಿದ್ದು, ಇದು ವಿಕೃತಿಗಳ ಮೂರ್ಖತನಕ್ಕೆ ಸಾಕ್ಷಿಯಾಗಿದೆ. ಆ ಮೂಲಕ `ವಿಕೃತ ಅವಿವೇಕ ಸ್ಮಾರಕದ ಉದ್ಘಾಟನೆ’ ಮಾಡಲು ಇಲ್ಲಿ ಬಂದಿದ್ದಾರೆ. ಇದು ರಾಕ್ಷಸೀ ನಡೆಯಾಗಿದೆ ಎಂದು ಖಂಡಿಸಿದರು.

ವೀರಶೈವ ಲಿಂಗಾಯತರು ವೀರರೇ ಹೊರತು ಹೇಡಿಗಳಲ್ಲ. ನಮ್ಮ ಆಸ್ತಿ ಕಬಳಿಸಲು ಬಂದರೆ ಕೈ ಕಾಲು ತೆಗೆದು ಕಳುಹಿ ಸುತ್ತೇವೆ. ಈ ಹೋರಾಟದಲ್ಲಿ ನಾವು ಬೇಗನೆ ಯಶಸ್ಸು ಕಾಣ ಬೇಕು. ನಮ್ಮ ಅಮೂಲ್ಯವಾದ ಸಮಯ ಹೋರಾಟದಲ್ಲಿ ವ್ಯರ್ಥವಾಗಬಾರದು. ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟವನ್ನೇ ಮಾಡುತ್ತ ಕುಳಿತರೆ ನಮ್ಮ ಸಮುದಾಯ ನಷ್ಟಕ್ಕೆ ಒಳಗಾಗಲಿದೆ ಎಂದರು. ಮಠದಿಂದ ಡಿಸಿ ಕಚೇರಿ ವರೆಗೆ ಕಪ್ಪು ಪಟ್ಟಿ ಬಾಯಿಗೆ ಕಟ್ಟಿಕೊಂಡು ಪಾದಯಾತ್ರೆ ಮಾಡಬೇಕು. ಅದಕ್ಕೂ ಸ್ಪಂದಿಸದೇ ಇದ್ದರೆ ಮನೆಯ ಹೆಣ್ಣು ಮಕ್ಕಳನ್ನು ಕರೆತಂದು ಕಸ ಪೊರಕೆ ಹಿಡಿದು ಪ್ರತಿಭಟನೆ ನಡೆಸಬೇಕು. ಸಣ್ಣ ದನಿಗೆ ಕಿವಿಗೊಡುವ ಸರ್ಕಾರಗಳು ಇಂದಿಲ್ಲ. ಈ ಹೋರಾಟ ಉಗ್ರ ಸ್ವರೂಪ ತಾಳುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡದಿದ್ದರೆ ಒಳ್ಳೆಯದು ಎಂದು ಎಚ್ಚರಿಸಿದರು.

ಇರುವುದಕ್ಕೆ ಜಾಗ ಕೊಟ್ಟರೆ ನಮ್ಮದೇ ಎಂದು ಬಂದಿರುವ ಸಮಸ್ಯೆ ಇಲ್ಲಿ ಉದ್ಭವಿಸಿದೆ. ಸರ್ಕಾರ ಇದನ್ನು ಕೂಡಲೇ ಎಚ್ಚೆತ್ತುಕೊಂಡು ಬಗೆಹರಿಸಬೇಕು. ಯಾವುದೇ ಪರಿಸ್ಥಿತಿ ಬಂದರೂ ನಾವು ಜಗ್ಗುವುದಿಲ್ಲ. ವೀರಶೈವ ಲಿಂಗಾಯತ ಸಮುದಾಯದ ಸೌಜನ್ಯ ಹೆಚ್ಚಾಗಿ ದುರುಪಯೋಗವೇ ಆಗುತ್ತಿದೆ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಪಶ್ಚಿಮ ವಾಹಿನಿಯ ಬೇಬಿ ಮಠದ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಶ್ರೀ ನಿರಂಜನ ಮಠ ಅದರ ಮೂಲಸ್ವರೂಪದಲ್ಲೇ ಉಳಿಯಬೇಕು. ನಮ್ಮ ಈ ಮಠದ ಹಸ್ತಾಂತರ ಪ್ರಕ್ರಿಯೆಗೂ ಮುನ್ನ ಇದು ಯಾವ ಪರಂಪರೆಗೆ ಸೇರಿದೆ ಎಂದು ಸರ್ಕಾರ ಆಲೋಚನೆ ಮಾಡಬೇಕಿತ್ತು. ಆದರೆ ಹಾಗೇ ಮಾಡದೇ ತಪ್ಪು ಮಾಡಲಾಗಿದೆ. ಈಗ ಆ ತಪ್ಪನ್ನು ಸರಿಪಡಿಸುವ ಕೆಲಸವನ್ನು ಶೀಘ್ರವೇ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಮಠದ ಆವರಣದಲ್ಲಿ ದಕ್ಷಿಣಮೂರ್ತಿ ವಿಗ್ರಹ ವಿರೂಪ ಗೊಳಿಸಿರುವುದು ಅಪರಾಧದ ಕೆಲಸ. ಸ್ಮಾರಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಸಮುದಾಯದ ಜಾಗ ದಲ್ಲಿ ಅದಕ್ಕೆ ಅವಕಾಶ ನೀಡಲಾಗದು ಎಂದರು. ಬೆಟ್ಟದ ಪುರ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹುಣಸೂರು ತಾಲೂಕು ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಪತಂಜಲಿ ಯೋಗ ಕೇಂದ್ರದ ಪ್ರಕಾಶಜೀ, ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್.ಲೋಕೇಶ್ ಸೇರಿ ದಂತೆ ಸಮುದಾಯದ ಮುಖಂಡರು ಹಾಜರಿದ್ದರು.

Translate »