ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮುರುಘಾ ಶರಣರಬಂಧನ
News

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮುರುಘಾ ಶರಣರಬಂಧನ

September 2, 2022

ಚಿತ್ರದುರ್ಗ, ಸೆ.1-ಚಿತ್ರದುರ್ಗದ ಮುರುಘಾ ಮಠದ ಅಧೀನದ ಹಾಸ್ಟೆಲ್‍ನಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋ ಪದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಪ್ರಕರಣದ ಎರಡನೇ ಆರೋಪಿ, ಹಾಸ್ಟೆಲ್ ವಾರ್ಡನ್ ರಶ್ಮಿ ಅವರನ್ನು ವಶಕ್ಕೆ ಪಡೆ ದಿದ್ದ ಪೊಲೀಸರು, ರಾತ್ರಿ ವೇಳೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಇನ್ಸ್‍ಪೆಕ್ಟರ್ ಬಾಲಚಂದ್ರ ನಾಯಕ್ ಮತ್ತು ಮೊಳ ಕಾಲ್ಮೂರು ಠಾಣೆಯ ಇನ್ಸ್‍ಪೆಕ್ಟರ್ ಸತೀಶ್, ಮುರುಘಾ ಮಠಕ್ಕೆ ತೆರಳಿ ಮುರುಘಾ ಶ್ರೀಗಳನ್ನು ಬಂಧಿಸಲು ಮುಂದಾ ಗಿದ್ದರು. ಅಷ್ಟರಲ್ಲಿ ಪೊಲೀಸರಿಗೆ ಸಹಕರಿಸಿದ ಮುರುಘಾ ಶರಣರು, ಕೆಲ ನಿಮಿಷಗಳಲ್ಲೇ ಕಾವಿ ಮೇಲೆ ಬಿಳಿ ಶಾಲು ಧರಿಸಿ ಪೊಲೀಸರೊಂದಿಗೆ ಗ್ರಾಮಾಂತರ ಠಾಣೆಗೆ ತೆರಳಿದರು. ಕೆಲ ನಿಮಿಷಗಳ ನಂತರ ಪೊಲೀಸ್ ಅಧಿಕಾರಿಗಳು ಶ್ರೀಗಳನ್ನು ಡಿವೈಎಸ್‍ಪಿ ಅನಿಲ್ ಕುಮಾರ್ ಅವರ ಕಚೇರಿಗೆ ಕರೆದೊಯ್ದರು. ಭಕ್ತರು ಜಮಾಯಿಸಿ ಪ್ರತಿಭಟಿಸಬಹುದು ಎಂಬ ಹಿನ್ನೆಲೆಯಲ್ಲಿ ಮುರುಘಾ ಶರಣರನ್ನು ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿರೀಕ್ಷಣಾ ಜಾಮೀನು ವಿಚಾರಣೆ: ಚಿತ್ರದುರ್ಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮುರುಘಾ ಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಈ ವೇಳೆ ಸಂತ್ರಸ್ತ ಬಾಲಕಿಯರ ಪೋಷಕರ ಅಭಿಪ್ರಾಯವನ್ನು ಪರಿಗಣಿಸಿ, ಸಂತ್ರಸ್ತರ ಪರವಾಗಿ ವಾದ ಮಂಡಿಸಲು ವಕೀಲ ಶ್ರೀನಿವಾಸ್ ಅವರಿಗೆ ನ್ಯಾಯಾಧೀಶರು ಅನುಮತಿ ನೀಡಿದರು. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಂತ್ರಸ್ತೆಯರ ಪರ ವಕೀಲ ಕೋರಿದ ಕಾಲಾವಕಾಶವನ್ನು ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಲ್ಪಡು ತ್ತಿದ್ದಂತೆಯೇ ಪೊಲೀಸರು ಮುರುಘಾ ಶರಣರನ್ನು ಬಂಧಿಸಲು ಯೋಜನೆ ರೂಪಿಸಿಕೊಂಡಿದ್ದರು. ಮೊದಲಿಗೆ ಪ್ರಕರಣದ ಎರಡನೇ ಆರೋಪಿಯಾದ ಹಾಸ್ಟೆಲ್ ವಾರ್ಡನ್ ರಶ್ಮಿ ಅವರನ್ನು ವಶಕ್ಕೆ ಪಡೆದರು. ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ ಪರಶುರಾಮ್ ಅವರು, ರಶ್ಮಿ ಅವರನ್ನು ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದೇವೆಯೇ ಹೊರತು, ಬಂಧಿಸಿಲ್ಲ. ಅಗತ್ಯ ಬಿದ್ದರೆ ಶ್ರೀಗಳನ್ನೂ ಕೂಡ ವಿಚಾರಣೆ ಮಾಡುತ್ತೇವೆ. ಪ್ರಕರಣದ ತನಿಖೆಯ ಪ್ರಗತಿಯನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮುರುಘಾ ಶರಣರ ಬಂಧನಕ್ಕೂ ಮುನ್ನ ಟ್ರಯಲ್ ನೋಡಿದ್ದರು.

