ಚುನಾವಣೆ ಬಗ್ಗೆ ನಿಮ್ಮಲ್ಲಿ ಅತೀ ಆತ್ಮವಿಶ್ವಾಸವಿದೆ; ವಾಸ್ತವ ಸ್ಥಿತಿ ನಮಗೆ ತಿಳಿದಿದೆ…! ಮೋದಿ ಅತೃಪ್ತಿ
News

ಚುನಾವಣೆ ಬಗ್ಗೆ ನಿಮ್ಮಲ್ಲಿ ಅತೀ ಆತ್ಮವಿಶ್ವಾಸವಿದೆ; ವಾಸ್ತವ ಸ್ಥಿತಿ ನಮಗೆ ತಿಳಿದಿದೆ…! ಮೋದಿ ಅತೃಪ್ತಿ

September 3, 2022

ಬೆಂಗಳೂರು, ಸೆ.2(ಕೆಎಂಶಿ) -ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ಪಕ್ಷ ಮತ್ತು ಸರ್ಕಾರ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಒಂದು ದಿನದ ರಾಜ್ಯ ಪ್ರವಾಸಕ್ಕೆ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿಯವರು ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನಂತರ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸದಸ್ಯರಿಂದ ಚುನಾವಣಾ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ, ಸಲಹೆ ಸೂಚನೆಗಳನ್ನೂ ನೀಡಿದ್ದಾರೆ.

ಪ್ರಧಾನಿ ಅವರು ಮಾತನಾಡುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಂಬರುವ ಚುನಾವಣೆ ಸಿದ್ಧತೆ ಕುರಿತಂತೆ 8 ನಿಮಿಷದ ಪ್ರಾತ್ಯಕ್ಷತೆಯನ್ನು ತೋರಿಸಿ ರಾಜ್ಯದ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಭರವಸೆ ನೀಡಿದ್ದಾರೆ. ಚುನಾ ವಣೆ ವೇಳೆಗೆ 150 ಕ್ಷೇತ್ರಗಳಿಗೆ ವಿಸ್ತರಣೆ ಆಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ಚುನಾವಣೆ ಸಿದ್ಧತೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 5 ನಿಮಿಷದ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದ್ದಾರೆ. ಸರ್ಕಾ ರದ ಮಹತ್ವದ ವಿದ್ಯಾನಿಧಿ ಯೋಜನೆಯ ಮೂಲಕ ಯುವ ಸಮು ದಾಯ ಆಕರ್ಷಿಸಲಾಗುವುದು.
ಇದರಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರಲಿದೆ. ಚುನಾವಣೆಗೆ ಮುನ್ನ ನೀವು ಹಾಗೂ ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಹೆಚ್ಚು ಸಮಯ ಕೊಡಬೇಕು ಎಂದು ಕೋರಿದ್ದಾರೆ.

ಪ್ರಾತ್ಯಕ್ಷತೆ ವೀಕ್ಷಿಸಿದ ನಂತರ ಮಾತನಾಡಿದ ಪ್ರಧಾನಿ, ಪಕ್ಷ ಹಾಗೂ ಸರ್ಕಾರ ಮಾಡಿಕೊಂಡಿರುವ ಪೂರ್ವ ತಯಾರಿ ವಾಸ್ತವಿಕ ನೆಲೆಗಟ್ಟಿನಲ್ಲಿ ಇಲ್ಲ. ಚುನಾವಣೆಯ ಬಗ್ಗೆ ಪಕ್ಷ ಮತ್ತು ಸರ್ಕಾರದಲ್ಲಿ ಅತಿಯಾದ ಆತ್ಮ ವಿಶ್ವಾಸವಿದೆ. ಆದರೆ, ನಮ್ಮ ಬಳಿ ಇರುವ ಮಾಹಿತಿ ಪ್ರಕಾರ ವಾಸ್ತವ ಸಂಗತಿ ಬೇರೆ ಇದೆ. ಕೇಂದ್ರ ನಾಯಕರು ಕಾಲಕಾಲಕ್ಕೆ ನೀಡಿರುವ ಸಲಹೆ ಹಾಗೂ ನಿರ್ದೇಶನಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ವಾಸ್ತವ ಸ್ಥಿತಿಯ ಆಧಾರದ ಮೇಲೆ ತಯಾರಿ ನಡೆಸಿ. ನಾವು ನಿಮಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ರಾಜ್ಯದ ಪ್ರತಿ ಬೂತಿಗೆ ಕನಿಷ್ಠ 20 ಬಿಜೆಪಿ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದೆಯೇ? ಮುಂಬರುವ ವಿಧಾನಸಭಾ ಚುನಾವಣೆಗೆ ಏನೇನು ಸಿದ್ದತೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಚುನಾವಣೆಯ ಜೊತೆಗೆ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆಯೇ? ಸ್ಪಂದಿಸಿದ್ದರೆ, ಅಪಸ್ವರಗಳು ಏಕೆ ಕೇಳಿ ಬಂದಿವೆ ಎಂದಿದ್ದಾರೆ. ರಾಜಕೀಯ ವ್ಯಕ್ತಿಗಳು ಮಾಡುವ ಆರೋಪಗಳನ್ನು ರಾಜಕೀಯ ವಾಗಿ ಎದುರಿಸಿ, ಆದರೆ ಸಾರ್ವಜನಿಕರು, ಉದ್ಯಮಿದಾರರು ಎತ್ತುವ ಪ್ರಶ್ನೆಗಳಿಗೆ ಉತ್ತರ ಒದಗಿಸಿ, ಪರಿಹಾರ ಕಂಡು ಹಿಡಿಯುವುದು ನಮ್ಮ ಕರ್ತವ್ಯ ಎಂದು ಕಿವಿಮಾತು ಹೇಳಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಪಸ್ವರಗಳಿಗೆ ಎಡೆಮಾಡಿಕೊಡಬೇಡಿ, ಒಂದು ಭಾಗದಲ್ಲಿ ಅಭಿವೃದ್ಧಿ ಕೆಲಸವಾದರೆ, ