ಮುರುಘಾ ಶರಣರು ಮೂರು ದಿನ ಪೊಲೀಸ್ ಕಸ್ಟಡಿಗೆ
News

ಮುರುಘಾ ಶರಣರು ಮೂರು ದಿನ ಪೊಲೀಸ್ ಕಸ್ಟಡಿಗೆ

September 3, 2022

ಚಿತ್ರದುರ್ಗ, ಸೆ.2-ಪೋಕ್ಸೋ ಕಾಯ್ದೆ ಯಡಿ ಬಂಧನಕ್ಕೊಳಗಾಗಿರುವ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ (ಸೆ.5ರವರೆಗೆ) ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾ ಧೀಶೆ ಕೋಮಲ ಆದೇಶ ನೀಡಿದ್ದಾರೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿ ನಲ್ಲಿ ಬಂಧಿಸಲ್ಪಟ್ಟ ಮುರುಘಾ ಶ್ರೀಗಳನ್ನು ವೈದ್ಯಕೀಯ ತಪಾಸಣೆ ಸೇರಿದಂತೆ ಬಂಧ ನದ ನಂತರದ
ಪ್ರಕ್ರಿಯೆಗಳೆಲ್ಲಾ ಮುಗಿದ ನಂತರ ಇಂದು ನಸುಕಿನ ಜಾವ 2.25ರ ಸುಮಾರಿನಲ್ಲಿ ನ್ಯಾಯಾಧೀಶರಾದ ಕೋಮಲ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ ಶ್ರೀಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಮುಂದಾದರಾದರೂ, ಅದನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಾಧೀಶರು, ಬೆಳಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸುವುದರ ಜೊತೆಗೆ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಆದೇಶ ನೀಡುವುದರ ಜೊತೆಗೆ ಬೆಳಗ್ಗೆ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಬೇಕು ಎಂದು ಆದೇಶಿಸಿದ್ದರು. ಇಂದು ಮುಂಜಾ ನೆಯೇ ಚಿತ್ರದುರ್ಗ ಕೇಂದ್ರ ಕಾರಾಗೃಹಕ್ಕೆ ಮುರುಘಾ ಶ್ರೀಗಳನ್ನು ಕರೆದೊಯ್ಯಲಾಯಿತು. ಕಾರಾಗೃಹದ ಅಧಿಕಾರಿಗಳು ಅವರಿಗೆ ವಿಚಾರಣಾಧೀನ ಬಂಧಿ ಸಂಖ್ಯೆ 2261 ಅನ್ನು ನೀಡಿದ್ದರು. ಅಲ್ಲದೇ ಅವರಿಗೆ ಪ್ರತ್ಯೇಕ ಕೋಣೆಯನ್ನು ಕಲ್ಪಿಸಿದ್ದರು. ರಾತ್ರಿಯಿಡೀ ನಿದ್ದೆಯಿಲ್ಲದೇ ನರಳಾಡಿದರು. ಶ್ರೀಗಳು ಬೆಳಗ್ಗೆ ಜೈಲಿನಲ್ಲಿ ಉಪಹಾರ ಸೇವಿಸಲು ನಿರಾಕರಿಸಿ ಹಾಲು ಮಾತ್ರ ಕುಡಿದರು ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ಡಿಹೆಚ್‍ಓ ಡಾ. ರಂಗನಾಥ್, ಸರ್ಜನ್ ಡಾ. ಬಸವರಾಜ್ ಅಲ್ಲದೇ ದಾವಣಗೆರೆಯ ಕಾರ್ಡಿಯಾಲಜಿಸ್ಟ್ ಡಾ. ಮಲ್ಲೇಶ್, ಡಾ. ಶ್ರೀನಿವಾಸ್ ತಂಡ ಮುರುಘಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಬಸವರಾಜ್ ಅವರು ಮುರುಘಾ ಶ್ರೀಗಳಿಗೆ ಹೃದಯಾಘಾತವಾಗಿ ರುವುದರಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಹೇಳಿದರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್ ಅವರು, ಶರಣರಿಗೆ 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದೆ. ವಯಸ್ಸಾದ ನಂತರ ಇಂತಹ ಸಮಸ್ಯೆ ಬರುವುದು ಸಹಜ. ತಜ್ಞ ವೈದ್ಯರು ಸೆಕೆಂಡ್ ಒಪೀನಿಯನ್ ನೀಡಿದ ಬಳಿಕ ಅವರನ್ನು ಬೆಂಗಳೂರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದಿದ್ದರು.

