`ಚರಿತ್ರೆ’ ಗತಿಸಿದ ಘಟನೆಯಷ್ಟೇ ಅಲ್ಲ, ಮರುಹುಟ್ಟು ಪಡೆಯುವ ಬೀಜವೂ ಹೌದು
ಮೈಸೂರು

`ಚರಿತ್ರೆ’ ಗತಿಸಿದ ಘಟನೆಯಷ್ಟೇ ಅಲ್ಲ, ಮರುಹುಟ್ಟು ಪಡೆಯುವ ಬೀಜವೂ ಹೌದು

December 27, 2021

ಮೈಸೂರು,ಡಿ.26(ಪಿಎಂ)-ಚರಿತ್ರೆ ಎಂಬುದು ಕೇವಲ ಗತಿಸಿದ ಘಟನೆ ಮಾತ್ರವಲ್ಲ. ಜೊತೆಗೆ ಅದು ಮತ್ತೆ ಮತ್ತೆ ಮರುಹುಟ್ಟು ಪಡೆಯುವ ಬೀಜವೂ ಹೌದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನ ದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂವಹನ ಪ್ರಕಾಶನದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂ ಡಿದ್ದ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ ಅವರ `ಬಂಗಾರದೊಡ್ಡಿ (ಚಾರಿತ್ರಿಕ ಕಾದಂ ಬರಿ)’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭೂತಕಾಲದ ಬೆಳಕು ಮತ್ತು ಜೀವನ ಪ್ರೀತಿಯು ವರ್ತ ಮಾನದಲ್ಲಿ ಮರು ರೂಪ ಪಡೆದಂತೆ ಈ ಕೃತಿ ನಂಬಿಕೆ ಮತ್ತು ಭರವಸೆ ಮೂಡಿಸುತ್ತದೆ. ಚರಿತ್ರೆ ಎಂದಾಕ್ಷಣ ಮುಗಿದ ಘಟನೆ ಎಂದುಕೊಳ್ಳುವುದಲ್ಲ. ಬದಲಿಗೆ ಅದು ಮತ್ತೆ ಮತ್ತೆ ಮರುಹುಟ್ಟು ಪಡೆಯುವ ಬೀಜವೂ ಹೌದು. ಹಾಗಾಗಿ ಬಂಗಾರದೊಡ್ಡಿ ಚರಿತ್ರೆಯ ಭಾಗ ಮಾತ್ರವಲ್ಲದೇ ನಿರಂತರತೆಯನ್ನೂ ಒಳಗೊಂಡಿದೆ. `ಬಂಗಾರದೊಡ್ಡಿ’ ಚಾರಿತ್ರಿಕ ವಸ್ತು ವಿಷಯ ಒಳಗೊಂಡ ಸೃಜನ ಶೀಲ ಕಾದಂಬರಿ. ಇದು ಶ್ರೀಸಾಮಾನ್ಯರ ಅಸಾಮಾನ್ಯ ಸಂಗತಿ -ಸಾಧನೆ ತಿಳಿಸುವ ಕಾದಂಬರಿಯಾಗಿದೆ ಎಂದು ತಿಳಿಸಿದರು.

