ಚಾಮರಾಜನಗರ ಜಿಲ್ಲೆಯಲ್ಲಿವರುಣನ ಅಟ್ಟಹಾಸ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿವರುಣನ ಅಟ್ಟಹಾಸ

September 6, 2022

ಚಾಮರಾಜನಗರ, ಸೆ.5-ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದುವರೆ ದಿದ್ದು, ಜಿಲ್ಲೆಯ ಚಿತ್ರಣವೇ ಬದಲಾ ಗಿದೆ. ಭಾನುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗುಂಡ್ಲು ಪೇಟೆ ತಾಲೂಕಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಗಾಯ ಗೊಂಡಿದ್ದಾರೆ. ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದ ಬೆಳೆ ನಾಶವಾಗಿದ್ದರೆ, ಒಳ ಹರಿವು ಹೆಚ್ಚಳದಿಂದ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕ ಹೊಳೆ ಜಲಾಶಯಗಳಿಂದ ಅಪಾರ ಪ್ರಮಾಣ ದಲ್ಲಿ ಹೊರ ನೀರು ಬಿಟ್ಟಿದ್ದು, ಹಲವು ಗ್ರಾಮ ಗಳು ಜಲಾವೃತಗೊಂಡಿವೆ. ಸಾವಿರಾರು ಎಕರೆ ಫಸಲು ಕೊಚ್ಚಿಹೋಗಿ, ಲಕ್ಷಾಂತರ ರೂ. ಬೆಳೆ ನಷ್ಟವಾಗಿವೆ.

ಗೋಡೆ ಕುಸಿದು ವ್ಯಕ್ತಿ ಸಾವು: ಭಾನು ವಾರ ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿವರೆಗೆ ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಸುರಿಯಿತು. ಇದರಿಂದ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮ ದಲ್ಲಿ ಮನೆ ಗೋಡೆ ಕುಸಿದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ಮೂರ್ತಿ (33) ಮೃತಪಟ್ಟಿದ್ದಾರೆ.

ಮನೆಯ ಮುಂಭಾಗ ಮೂರ್ತಿ ಹಾಗೂ ಅವರ ತಾಯಿ ದೇವಜಮ್ಮ ಮಲಗಿದ್ದರು ಎನ್ನಲಾಗಿದೆ. ಜೋರು ಮಳೆ ಪರಿಣಾಮ ಇವರಿಬ್ಬರು ಮನೆಯ ಒಳಗೆ ತೆರಳಿ ಮಲಗಿದ್ದರು. ಈ ವೇಳೆ ಸತತ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದು ಮೂರ್ತಿ ಮೃತಪಟ್ಟಿದ್ದಾರೆ, ಅದೃಷ್ಟವಶಾತ್ ದೇವಜಮ್ಮ ಪ್ರಾಣಾಪಾಯದಿಂದ ಪಾರಾದರು.

ಬೈಕ್ ಸವಾರರ ರಕ್ಷಣೆ: ಜಲಾವೃತಗೊಂಡ ಸೇತುವೆ ಮೇಲೆ ತೆರಳುವಾಗ ನೆರೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಹೊಂಗನೂರಿನಲ್ಲಿ ಯುವಕನೋರ್ವ ಜೀವದ ಹಂಗು ತೊರೆದು ರಕ್ಷಿಸಿದ್ದಾನೆ. ತಾಲೂಕಿನ ಸಿದ್ದಯ್ಯನಪುರದ ಇಬ್ಬರು ಬೈಕ್‍ನಲ್ಲಿ ಮಸಣಾಪುರದಿಂದ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಹೊಂಗನೂರು ಗ್ರಾಮದ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದರೂ ಬೈಕ್ ಚಲಾಯಿಸಿ ಸಾಗುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಗ್ರಾಮದ ಯುವಕ ಶಿವು ತಕ್ಷಣವೇ ನೀರಿಗೆ ಧುಮುಕಿ ಇಬ್ಬರನ್ನು ರಕ್ಷಿಸಿದ್ದಾರೆ.

