ಹೆಚ್.ಡಿ.ಕೋಟೆ ಬಳಿ ಹುಲಿ ದಾಳಿಗೆ ಯುವಕ ಬಲಿ
ಮೈಸೂರು

ಹೆಚ್.ಡಿ.ಕೋಟೆ ಬಳಿ ಹುಲಿ ದಾಳಿಗೆ ಯುವಕ ಬಲಿ

January 23, 2023

• ಡಿ.ಬಿ.ಕುಪ್ಪೆ, ಜ.22(ಎಂಟಿವೈ, ಮಂಜು) – ತಿ.ನರಸೀಪುರದಲ್ಲಿ ಚಿರತೆಗೆ ಬಾಲಕ ಬಲಿಯಾದ ಮರು ದಿನವೇ ಹೆಚ್.ಡಿ. ಕೋಟೆಯ ಬಳ್ಳೆ ಹಾಡಿ ಸಮೀಪವೇ ಆದಿ ವಾಸಿ ಯುವಕನೊಬ್ಬ ಹುಲಿ ದಾಳಿಗೆ ಬಲಿ ಯಾಗಿದ್ದು, ಹಾಡಿಯ ನಿವಾಸಿಗಳು ಮೈಸೂರು -ಮಾನಂದವಾಡಿ ರಸ್ತೆಯಲ್ಲಿ ರಸ್ತೆತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಹಾಡಿ ನಿವಾಸಿ ಕಾಳ ಅಲಿಯಾಸ್ ಬೆಟ್ಟದ ಹುಲಿ ಹಾಗೂ ಪುಷ್ಪ ದಂಪತಿ ಮಗ ಮಂಜು (18) ಎಂಬಾತನೆ ಹುಲಿ ದಾಳಿಗೆ ಬಲಿ ಯಾದವನಾಗಿದ್ದಾನೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇ ಶದ ನಡುವೆ ಹಾದು ಹೋಗಿರುವ ಮೈಸೂರು-ಹೆಚ್.ಡಿ. ಕೋಟೆ- ಮಾನಂದವಾಡಿ ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಇರುವ ಬಳ್ಳೆ ಹಾಡಿಯ ಸಮೀಪವೇ ಹುಲಿ ದಾಳಿ ನಡೆದಿದೆ. ಅಲ್ಲದೆ, ಬಳ್ಳೆಯಲ್ಲಿರುವ ಡಿ.ಬಿ.ಕುಪ್ಪೆ ಆರ್‍ಎಫ್‍ಓ ಕಚೇರಿ ಹಿಂಭಾಗವೇ ಹುಲಿ ದಾಳಿ ಮಾಡಿ ಆದಿವಾಸಿ ಯುವಕನನ್ನು ಬಲಿ ಪಡೆದಿದ್ದು, ಬಳ್ಳೆ ಹಾಡಿ ನಿವಾಸಿ ಗಳನ್ನು ಆಕ್ರೋಶಕ್ಕೀಡು ಮಾಡಿದೆ.