ರಶ್ಮಿ ಅವರನ್ನು ಪೊಲೀಸರು ವಶಕ್ಕೆ ಪಡೆದ ಪರಿಣಾಮವಾಗಿ ಯಾವುದೇ ರೀತಿಯ ತೀಕ್ಷ್ಣ ಪ್ರತಿಕ್ರಿಯೆಗಳು ಮಠದ ಭಕ್ತರ ಕಡೆಯಿಂದ ಬಂದಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಎಸ್ಪಿ ಅವರು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಯನ್ನು ಚಿತ್ರದುರ್ಗಕ್ಕೆ ಕರೆಸಿಕೊಂಡು ಮಠದ ಸುತ್ತ ಬ್ಯಾರಿಕೇಡ್‍ಗಳನ್ನು ಹಾಕಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಿದ್ದರು. ಅಲ್ಲದೇ ಜಿಲ್ಲೆಯ ಹಲವಾರು ಠಾಣೆಗಳ ಇನ್ಸ್‍ಪೆಕ್ಟರ್‍ಗಳನ್ನು ಕರೆಸಿಕೊಳ್ಳಲಾಗಿತ್ತು. ಅಂತಿಮವಾಗಿ ರಾತ್ರಿ 10 ಗಂಟೆ ಸುಮಾರಿನಲ್ಲಿ ಮುರುಘಾ ಶರಣರ ಬಂಧನ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದರು. ಇನ್ಸ್‍ಪೆಕ್ಟರ್‍ಗಳಾದ ಬಾಲಚಂದ್ರ ನಾಯಕ್ ಮತ್ತು ಸತೀಶ್ ಮಠಕ್ಕೆ ತೆರಳಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಶ್ರೀಗಳು ಕಾವಿ ಕಳಚಿಟ್ಟು ಪೊಲೀಸರೊಂದಿಗೆ ತೆರಳುವ ಮೂಲಕ ಬಂಧನಕ್ಕೊಳಗಾದರು.

