ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ
ಮೈಸೂರು

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ

September 2, 2022

ಮೈಸೂರು, ಸೆ.1(ಆರ್‍ಕೆ)-ಮೈಸೂರಿನ ಖಾಸಗಿ ಹೋಟೆಲ್‍ನ ಕೊಠಡಿಯಲ್ಲಿ ಯುವತಿ ಹತ್ಯೆ ನಡೆದಿದ್ದು, ಪ್ರಿಯಕರನೇ ಈ ಹತ್ಯೆ ಮಾಡಿ ರುವ ಸಂಬಂಧ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು-ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಬೆಳಗ್ಗೆ ಈ ಹತ್ಯೆ ಬೆಳಕಿಗೆ ಬಂದಿದ್ದು, ಯುವತಿಯೊಂದಿಗೆ ಕಳೆದ ಮೂರು ದಿನಗಳಿಂದ ಕೊಠಡಿಯಲ್ಲಿದ್ದ ಆಕೆಯ ಪ್ರಿಯಕರ, ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಹೋಟೆಲ್‍ನಿಂದ ಹೊರ ಹೋಗಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿನಿ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಈಕೆಯನ್ನು ಇಂದು ಬೆಳಗ್ಗೆ ಕೊಲೆ ಮಾಡಲಾಗಿದೆಯೇ? ಅಥವಾ ನಿನ್ನೆಯೇ ಕೊಲೆ ನಡೆದಿದೆಯೇ? ಎಂಬುದು ತನಿಖೆ ನಂತರ ತಿಳಿಯಬೇಕಾಗಿದೆ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕು, ರಾವಂದೂರು ಹೋಬಳಿ, ಹರಳಹಳ್ಳಿ ಗ್ರಾಮದ ರವಿ ಎಂಬುವರ ಪುತ್ರಿ ಅಪೂರ್ವ ಶೆಟ್ಟಿ(21) ಪ್ರಿಯಕರನಿಂದಲೇ ಹತ್ಯೆಗೀಡಾದವಳಾಗಿದ್ದು, ಆಕೆಯನ್ನು ಪ್ರಿಯಕರ ಆಶಿಕ್(26) ಹತ್ಯೆ ಮಾಡಿದ್ದಾನೆ ಎಂದು ಪೊಲೀಸರಲ್ಲಿ ದೂರು ದಾಖಲಾಗಿದೆ. ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರ್ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ, ಆಗಸ್ಟ್ 29ರಂದು ರಾತ್ರಿ ಪ್ರಿಯಕರ ಆಶಿಕ್ ಜೊತೆ ವಿನೋಬ ರಸ್ತೆಯಲ್ಲಿರುವ ಹೋಟೆಲ್‍ವೊಂದರ 2ನೇ ಮಹಡಿಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಕೊಠಡಿ ಪಡೆಯುವಾಗ ಆಶಿಕ್, ಹಿನಕಲ್ ಗ್ರಾಮ ಎಂದು ವಿಳಾಸ ನೀಡಿದ್ದಾನೆ. ಇಂದು ಬೆಳಗ್ಗೆ 7.30 ಗಂಟೆ ವೇಳೆಗೆ ಒಬ್ಬನೇ ಹೊರಗೆ ಹೋಗಿದ್ದ ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನದಿಂದಲೂ ಈ ಪ್ರೇಮಿಗಳು ಹೋಟೆಲ್‍ನಲ್ಲೇ ವಾಸ್ತವ್ಯವಿದ್ದು, ಕೆಲ ಸಮಯ ಆಶಿಕ್ ಮಾತ್ರ ಹೊರ ಹೋಗಿ ಬರುತ್ತಿದ್ದ. ಅದೇ ರೀತಿ ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಆಶಿಕ್ ಒಬ್ಬನೇ ಹೋಟೆಲ್‍ನಿಂದ ಹೊರ ಹೋಗಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ. ಮಧ್ಯಾಹ್ನವಾದರೂ ಆತ ವಾಪಸ್ ಬಂದಿಲ್ಲ. ಕೊಠಡಿಯಲ್ಲಿ ವಿದ್ಯಾರ್ಥಿನಿಯೊಬ್ಬಳೇ ಇದ್ದಾಳೆ ಎಂಬುದನ್ನು ಅರಿತಿದ್ದ ಸಿಬ್ಬಂದಿ, ಬೆಳಗ್ಗೆ ಉಪಹಾರಕ್ಕಾಗಲೀ, ಮಧ್ಯಾಹ್ನ ಊಟಕ್ಕಾಗಲೀ ಆಕೆ ಹೊರ ಬಂದಿಲ್ಲ. ಅಲ್ಲದೇ ಪಾರ್ಸಲ್ ತರಿಸಿಕೊಂಡು ಕೂಡ ಆಹಾರ ಸೇವಿಸಿಲ್ಲ. ಹೀಗಾಗಿ ಸಿಬ್ಬಂದಿಯು ಇಂಟರ್ ಕಾಂ ಮೂಲಕ ಆಕೆಯನ್ನು ಸಂಪರ್ಕಿಸಲು ಯತ್ನಿಸಿದಾಗ ಪ್ರತಿಕ್ರಿಯೆ ಬರಲಿಲ್ಲ ಎನ್ನಲಾಗಿದ್ದು, ಇದರಿಂದ ಸಂಶಯಗೊಂಡು ಸೂಕ್ಷ್ಮವಾಗಿ ಹೊರಗಿನಿಂದ ಕೊಠಡಿಯನ್ನು ಪರಿಶೀಲನೆ ಮಾಡಿದಾಗ ಆಕೆ ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣವೇ ಹೋಟೆಲ್‍ನ ವ್ಯವಸ್ಥಾಪಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿ ಕೊಠಡಿಯ ಬಾಗಿಲು ತೆರೆಸಿ ನೋಡಿದಾಗ ವಿದ್ಯಾರ್ಥಿನಿ ಮೂಗಿನಲ್ಲಿ ರಕ್ತ ಹಾಗೂ ಬಾಯಿಯಲ್ಲಿ ನೊರೆ ಬಂದ ಕುರುಹುಗಳು ಕಂಡು ಬಂದಿವೆ. ಈಕೆ ಜೊತೆಗಿದ್ದ ಆಶಿಕ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನೇ ಅಪೂರ್ವ ಶೆಟ್ಟಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಯುವತಿ ಅಪೂರ್ವ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಮೈಸೂರಿನ ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಳು ಎನ್ನಲಾಗಿದೆ. ಈಕೆ ಆಶಿಕ್‍ನನ್ನು ಪ್ರೀತಿಸು ತ್ತಿರುವುದು ಪೋಷಕರಿಗೆ ಗೊತ್ತಾಗಿ ಒಮ್ಮೆ ಈ ಸಂಬಂಧ ಗಲಾಟೆಯೂ ಆಗಿತ್ತು. ಅಲ್ಲದೇ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳು ಮತ್ತು ಆಶಿಕ್‍ಗೆ ಎಚ್ಚರಿಕೆ ಯನ್ನೂ ನೀಡಿದ್ದರು ಎಂದು ಹೇಳಲಾಗಿದೆ. ಆದರೂ ಇವರಿಬ್ಬರ ಒಡನಾಟ ಮುಂದುವರೆದಿತ್ತು. ಇದೀಗ ವಿದ್ಯಾರ್ಥಿನಿ ಹತ್ಯೆ ನಡೆದಿದ್ದು ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬುದು ಆಶಿಕ್ ಬಂಧನದ ನಂತರ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿದ್ದರು. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಆಶಿಕ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Translate »