ಘಟನೆ ವಿವರ: ಬಳ್ಳೆ ಹಾಡಿಯ ಸಮೀಪವೇ ಇರುವ ಬಳ್ಳೆ ಆನೆ ಶಿಬಿರ ದಲ್ಲಿರುವ ದಸರಾ ಮಹೋತ್ಸವದ ಮಾಜಿ ಕ್ಯಾಪ್ಟನ್ ಅರ್ಜುನ, ದುರ್ಗಾಪರಮೇ ಶ್ವರಿ ಹಾಗೂ ಕುಮಾರಸ್ವಾಮಿ ಸಾಕಾನೆ ಯನ್ನು ನೋಡಲು ಹಾಡಿಯ ಮಕ್ಕಳು ಬರುವುದು ಸಾಮಾನ್ಯ. ಆನೆ ಶಿಬಿರದಲ್ಲಿರುವ ಸಿಬ್ಬಂದಿ ಹಾಗೂ ಆನೆಗಳೊಂದಿಗೆ ಆಟವಾಡುವುದಕ್ಕಾಗಿ ಭಾನು ವಾರ ಬೆಳಗ್ಗೆಯೂ ಕೆಲವರು ಬಂದಿದ್ದರು. ಅವರಲ್ಲಿ ಮಂಜು ಕೂಡ ಒಬ್ಬನಾಗಿದ್ದು, ಮದ್ಯಾಹ್ನ 1.30ರಲ್ಲಿ ಆರ್‍ಎಫ್‍ಓ ಕ್ವಾಟ್ರಸ್ ಹಿಂಭಾಗದ ಕಾಡಿನ ರಸ್ತೆಯ ಪಕ್ಕದಲ್ಲಿ ಕುಳಿತಿದ್ದಾಗ ಏಕಾಏಕಿ ಹುಲಿ ದಾಳಿ ನಡೆಸಿ ಎಳೆದೊಯ್ದಿದೆ. ಹಾಡಹಗಲೇ ನಡೆದ ಈ ಘಟನೆಯಿಂದ ತಬ್ಬಿಬ್ಬಾದ ಆನೆ ಶಿಬಿರದ ಸಿಬ್ಬಂದಿಗಳು ಹುಲಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ಯುವಕ ಮಂಜುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ವಿಷಯ ತಿಳಿದು ಕಚೇರಿಯಲ್ಲೇ ಇದ್ದ ಆರ್‍ಎಫ್‍ಓ ಮಧು ಹಾಗೂ ಸಿಬ್ಬಂದಿಗಳು ಯುವಕನ ಮೃತದೇಹವಿದ್ದ ಸ್ಥಳಕ್ಕೆ ಆಗಮಿಸಿ, ಹುಲಿ ಯುವಕನ ದೇಹ ಭಕ್ಷಿಸದಂತೆ ಕಟ್ಟೆಚ್ಚರ ವಹಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಹುಲಿ ದಾಳಿ ನಡೆಸಿದ ಸ್ಥಳ ಪರಿಶೀಲನೆ ಮಾಡಿ, ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಕಿಡಿಕಾರಿದ ಹಾಡಿ ನಿವಾಸಿಗಳು: ಯುವಕ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆನೆ ಶಿಬಿರದ ಬಳಿ ಬಂದ ಹಾಡಿ ನಿವಾಸಿ ಗಳು ಹೆಚ್.ಡಿ.ಕೋಟೆ-ಮಾನಂದವಾಡಿ ಮುಖ್ಯ ರಸ್ತೆಗೆ ಕಲ್ಲು ಗಳನ್ನು ಅಡ್ಡಲಾಗಿಟ್ಟು ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ನ್ಯಾಯ ದೊರಕಿಸಿಕೊಡಬೇ ಕೆಂದು ಆಗ್ರ ಹಿಸಿದರು. ಇದರಿಂದ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.

ಹಲವು ದಿನಗಳಿಂದ ನೆಲೆಯೂರಿರುವ ಹುಲಿ: ಯುವಕನ ಮೇಲೆ ದಾಳಿ ನಡೆಸಿರುವ ಹುಲಿ ಕಳೆದ ಒಂದೂವರೆ ತಿಂಗಳಿಂದ ಬಳ್ಳಿ ಹಾಡಿ ಸಮೀಪವೇ ನೆಲೆಯೂರಿದೆ. ಹಲವು ದಿನ ಈ ಹುಲಿಯನ್ನು ಅರಣ್ಯ ಸಿಬ್ಬಂದಿ ಹಾಗೂ ಬಳ್ಳೆ ಹಾಡಿ ನಿವಾಸಿಗಳು ನೋಡಿ ದ್ದರು. ಕಾಡಿನೊಳಗೆ ಹಾಡಿ ಇರುವುದರಿಂದ ಪ್ರಾಣಿಗಳೊಂದಿಗೆ ಆದಿವಾಸಿಗಳು ಸಹಜ ಜೀವನ ನಡೆಸುತ್ತಿದ್ದರಿಂದ ದಾಳಿಯ ಮುನ್ಸೂಚನೆ ಅರಿಯದೇ ಸುಮ್ಮನಿದ್ದರು ಎನ್ನಲಾಗಿದೆ.