ಹಿನ್ನೆಲೆ: ಜುಲೈ 24ರಂದು ಹಾಸ್ಟೆಲ್ ತೊರೆದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅಂದು ರಾತ್ರಿ ಬೆಂಗಳೂರಿನ ಚಿಕ್ಕಪೇಟೆ ಠಾಣೆಗೆ ತೆರಳಿದ್ದರು. ಅಲ್ಲಿನ ಪೊಲೀಸರ ಮಾಹಿತಿ ಮೇರೆಗೆ ಬೆಂಗಳೂರಿಗೆ ತೆರಳಿದ್ದ ಮಠದ ಆಡಳಿತಾಧಿಕಾರಿ ಕೆ.ಎಸ್.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ವಿದ್ಯಾರ್ಥಿನಿಯರನ್ನು ಚಿತ್ರದುರ್ಗಗೆ ಕರೆದೊಯ್ದು ಮೂರು ದಿನ ತಮ್ಮಲ್ಲೇ ಇರಿಸಿಕೊಂಡು ಜು.27ರಂದು ಅಲ್ಲಿನ ಪೊಲೀಸರ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಿದ್ದರು. ಆನಂತರ ಈ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಆಗಮಿಸಿದ್ದು, ಮೈಸೂರು ಮಕ್ಕಳ ರಕ್ಷಣಾ ಸಮಿತಿ ಮುಂದೆ ಬಾಲಕಿಯರನ್ನು ಹಾಜರುಪಡಿಸಿ, ಅವರ ಹೇಳಿಕೆ ದಾಖಲಿಸಿದ ನಂತರ ಆ.26ರಂದು ರಾತ್ರಿ 10.30ರ ವೇಳೆಯಲ್ಲಿ ಮುರುಘಾ ಶರಣರು, ಹಾಸ್ಟೆಲ್ ವಾರ್ಡನ್, ಮಠದ ಹಿರಿಯ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ನಜರ್‍ಬಾದ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿನಿಯರನ್ನು ವಾರ್ಡನ್ ರಶ್ಮಿ ಅವರು ಶ್ರೀಗಳ ಸೇವೆಗಾಗಿ ರಾತ್ರಿ ವೇಳೆ ಕಳುಹಿಸುತ್ತಿದ್ದರು. ಆಗ ಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿದ್ದರು. ಇವರಿಗೆ ಇತರ ನಾಲ್ವರು ಸಹಕರಿಸಿದ್ದರು ಎಂಬುದು ಆ ದೂರಿನ ಸಾರಾಂಶವಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅದಕ್ಕೂ ಮುನ್ನ ಅದೇ ದಿನ ಸಂಜೆ 6 ಗಂಟೆ ವೇಳೆಯಲ್ಲಿ ಮಠದ ಆಡಳಿತಾಧಿಕಾರಿ ಕೆ.ಎಸ್.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರ ಯತ್ನವೂ ಸೇರಿದಂತೆ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವರಾಜನ್ ಅವರು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬೆಂಗಳೂರಿನ ಕಾಟನ್‍ಪೇಟೆ ಠಾಣೆಯಿಂದ ಕರೆತಂದು ಮೂರು ದಿನ ತಮ್ಮ ವಶದಲ್ಲೇ ಇಟ್ಟುಕೊಂಡು ಅವರನ್ನು ಪ್ರಚೋದಿಸಿ, ಮಠಕ್ಕೆ ಕೆಟ್ಟ ಹೆಸರು ಬರುವಂತೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದ್ದರು. ಚಿತ್ರದುರ್ಗ ಡಿವೈಎಸ್‍ಪಿ ಅನಿಲ್‍ಕುಮಾರ್ ನೇತೃತ್ವದಲ್ಲಿ ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ.

ರಾತ್ರಿ ಬಹುಹೊತ್ತಿನವರೆಗೆ ಚಳ್ಳಕೆರೆ ಡಿವೈಎಸ್ಪಿ ಕಚೇರಿಯಲ್ಲಿ ಮುರುಘಾ ಶ್ರೀಗಳನ್ನು ವಿಚಾರಣೆಗೊಳಪಡಿಸಿದ ನಂತರ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಎಸ್ಪಿಗೆ ಮಕ್ಕಳ ರಕ್ಷಣಾ ಆಯೋಗ ನೋಟಿಸ್: ಮುರುಘಾ ಮಠದ ಶ್ರೀಗಳಿಂದ ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತನಿಖಾ ವರದಿ ನೀಡುವಂತೆ ಚಿತ್ರದುರ್ಗ ಎಸ್ಪಿಯವರಿಗೆ ನೋಟಿಸ್ ನೀಡಿದೆ. ತನಿಖೆಯ ಪ್ರಕ್ರಿಯೆಯಲ್ಲಿ ಬಾಲಕಿಯರ ಗುರುತು ಬಹಿರಂಗಪಡಿಸದಂತೆ ಸೂಚಿಸಿರುವ ಆಯೋಗವು, ತಮ್ಮ ಪತ್ರ ತಲುಪಿದ 7 ದಿನದಲ್ಲಿ ಇತರೆ ದಾಖಲೆಗಳೊಂದಿಗೆ ಪ್ರಕರಣದ ವಿವರವಾದ ವರದಿಯನ್ನು ಒದಗಿಸುವಂತೆ ಸೂಚನೆ ನೀಡಿದೆ.

Translate »