ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಒತ್ತುವರಿ ಮಾಡಿ ಕಾಫಿ ಬೆಳೆದವರಿಗೆ ಸದರಿ ಭೂಮಿ ೩೦ ವರ್ಷಕ್ಕೆ ಗುತ್ತಿಗೆ
ಮೈಸೂರು

ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಒತ್ತುವರಿ ಮಾಡಿ ಕಾಫಿ ಬೆಳೆದವರಿಗೆ ಸದರಿ ಭೂಮಿ ೩೦ ವರ್ಷಕ್ಕೆ ಗುತ್ತಿಗೆ

May 5, 2022

ಕಂದಾಯ ಸಚಿವ ಆರ್.ಅಶೋಕ್ ಘೋಷಣೆ
ಅರಣ್ಯ ಇಲಾಖೆ ವಶದಲ್ಲಿರುವ ೬ ಲಕ್ಷ ಹೆಕ್ಟೇರ್ ಭೂಮಿ ಕಂದಾಯ ಇಲಾಖೆ ವಶಕ್ಕೆ

ಬೆಂಗಳೂರು, ಮೇ ೪(ಕೆಎಂಶಿ)- ಅರಣ್ಯ ಇಲಾಖೆ ವಶದಲ್ಲಿರುವ ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಲಾಗಿದ್ದು, ಉಳುಮೆದಾರ ರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂದಾಯ ಭೂಮಿ ಒತ್ತುವರಿ ಮಾಡಿ ಕಾಫಿ ತೋಟ ಮಾಡಿಕೊಂಡಿರುವ ೯೨ ಸಾವಿರ ಎಕರೆ ಭೂಮಿಗೂ ತಾತ್ಕಾಲಿಕ ಮೋಕ್ಷ ದೊರೆತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ೧೨ ಸಾವಿರ, ಹಾಸನದಲ್ಲಿ ೩೫ ಹಾಗೂ ಚಿಕ್ಕಮಗ ಳೂರಿನಲ್ಲಿ ೪೫ ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕೊಂಡು ೪೦ ಸಾವಿರ ಮಂದಿ ತೋಟ ಮಾಡಿಕೊಂಡಿದ್ದಾರೆ. ಈ ಭೂಮಿಯನ್ನು ಸರ್ಕಾರದ ಸ್ಥಳವೆಂದು ಘೋಷಣೆ ಮಾಡಿ ಸಾಗುವಳಿ ಮಾಡಿಕೊಂಡಿರುವವರಿಗೆ ೩೦ ವರ್ಷಗಳ ಕಾಲ ಭೂಮಿಯನ್ನು ಲೀಸ್ ಕೊಡಲಾಗಿದೆ. ಆದರೆ, ಸಣ್ಣ, ಮಧ್ಯಮ
ಹಾಗೂ ದೊಡ್ಡ ಹಿಡುವಳಿದಾರರು ಎಕರೆಗೆ ಇಂತಿಷ್ಟು ಎಂದು ವಾರ್ಷಿಕ ಬಾಡಿಗೆ ಪಾವತಿಸಬೇಕು ಎಂದರು. ನೂರಾರು ವರ್ಷಗಳಿಂದ ಇದ್ದ ವಿವಾದಕ್ಕೆ ತೆರೆ ಎಳೆದಿರುವುದಲ್ಲದೆ, ಸರ್ಕಾರಿ ಆಸ್ತಿಯನ್ನು ಗಟ್ಟಿ ಮಾಡಿಕೊಂಡಿದ್ದೇವೆ. ಮೈಸೂರು, ಚಾಮರಾಜನಗರ,ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬಗರ್‌ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ. ಅರಣ್ಯ ಇಲಾಖೆಯ ವಶದಲ್ಲಿ ಆರು ಲಕ್ಷ ಹೆಕ್ಟೇರ್‌ನಷ್ಟು ಭೂಮಿ ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು ಮೂಲತಃ ಇದು ಕಂದಾಯ ಇಲಾಖೆಗೆ ಸೇರಿದ್ದು ಎಂದರು. ಉಳುಮೆದಾರರು ೧೫ ವರ್ಷಕ್ಕಿಂತ ಹೆಚ್ಚು ಕಾಲದಿಂದ ಉಳುಮೆ ಮಾಡುತ್ತಿದ್ದರೆ ಅಂಥವರಿಗೆ ಹಕ್ಕುಪತ್ರ ನೀಡಲು ೭೯ಎಗೆ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.

Translate »