ಇತ್ತ ಆರೋಪಿ ಇಲ್ಲದೇ ನ್ಯಾಯಾಲಯಕ್ಕೆ ಹಾಜರಾದ ಪೊಲೀಸರನ್ನು ನ್ಯಾಯಾಧೀಶೆ ಕೋಮಲ ಪ್ರಶ್ನಿಸಿದಾಗ, ಆರೋಪಿಗೆ ಆರೋಗ್ಯ ಸಮಸ್ಯೆ ಇದ್ದುದರಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ಉತ್ತರಿಸಿದಾಗ ಕೆರಳಿದ ನ್ಯಾಯಾಧೀಶರು, ನನ್ನ ಕಸ್ಟಡಿಯಲ್ಲಿರುವ (ನ್ಯಾಯಾಂಗ ಬಂಧನ) ಆರೋಪಿಯನ್ನು ನನಗೇ ತಿಳಿಸದೆ ಹೇಗೆ ಆಸ್ಪತ್ರೆಗೆ ದಾಖಲಿದ್ದೀರಿ? ಎಂದು ಪ್ರಶ್ನಿಸಿದರಲ್ಲದೇ, ತಕ್ಷಣವೇ ಆರೋಪಿಯನ್ನು ಹಾಜರುಪಡಿಸುವಂತೆ ತಾಕೀತು ಮಾಡಿದರು. ಮುರುಘಾ ಶರಣರನ್ನು ಆಸ್ಪತ್ರೆಯಿಂದ ಆಂಬುಲೆನ್ಸ್‍ನಲ್ಲಿ ಕರೆತಂದ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಕಟಕಟೆಯಲ್ಲಿ ನಿಲ್ಲುವಂತೆ ನ್ಯಾಯಾಧೀಶರು ತಿಳಿಸಿದಾಗ ಮುರುಘಾ ಶರಣರು ಹಿಂಜರಿದರಾದರೂ, ನಂತರ ಕಟಕಟೆಯಲ್ಲಿ ಹೋಗಿ ನಿಂತರು. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಿದರು. ಆದರೆ ಮೂರು ದಿನ ಮಾತ್ರ ಪೊಲೀಸ್ ಕಸ್ಟಡಿಗೆ ಮುರುಘಾ ಶರಣರನ್ನು ನೀಡಿದ ನ್ಯಾಯಾಧೀಶರು, ಸೆ.5ರಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶಿಸಿದರು. ಆರೋಪಿಗೆ ಅನಾರೋಗ್ಯವಿದ್ದರೆ ಪೊಲೀಸ್ ಕಸ್ಟಡಿಯಲ್ಲೇ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ದಾಖಲಿಸಬೇಕಾದರೆ ತಮ್ಮ ಗಮನಕ್ಕೆ ತರಬೇಕು ಎಂದು ಪೊಲೀಸರಿಗೆ ನ್ಯಾಯಾಧೀಶರು ತಾಕೀತು ಮಾಡಿದರು. ಈ ವೇಳೆ ತೀವ್ರ ದುಃಖದಿಂದ ಮುರುಘಾ ಶರಣರು ಕುಸಿದು ಬಿದ್ದರು. ನಂತರ ವ್ಹೀಲ್ ಚೇರ್‍ನಲ್ಲಿ ನ್ಯಾಯಾಲಯ ದಿಂದ ಮುರುಘಾ ಶರಣರನ್ನು ಕರೆತಂದ ಪೊಲೀಸರು ಆಂಬುಲೆನ್ಸ್‍ನಲ್ಲಿ ಮತ್ತೆ ಆಸ್ಪತ್ರೆಗೆ ಕರೆದೊಯ್ದು, ಆರೋಗ್ಯ ತಪಾಸಣೆ ನಡೆಸಿದ ನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಮುರುಘಾ ಶ್ರೀಗಳ ಬಂಧನಕ್ಕೆ ಭಕ್ತರ ಆಕ್ರೋಶ: ಪೋಕ್ಸೋ ಕಾಯ್ದೆಯಡಿ ಮುರುಘಾ ಶರಣರನ್ನು ಬಂಧಿಸಿರುವುದರ ವಿರುದ್ಧ ಅವರ ಭಕ್ತರು ಆಕ್ರೋಶ ವ್ಯಕ್ತಪಡಿಸಿ, ಮಠದ ಆಡಳಿತಾಧಿಕಾರಿ ಕೆ.ಎಸ್.ಬಸವರಾಜನ್ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಜಿಲ್ಲಾಸ್ಪತ್ರೆಯ ಮುಂದೆ ಇಂದು ನಡೆಯಿತು. ನ್ಯಾಯಾಲಯದಿಂದ ಮುರುಘಾ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದಾಗ ಜಮಾಯಿಸಿದ್ದ ನೂರಾರು ಭಕ್ತರು ಮುರುಘಾ ಶರಣರಿಗೆ ಜಯಕಾರ ಕೂಗಿದರು. ಮುರುಘಾ ಶರಣರು ನಿರಪರಾಧಿಯಾಗಿದ್ದು, ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಎಂದು ಕೆ.ಎಸ್.ಬಸವರಾಜನ್ ವಿರುದ್ಧ ಘೊಷಣೆ ಕೂಗಿದರು.

Translate »