ಮರ ಏರಿದ ರೈತ: ಭಾರೀ ಮಳೆಯಿಂದ ನೆರೆ ಉಂಟಾಗಿ ಚಾ.ನಗರ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ರೈತ ರಂಗಸ್ವಾಮಿ ನಾಯಕ(60) ಜೀವ ರಕ್ಷಣೆಗಾಗಿ ಮರವೇರಿ ಕುಳಿತಿದ್ದಾರೆ. ಸೋಮವಾರ ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದ್ದರು. ಸಂಜೆಯ ಹೊತ್ತಿಗೆ ನೆರೆ ಉಂಟಾಗಿದೆ. ಇದರಿಂದ ರಂಗಸ್ವಾಮಿ ಮನೆಗೆ ಹಿಂದಿರುಗಲು ಸಾಧ್ಯವಾಗಿದೇ ರಂಗಸ್ವಾಮಿ ತೆಂಗಿನ ಮರ ಏರಿ ಕುಳಿತಿದ್ದಾರೆ. ಅಗ್ನಿಶಾಮಕ ಠಾಣೆಗೆ ಸಂಜೆ ಕಾರ್ಯಾಚರಣೆ ನಡೆಸಿದರೂ ಅವರನ್ನು ಸುರಕ್ಷಿತಸ್ಥಳಕ್ಕೆ ಕರೆತರಲು ಸಾಧ್ಯವಾಗಿಲ್ಲ.

ಜಿಲ್ಲೆಯ ಚಿತ್ರಣವೇ ಬದಲು: ಕಳೆದ ಎರಡು-ಮೂರು ತಿಂಗಳಿಂದ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಬೀಳುತ್ತಿದೆ. ಇತ್ತೀಚಿನ ಹಲವು ವರ್ಷಗಳಲ್ಲಿ ಇಷ್ಟು ಜೋರು ಮಳೆ ಇದೇ ಮೊದಲು. ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಇಪ್ಪತ್ತು-ಮೂವತ್ತು ವರ್ಷಗಳಿಂದ ತುಂಬದೇ ಇದ್ದ ಕೆರೆಗಳೂ ತುಂಬಿವೆ. ಗ್ರಾಮ-ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದ್ದು, ಜಿಲ್ಲೆಯ ಚಿತ್ರಣವೇ ಬದಲಾಗುವಂತೆ ಮಾಡಿದೆ.

ಅಪಾರ ಪ್ರಮಾಣದ ನೀರು ಹೊರಕ್ಕೆ :ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಾದ ಕಾರಣ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ. ಸೋಮವಾರ ಬೆಳಗಿನ ಜಾವ 3 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ 18 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು. ನಂತರ ಒಳ ಹರಿವು ಕಡಿಮೆ ಆದ ಕಾರಣ 14,200 ಕ್ಯೂಸೆಕ್‍ಗೆ ಇಳಿಸಲಾಯಿತು.

ಹಲವು ಗ್ರಾಮಗಳು ಜಲಾವೃತ: ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದ ಜನ ಭಾರೀ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಗ್ರಾಮದ ಒಂದೆರಡು ಬಡಾವಣೆಗಳನ್ನು ಹೊರತುಪಡಿಸಿ ಉಳಿದಲ್ಲವೂ ಜಲಾವೃತವಾಗಿವೆ. ಅಲ್ಲದೆ ಕೋಡಿಮೋಳೆ, ಹೆಬ್ಬಸೂರು, ಹರದನಹಳ್ಳಿ, ನಲ್ಲೂರು, ನಾಗವಳ್ಳಿ, ಆಲೂರು, ಹೊಮ್ಮ, ಕಣ್ಣೇಗಾಲ ಸೇರಿದಂತೆ ಹಲವು ಗ್ರಾಮಗಳು ಭಾಗಶಃ ಮುಳುಗಿವೆ.

ಸಂಪರ್ಕ ಬಂದ್: ಕೋಡಿಮೋಳೆ, ಕಾಗಲವಾಡಿ ಮೋಳೆ, ಆಲೂರು ಹೊಮ್ಮ, ದೊಡ್ಡಮೋಳೆ, ಕಾಳನಹುಂಡಿ ಗ್ರಾಮದಗಳಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಸ್ಥಗಿತಗೊಂಡು ಜನರು ಪರದಾಡಿದರು.

ಅಪಾಯ ಮಟ್ಟದಲ್ಲಿ ಕೆರೆಗಳು: ಜಿಲ್ಲೆಯ ಅನೇಕ ಕೆರೆ-ಕಟ್ಟೆಗಳು ಅಪಾಯದ ಮಟ್ಟ ತಲುಪಿವೆ. ಹರದನಳ್ಳಿ ಸಮೀಪದ ಮರಗದ ಕೆರೆ ಉಕ್ಕಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ನೀರು ಚಿಕ್ಕಕೆರೆ ಹಾಗೂ ದೊಡ್ಡ ಕೆರೆಗೆ ಬರುತ್ತಿದೆ. ಈಗಾಗಲೇ ಈ ಕೆರೆಗಳು ಸಹ ಭರ್ತಿ ಯಾಗಿರುವ ಕಾರಣ ನೀರು ಹೊರಬರುತ್ತಿದ್ದು, ಕೆರೆ ಅಪಾಯದ ಮಟ್ಟ ತಲುಪಿವೆ.

ಕಲ್ಯಾಣ ಮಂಟಪಕ್ಕೆ ನೀರು: ಚಾ.ನಗರದ ಶಿವಕುಮಾರಸ್ವಾಮಿ ಭವನಕ್ಕೆ ಅಪಾರ ಪ್ರಮಾಣ ಮಳೆ ನೀರು ನುಗ್ಗಿದ ಪರಿಣಾಮ ಮದುವೆಯ ಸಂಭ್ರಮ ಮಾಯವಾಯಿತು. ಅಲ್ಲದೆ ಹರದನಹಳ್ಳಿಯ ದಿವ್ಯಲಿಂಗೇಶ್ವರ, ರಾಮಸಮುದ್ರದ ಹರಳುಕೋಟೆ, ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳು ಜಲಾವೃತಗೊಂಡಿದ್ದವು. ನಗರದ ಜೋಡಿರಸ್ತೆಯಲ್ಲಿನ ಇಂದಿರಾ ಕ್ಯಾಟೀನ್ ಮುಳುಗಡೆಯಾದ ಪರಿಣಾಮ ನೀರನ್ನು ಮೋಟಾರ್ ಮೂಲಕ ತೆರವುಗೊಳಿಸಲಾಯಿತು. ನಗರದ ರೈಲ್ವೆ ಬಡಾವಣೆ, ಉಪ್ಪಾರ ಬಡಾವಣೆ, ನಾಯಕರ ಬಡಾವಣೆ ಸೇರಿದಂತೆ ಅನೇಕ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಸಂಕಷ್ಟಕ್ಕೊಳಗಾದರು.

ಯಳಂದೂರಲ್ಲಿ ಆತಂಕ: ಯಳಂದೂರು ತಾಲೂಕಿನ ಅಂಬಳೆ, ಮದ್ದೂರು, ಯರಿಯೂರು, ಗಣಿನನೂರು, ಅಗರ-ಮಾಂಬಳ್ಳಿ, ಮಲ್ಲಿಗೆಹಳ್ಳಿ ಸೇರಿದಂತೆ ಅನೇಕ ಗ್ರಾಮಗಳು ಜಲಾವೃತಗೊಂಡಿದ್ದು, ಅಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.

ಹನೂರಲ್ಲಿ ಭರ್ಜರಿ ಮಳೆ: ತಾಲೂಕಿನಾದ್ಯಂತ ಸೋಮವಾರ ಮುಂಜಾನೆ ಭರ್ಜರಿ ಮಳೆಯಾಗಿದ್ದು ಪಟ್ಟಣ ಸೇರಿದಂತೆ ತಾಲೂಕಿನ ಲೊಕ್ಕನಹಳ್ಳಿ, ಪಿಜಿ ಪಾಳ್ಯ, ಒಡೆಯರ ಪಾಳ್ಯ, ಬಂಡಳ್ಳಿ, ರಾಮಾಪುರ, ಮಾರ್ಟಳ್ಳಿ ಗ್ರಾಮಗಳ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಿಆರ್‍ಟಿ ಅರಣ್ಯ ವ್ಯಾಪ್ತಿಯ ಹುಬ್ಬೆ ಹುಣಸೆ ಜಲಾಶಯ ಕೋಡಿ ಬಿದ್ದಿದ್ದು, ಪಟ್ಟಣದ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿರುವ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ ಪಟ್ಟಣದ 3ನೇ ವಾರ್ಡ್‍ನ ದೇವಾಂಗಪೇಟೆಗೆ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಪೆÇಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಪಟ್ಟಣದ 2ನೇ ವಾರ್ಡ್‍ನ ಸಮೀಪ ಹನೂರು ಲೊಕ್ಕನಹಳ್ಳಿ ಮಾರ್ಗಕ್ಕೆ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಸೇತುವೆ ಕೊಚ್ಚಿ ಹೋಗಿದೆ. ವಾಹನಗಳು ಉದ್ದನೂರು ರಸ್ತೆಯ ಮೂಲಕ ಲೊಕ್ಕನಹಳ್ಳಿಗೆ ತೆರಳುತ್ತಿದೆ.

ಗುಂಡ್ಲುಪೇಟೆ/ಬೇಗೂರು: ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಸುತ್ತಮುತ್ತ ಭಾನುವಾರ ರಾತ್ರಿ ಭಾರೀ ಮಳೆಯಾಗಿದೆ. ಇದರಿಂದ ಬೇಗೂರು ಗ್ರಾಮದ ತಗ್ಗುಪ್ರದೇಶಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ಕೆಲ ಮನೆಗಳು ಹಾಗೂ ಪೆÇಲೀಸ್ ವಸತಿಗೃಹಗಳು ಜಲಾವೃತವಾದವು.
ತಾಲೂಕಿನ ಕೋಟೆಕೆರೆ ಹಾಗೂ ಬೆಳಚಲವಾಡಿ ಕೆರೆಗಳು ಕೋಡಿಬಿದ್ದು, ಜಮೀನುಗಳು, ಗ್ರಾಮದತ್ತ ನುಗ್ಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೆಳಚಲವಾಡಿ ರಸ್ತೆ ಬದಿಯ ಕಾಲುವೆಗಳು, ಚರಂಡಿಗಳು ಮುಚ್ಚಿಕೊಂಡಿರುವ ಪರಿಣಾಮ 6 ಮನೆಗಳು ಹಾಗೂ ಪೆÇಲೀಸ್ ವಸತಿಗೃಹಗಳು ಜಲದಿಗ್ಬಂಧನಕ್ಕೊಳಗಾದವು.

ಇನ್ನೂ ಕಮರಹಳ್ಳಿ ಕೆರೆ ದಂಡೆಯ ಬದಿಯಲ್ಲಿರುವ ವಿದ್ಯುತ್ ಪ್ರಸರಣಾ ಕೇಂದ್ರದ ಸುತ್ತಲೂ ನೀರು ನಿಂತು ಅಪಾಯದ ಭೀತಿಯುಂಟು ಮಾಡಿತ್ತು. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರ ನಿರ್ಬಂಧಿಸಿದರು.

ಕೂಡಲೇ ಕಾರ್ಯಾಚರಣೆ ಆರಂಭಿಸಿದ ಕಂದಾಯಾಧಿಕಾರಿಗಳು ಜೆಸಿಬಿಗಳ ಮೂಲಕ ಹೊಸದಾಗಿ ಕಾಲುವೆ ನಿರ್ಮಿಸಿ ನೀರು ಹಳ್ಳದತ್ತ ಹರಿಯುವಂತೆ ಮಾಡಿದರು. ಭಾರೀ ಮಳೆಯಿಂದ ಕಮರಹಳ್ಳಿ, ಹಾಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ತಗ್ಗು ಪ್ರದೇಶದ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಬೇಗೂರು ಹಾಗೂ ಸೋಮಹಳ್ಳಿಯಲ್ಲಿ ತಲಾ 5 ಮನೆಗಳು ಸೇರಿದಂತೆ ಹೋಬಳಿಯಲ್ಲಿ ಸುಮಾರು 28 ಕ್ಕೂ ಹೆಚ್ಚಿನ ಗೋಡೆಗಳು ನೆಲಕ್ಕುರುಳಿವೆ. ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗೊಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

Translate »