ಅರ್ಧ ದಿನ ಸಫಾರಿ ಬಂದ್: ಹುಲಿ ದಾಳಿ ಹಿನ್ನೆಲೆಯಲ್ಲಿ ಕಬಿನಿ ಹಿನ್ನೀರು ಪ್ರದೇಶದ ಬಿ-ಜೋóóನ್‍ನಲ್ಲಿ ಭಾನುವಾರ ಮಧ್ಯಾಹ್ನ ಸಫಾರಿ ನಿರ್ಬಂಧಿಸಲಾಗಿತ್ತು. ದಾಳಿ ನಡೆಸಿದ ಬಳಿಯೂ ಹುಲಿಯ ಮನಸ್ಥಿತಿಯೂ ಬದಲಾಗಿ, ಘಾಸಿಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಸಫಾರಿ ವಾಹನಗಳನ್ನು ಬಿ-ಜೋóóನ್‍ನಲ್ಲಿ ಸಂಚರಿಸದಂತೆ ಸೂಚಿಸಲಾಗಿತ್ತು.

ಮಗನನ್ನು ಕುಯ್ಯಬೇಡಿ: ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹ ತರಲಾಗಿತ್ತು. ಈ ವೇಳೆ ಮೃತರ ಪೋಷಕರು ಪೊಲೀಸ ರೊಂದಿಗೆ ವಾಗ್ವಾದ ನಡೆಸಿದರು. ನಮ್ಮ ಅನುಮತಿ ಇಲ್ಲದೆ ಯಾಕೆ ಆಸ್ಪತ್ರೆಗೆ ಶವ ತಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ಪೋಷಕರನ್ನು ಸಮಾಧಾನ ಮಾಡಿದರು.

2.50 ಲಕ್ಷ ಪರಿಹಾರದ ಚೆಕ್ ವಿತರಣೆ: ಆಸ್ಪತ್ರೆ ಬಳಿ ಮೇಟಿ ಕುಪ್ಪೆ ಉಪ ವಿಭಾಗದ ಎಸಿಎಫ್ ಕೆ.ಎನ್.ರಂಗಸ್ವಾಮಿ ಆಗಮಿಸಿ ಮೃತ ಯುವಕನ ತಂದೆ ಕಾಳ, ತಾಯಿ ಪುಷ್ಪ ಅವರಿಗೆ ಪ್ರಾಥಮಿಕ ಹಂತದಲ್ಲಿ 2.50 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ವಿತರಿಸಿದರು. ಉಳಿದ ಮೊತ್ತವನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಯಮಾನುಸಾರ ವಿತರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೃತ ಯುವಕನ ಅಕ್ಕ ಕವನ, ಸುಮ, ಅಣ್ಣ ನಾಗಪ್ಪ, ದೊಡ್ಡಮ್ಮ ಜಯ, ತಾತ ತಿಮ್ಮ, ತಹಶೀಲ್ದಾರ್ ರತ್ನಾಂಬಿಕ, ಆರ್‍ಎಫ್‍ಓಗಳಾದ ಮಧು, ಹರ್ಷಿತ್, ಡಿವೈಎಸ್ಪಿ ಎಂ.ಕೆ.ಮಹೇಶ್, ಹೆಚ್.ಡಿ.ಕೋಟೆ ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಬಸವರಾಜ್, ಕೆ.ಆರ್.ನಗರದ ಸರ್ಕ್‍ಲ್ ಇನ್ಸ್‍ಪೆಕ್ಟರ್ ಎಂ.ಆರ್.ಲವ, ಸರಗೂರು ಇನ್ಸ್‍ಪೆಕ್ಟರ್ ಲಕ್ಷ್ಮಿ ಕಾಂತ್, ಅಂತರಸಂತೆ ಎಸ್‍ಐ ರವಿಶಂಕರ್, ಮುಖಂಡರಾದ ಜಯಪ್ರಕಾಶ್ ಚಿಕ್ಕಣ್ಣ, ಗ್ರಾ.ಪಂ. ಸದಸ್ಯ ರಮೇಶ್, ಮಾಸ್ತಿ, ಶಂಕರ್, ಭಾಸ್ಕರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಈ ಸಂಬಂಧ ಅಂತರಸಂತೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »