ಮಂಗಳೂರಲ್ಲಿ 3800 ಕೋಟಿಯ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ ರಾಜ್ಯಕ್ಕೆ ಡಬಲ್ ಇಂಜಿನ್ ಧಮಾಕ
News

ಮಂಗಳೂರಲ್ಲಿ 3800 ಕೋಟಿಯ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ ರಾಜ್ಯಕ್ಕೆ ಡಬಲ್ ಇಂಜಿನ್ ಧಮಾಕ

September 3, 2022

ಬೆಂಗಳೂರು, ಸೆ.2(ಕೆಎಂಶಿ)-ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರದ ಮೂಲಕ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳೂರಿನಲ್ಲಿ 3800 ಕೋಟಿ ರೂ. ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಮಾಡಲಾ ಗಿರುವ ಪ್ರಗತಿಯಲ್ಲಿ ದೊಡ್ಡ ಪಾಲು ಕರ್ನಾಟಕಕ್ಕೆ ಲಭಿಸಿದೆ ಎಂದಿದ್ದಾರೆ. ಸಾಗರ ಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೇ ಹಳಿಗಳ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಮನೆಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆ ಯಡಿ 30 ಲಕ್ಷ ಫಲಾನುಭವಿಗಳಿಗೆ 4 ಸಾವಿರ ಕೋಟಿ ರೂ. ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ದೇಶದ ಪ್ರಥಮ ಸ್ವದೇಶಿ ಏರ್‍ಕ್ರಾಫ್ಟ್ ವಾಹಕ ನೌಕೆಯನ್ನು ಇಂದು ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ದೇಶದ ಸೇನಾ ಹಾಗೂ ಆರ್ಥಿಕ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನವ ಮಂಗಳೂರು ಬಂದರಿನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ 3800 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡ ಲಾಗಿದ್ದು, ಇದರಿಂದ ದೇಶದ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಸಾಧ್ಯ ವಾಗಲಿದೆ. `ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ಯಡಿ ಸ್ಥಳೀಯ ಕೃಷಿಕರಿಗೆ ಹಾಗೂ ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭವಾ ಗಲಿದೆ. ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ರಫ್ತು ಸಾಧ್ಯವಾಗ ಲಿದ್ದು, ನವ ಮಂಗಳೂರು ಬಂದರಿನ ಸಾಮರ್ಥ್ಯ ದ್ವಿಗುಣ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾ ದೇವಿ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ.
ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ 3800 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಅವರು ಚಾಲನೆ ನೀಡಿದ್ದು, ಈ ಮೂಲಕ ಕರಾವಳಿಯ ಅಭಿವೃದ್ಧಿಗೆ ವೇಗ ದೊರಕಲಿದೆ. ಬಂದರಿನ ವಹಿವಾಟು ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗಲಿದ್ದು, ದೇಶದ ಆರ್ಥಿಕತೆಗೆ ಬಲ ತುಂಬಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಮಾತ್ರವಲ್ಲದೆ, ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ. ನವಭಾರತದ ನಿರ್ಮಾಣದಲ್ಲಿ ನಮ್ಮ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. ರಾಜ್ಯದ ಸಿಆರ್‍ಜೆಡ್ ಮಾಸ್ಟರ್ ಪ್ಲಾನ್‍ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕಳೆದ 30ವರ್ಷಗಳ ಹೋರಾಟಕ್ಕೆ ಇದೀಗ ಫಲ ದೊರಕಿದೆ. ಇದರಿಂದ ಕರಾವಳಿಯ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಸಾಗರ ಮಾಲಾ ಯೋಜನೆ ಯಡಿ ಕಾರವಾರ ಬಂದರಿನಲ್ಲಿ 276 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಳ್ಳುತ್ತಿವೆ.

Translate »