ಮೈಸೂರು ರಾಜ್ಯವನ್ನು 1638ರಿಂದ 1659ರವರೆಗೆ ಆಳ್ವಿಕೆ ಮಾಡಿದ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಖಾಸಾ ವೇಶ್ಯೆ ಬಂಗಾರದೊಡ್ಡಿ (ದೊಡ್ಡಮ್ಮ). ಬಂಗಾರದೊಡ್ಡಿ ತನ್ನ ವ್ಯಕ್ತಿತ್ವದಿಂದ ಸಮಾಜಕ್ಕೆ ಆದರ್ಶವಾದವಳು. ಕಂಠೀರವ ನರಸರಾಜ ಒಡೆಯರ್ ಅವರಿಗೆ ಹಲವು ಪತ್ನಿಯರು ಇದ್ದರು. ಆದರೆ ಅವರ್ಯಾರ ಮೇಲೂ ಈ ಕಾದಂಬರಿ ರಚನೆಯಾಗಿಲ್ಲ. ಬದಲಿಗೆ ರಣಧೀರರ ಬಂಗಾರದವಳು (ಪ್ರೇಯಸಿ) ಆಗಿದ್ದಂ ತಹ ದೊಡ್ಡಮ್ಮ ಎಂಬ ಮಹಿಳೆ ಮೇಲೆ ಕಾದಂಬರಿ ರಚನೆ ಯಾಗಿದ್ದು, ಇದಕ್ಕೆ ಅವಳು ದೇವದಾಸಿ ಎಂಬುದು ಕಾರಣವಲ್ಲ. ಆಕೆಯ ಉದಾತ್ತ ಚಿಂತನೆಯ ಆಲೋಚನಾ ಕ್ರಮದಿಂದ ಈ ಕಾದಂಬರಿಯ ಮುಖ್ಯ ಪಾತ್ರವಾಗಿದ್ದಾಳೆ ಎಂದು ಹೇಳಿದರು.ಮನುಷ್ಯ ಎಲ್ಲೇ ಹುಟ್ಟಿದ್ದರೂ ಅದು ಮುಖ್ಯವಲ್ಲ. ಅವನ ಆಲೋಚನೆಯ ಕ್ರಮ ಮತ್ತು ಸಾಧನೆಯ ಪರಿಣಾಮವಾಗಿ ಒಬ್ಬ ಮನುಷ್ಯ ಚರಿತ್ರೆಯಲ್ಲಿ ಅವಿಸ್ಮರಣೀಯವಾಗಿ ಉಳಿ ಯುತ್ತಾನೆ. ಅದಕ್ಕೆ ಬಂಗಾರದೊಡ್ಡಿ ಪಾತ್ರವೇ ನೈಜ ಉದಾ ಹರಣೆ ಎಂದರು. ಈಗ ಬಂಗಾರದೊಡ್ಡಿ ನಾಲೆಯ (ಶ್ರೀರಂಗ ಪಟ್ಟಣದ ಬಳಿಯ ನಾಲೆ) ಹೆಸರು. ಬಂಗಾರದೊಡ್ಡಿ, ಅನ್ಯರ ಒತ್ತಡಕ್ಕೆ ಒಳಗಾಗಿ ತಿರುಚನಾಪಳ್ಳಿಯಿಂದ ಮೈಸೂರಿಗೆ ಬಂದ ದೇವದಾಸಿಯ ಕುಲದವಳು. ಈಕೆಯ ಸೌಂದರ್ಯ ದಿಂದ ರಣಧೀರ ಕಂಠೀರವರನ್ನು ಆಕರ್ಷಿಸಿ, ಕೊಲ್ಲಬೇ ಕೆಂದು ತಿರುಚನಾಪಳ್ಳಿಯ ರಾಜ ತಿರುಮಲನಾಯಕ ಈಕೆ ಯನ್ನು ಕಳುಹಿಸುತ್ತಾನೆ. ಆದರೆ ಆಕೆಯ ಆಲೋಚನಾ ಕ್ರಮ ಅವಳ ಬದುಕಿನಲ್ಲಿ ಉನ್ನತ ಬದಲಾವಣೆ ತರುತ್ತದೆ. ನಮ್ಮ ಆಲೋಚನೆಗಳು ಉನ್ನತವಾಗದ ಹೊರತು, ಬದುಕಿನಲ್ಲಿ ಉನ್ನತ ಬದಲಾವಣೆಯಾಗದು ಎಂದು ತಿಳಿಸಿದರು.

ಬಂಗಾರದೊಡ್ಡಿಯ ವ್ಯಕ್ತಿತ್ವವನ್ನು ವರ್ತಮಾನಕ್ಕೆ ಒಗ್ಗುವಂತೆ ಮತ್ತು ಭವಿಷ್ಯಕ್ಕೆ ಬೇಕಾದಂತೆ ಈ ಕಾದಂಬರಿಯಲ್ಲಿ ರೂಪಿಸ ಲಾಗಿದೆ. ಸಾಂಸ್ಕøತಿಕ ಸೌಂದರ್ಯ ಇಲ್ಲದೇ ದೇಹ ಸೌಂದರ್ಯವು ಆತ್ಮಸೌಂದರ್ಯವಾಗಿ ರೂಪಾಂತರಗೊಳ್ಳುವುದಿಲ್ಲ. ದೇವ ದಾಸಿಯ ಬದುಕು ಚಿತ್ರಿಸುವಾಗ, ದೇಹ ಸೌಂದರ್ಯವನ್ನೇ ಬಹಳ ಮುಖ್ಯ ಎಂದು ಪರಿಭಾವಿಸುವ ಲೌಕಿಕ ಬದುಕಿನ ನಡುವೆ ಅಂತಹ ಪಾತ್ರದ ಆತ್ಮಸೌಂದರ್ಯವನ್ನು ಸಾಂಸ್ಕøತಿಕ ಸೌಂದರ್ಯ ದಿಂದ ಲೇಖಕರು ಅನಾವರಣ ಮಾಡಿದ್ದಾರೆ. ಇಡೀ ಕಾದಂಬರಿ ಯಲ್ಲಿ ಎಲ್ಲಿಯೂ ಅಶ್ಲೀಲತೆ ಸುಳಿಯದಂತೆ ಲೇಖಕರು ಎಚ್ಚರ ವಹಿಸಿದ್ದಾರೆ ಎಂದರು.

