ಮೈಸೂರು-ಬೆಂಗಳೂರು ದಶಪಥ ರಸ್ತೆ ದಸರಾಗೆ ರೆಡಿ
ಮೈಸೂರು

ಮೈಸೂರು-ಬೆಂಗಳೂರು ದಶಪಥ ರಸ್ತೆ ದಸರಾಗೆ ರೆಡಿ

December 9, 2021

ಮೈಸೂರು, ಡಿ. 8- ಬಹು ನಿರೀಕ್ಷಿತ ಮೈಸೂರು ಮತ್ತು ಬೆಂಗಳೂರು ನಡುವಿನ ದಶಪಥ ಬೃಹತ್ ಯೋಜನೆಯು 2022ರ ದಸರಾ ಮಹೋತ್ಸವದೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈಗಾಗಲೇ ತಿಳಿಸಿದ್ದಾರೆ.
ಬೆಂಗಳೂರನ್ನು ಹೊರತುಪಡಿಸಿದರೆ ಅತೀ ವೇಗವಾಗಿ ಬೆಳೆಯುತ್ತಿರುವ ರಾಜ್ಯದ ಎರಡನೇ ನಗರವಾಗಿರುವ ಮೈಸೂರಿನ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿ ಕೊಂಡು ಕೈಗೆತ್ತಿಕೊಂಡಿರುವ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮರೋಪಾದಿ ನಡೆಯುತ್ತಿದ್ದು, ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಎರಡೂ ಕಡೆ ಸರ್ವಿಸ್ ರಸ್ತೆ ಸೇರಿ 10 ಪಥದ ಹೆದ್ದಾರಿ ಯೋಜನೆಗೆ ಆರಂಭ ದಲ್ಲಿ 8,172 ಕೋಟಿ ಅಂದಾಜು ವೆಚ್ಚ ನಿರ್ಧರಿಸಲಾಗಿತ್ತು. ಈ ಮಾರ್ಗದಲ್ಲಿ ಬರುವ ನದಿಗಳಿಗೆ ಅಡ್ಡಲಾಗಿ ಬೃಹತ್ ಸೇತುವೆ, ರೈಲು ಮೇಲು ಸೇತುವೆ, ಅಂಡರ್‍ಪಾಸ್, ರೆಸ್ಟ್ ಏರಿಯಾ, 6 ಕಡೆ ಎಂಟ್ರಿ ಮತ್ತು ಎಗ್ಸಿಟ್ ವ್ಯವಸ್ಥೆ ಮಾಡಬೇಕಿರುವ ಕಾರಣ 1300 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದು, ಒಟ್ಟಾರೆ ಈ ಬೃಹತ್ ಹೆದ್ದಾರಿ ಯೋಜ ನೆಗೆ 9,500 ಕೋಟಿ ರೂ. ಖರ್ಚಾಗುತ್ತಿದೆ.

117.304 ಕಿ.ಮೀ. ರಸ್ತೆ: ಮೈಸೂರು-ಬೆಂಗಳೂರು ನಡುವೆ 117.304 ಕಿ.ಮೀ. ಉದ್ದದ ದಶಪಥ ರಸ್ತೆಯನ್ನು ಎರಡು ಪ್ಯಾಕೇಜ್‍ಗಳಾಗಿ ಮಾಡಿ ಮೊದಲ ಪ್ಯಾಕೇಜ್‍ನಲ್ಲಿ ಬೆಂಗಳೂರಿನಿಂದ ನಿಡ ಘಟ್ಟದವರೆಗೆ 56.20 ಕಿ.ಮೀ. ಹಾಗೂ ನಿಡಘಟ್ಟದಿಂದ ಮೈಸೂರುವರೆಗೆ ಕಾಮ ಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಭೂಸ್ವಾಧೀನಕ್ಕೆ 3,593 ಕೋಟಿ ರೂ.: ದಶಪಥ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಗೊಳಿಸಲು ಅಗತ್ಯವಿದ್ದ ಹೆಚ್ಚು ವರಿ ಭೂಮಿ ಸ್ವಾಧೀನಪಡಿಸಿಕೊಂಡು ಪರಿ ಹಾರವಾಗಿ ಒಟ್ಟು 3,593 ಕೋಟಿ ರೂ. ಗಳನ್ನು ಭೂ ಮಾಲೀಕರಿಗೆ ಪಾವತಿಸಲಾಗಿದೆ. ಬೆಂಗಳೂರು-ನಿಡಘಟ್ಟದವರೆಗೆ 2,288 ಕೋಟಿ ರೂ. ಹಾಗೂ ನಿಡಘಟ್ಟದಿಂದ ಮೈಸೂರುವರೆಗೆ 1,305 ಕೋಟಿ ರೂ. ಭೂಸ್ವಾಧೀನಕ್ಕೆ ಖರ್ಚಾಗಿದೆ.
ಸಿವಿಲ್ ಕಾಮಗಾರಿಗೆ 4,473 ಕೋಟಿ ರೂ.: ಮೈಸೂರು-ಬೆಂಗಳೂರು ನಡುವಿನ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಿವಿಲ್ ಕಾಮಗಾರಿಗೆ ಒಟ್ಟು 4,473 ಕೋಟಿ ರೂ. ವೆಚ್ಚವಾಗುತ್ತಿದ್ದು, ಮೊದಲ ಪ್ಯಾಕೇಜ್‍ಗೆ 2,190 ಕೋಟಿ ರೂ. ಮತ್ತು ಎರಡನೇ ಪ್ಯಾಕೇಜ್ ಸಿವಿಲ್ ಕೆಲಸಕ್ಕೆ 2,283 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ.