ಕೊಲ್ಲಬೇಕೆಂದು ಆಜ್ಞೆಯನ್ನು ಆಕೆ ಆಲೋಚಿಸಿದಾಗ, `ಒಂದು ಜೀವಕ್ಕೆ ಜೀವ ಕೊಡುವ ಹೆಣ್ಣು, ಇನ್ನೊಂದು ಜೀವ ವನ್ನು ತೆಗೆಯುವುದು ಎಂದರೆ ಸರಿಯೇ?’ ಎಂಬ ಪ್ರಶ್ನೆ ಆ ತರುಣಿಯ ಮನಸ್ಸನ್ನು ತಲ್ಲಣಗೊಳಿಸುತ್ತದೆ. ಆ ಮೂಲಕ `ಜೀವದ ಉದ್ದೇಶ ಜೀವ ಕೊಡುವುದಾಗಬೇಕೇ ಹೊರತು ಜೀವ ತೆಗೆಯುವುದಲ್ಲ’ ಎಂಬುದು ಕಾದಂಬರಿಯಲ್ಲಿ ನಿರೂಪಿತ ವಾಗಿದೆ. ಕಾದಂಬರಿಯಲ್ಲಿ ನೀರು ಬಹುಮುಖ್ಯ ಪಾತ್ರ ವಹಿಸು ತ್ತದೆ. ಬಂಗಾರದೊಡ್ಡಿಯು ರೈತರ ಬದುಕು ಹಸನಾಗಬೇಕೆಂಬ ಆಕಾಂಕ್ಷೆ ಹೊಂದಿ, ನಾಲೆ ನಿರ್ಮಾಣಕ್ಕೆ ರಾಜರಲ್ಲಿ ಪ್ರೇರೇಪಣೆ ಯಾಗುತ್ತಾಳೆ. ಇದು ನಿಜವಾದ ದೇವದಾಸತ್ವ ಎಂದರು.

`ದೇವದಾಸಿ’ ಎಂಬುದಕ್ಕೆ ವೇಶ್ಯೆ ಎಂಬ ಅರ್ಥ ತಂದಿಡ ಲಾಗಿದೆ. ದೇವರಿಗೆ ದಾಸರಾಗಬೇಕಾದವರನ್ನು ಹೀಗೆ ಬೇರೆ ಬೇರೆಯವರಿಗೆ ದಾಸರಾಗಿಸಿದರೆ ದಾಸತ್ವದ ಪರಿಕಲ್ಪನೆ ಪತನ ವಾಗುತ್ತದೆ. ವೇಶ್ಯೆ ಎಂದು ತಿರಸ್ಕಾರಕ್ಕೆ ಒಳಗಾದ ಒಬ್ಬ ಹೆಣ್ಣು ಮಗಳು (ಬಂಗಾರದೊಡ್ಡಿ) ಲೋಕ ಕಲ್ಯಾಣಕ್ಕೆ ಕಾರಣವಾಗಿ ದ್ದಾಳೆ. ಅಂದಮೇಲೆ ಗರ್ತಿಯರು, ಪ್ರಭುಗಳು, ರಾಜರು ಎಷ್ಟೆಲ್ಲಾ ಲೋಕ ಕಲ್ಯಾಣ ಮಾಡಲು ಅವಕಾಶವಿದೆ ಅಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಆತ್ಮಸಾಕ್ಷಿ ಮೇಲೆ ಬಂಗಾರದೊಡ್ಡಿಯ ಬದುಕು ನಡೆದಿದೆಯೇ ಹೊರತು ಲೋಕಸಾಕ್ಷಿಯ ಮೇಲಲ್ಲ ಎಂದು ವಿಶ್ಲೇಷಿಸಿದರು.
ಇದೇ ವೇಳೆ ಸಂವಹನ ಪ್ರಕಾಶನದ 2022ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಡಾ.ಸಿಪಿಕೆ) ಮತ್ತು ಹಿರಿಯ ವೈದ್ಯ ಡಾ.ಬಿ.ಗುರುಬಸವರಾಜ ಕೃತಿಯ ಗೌರವ ಪ್ರತಿ ಸ್ವೀಕ ರಿಸಿದರು. ಕೃತಿ ಕುರಿತು ಹಿರಿಯ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ ಮತ್ತಿತರರು ಹಾಜರಿದ್ದರು.

Translate »