7 ಮೀ. ಅಗಲದ ಸರ್ವಿಸ್ ರಸ್ತೆ: ಈ ಹೆದ್ದಾರಿ ಎರಡೂ ಕಡೆಗಳಲ್ಲಿ 7 ಮೀಟರ್ ಅಗಲದ ಸರ್ವೀಸ್ ರಸ್ತೆ ನಿರ್ಮಿಸಿದ್ದು, ನಡುವೆ ಬಿಡದಿ ಬಳಿ 7 ಕಿ.ಮೀ., ರಾಮನಗರ-ಚನ್ನ ಪಟ್ಟಣ ಬಳಿ 22.35 ಕಿ.ಮೀ., ಮಂಡ್ಯ ಬಳಿ 10.04 ಕಿ.ಮೀ. ಹಾಗೂ ಶ್ರೀರಂಗಪಟ್ಟಣ ಸಮೀಪ 8.19 ಕಿ.ಮೀ. ಉದ್ದದ ಬೈಪಾಸ್‍ಗೆ 62.07 ಕೋಟಿ ರೂ. ಹಣ ಖರ್ಚಾಗುತ್ತಿದೆ.

9 ಬೃಹತ್ ಸೇತುವೆಗಳು: ಈ ಮಾರ್ಗ ದಲ್ಲಿ 9 ಬೃಹತ್ ಸೇತುವೆಗಳು, 44 ಸಣ್ಣ ಸೇತುವೆಗಳು, 8.07 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ, 4 ರೈಲು ಮೇಲ್ಸೇತುವೆ, 28 ವೆಹಿಕುಲರ್ ಅಂಡರ್‍ಪಾಸ್, 8 ವೆಹಿ ಕುಲರ್ ಓವರ್‍ಪಾಸ್, 13 ಲೈಟ್ ವೆಹಿ ಕುಲರ್ ಅಂಡರ್‍ಪಾಸ್, 13 ಪಾದಚಾರಿಗಳ ಅಂಡರ್‍ಪಾಸ್, 1 ರೆಸ್ಟ್ ಏರಿಯಾ, 3 ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗುತ್ತಿದೆ.

ಶೇ.80ರಷ್ಟು ಕಾಮಗಾರಿ: ಮಹತ್ವದ ಈ ಹೆದ್ದಾರಿಯ ಶೇಕಡ 80ರಷ್ಟು ಕಾಮ ಗಾರಿ ಪೂರ್ಣಗೊಂಡಿದ್ದು, ಉಳಿದ ಕೆಲಸವು ಮುಂದಿನ ವರ್ಷದ ದಸರಾ ವೇಳೆಗೆ ಪೂರೈಸುವ ಉದ್ದೇಶವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣ ಸಮಯ ಕಡಿತ: ಈಗ ಕನಿಷ್ಠ 3 ಗಂಟೆ ತೆಗೆದುಕೊಳ್ಳುವ ಮೈಸೂರು-ಬೆಂಗಳೂರು ನಗರಗಳ ನಡುವಿನ ಪ್ರಯಾಣ ಸಮಯವು ದಶಪಥ ರಸ್ತೆ ಪ್ರಯಾಣದಲ್ಲಿ 90 ನಿಮಿಷಕ್ಕೆ ಕಡಿತಗೊಳ್ಳಲಿದೆ. ಯಾವುದೇ ಅಡಚಣೆಯಿಲ್ಲದೇ ಕ್ಷಿಪ್ರಗತಿಯಲ್ಲಿ ಸಾಗ ಬಹುದಾಗಿರುವುದರಿಂದ ಈ ಯೋಜನೆ ಸಾರ್ವಜನಿಕರಿಗೆ ವರದಾನವಾಗಲಿದೆ.

 

Translate »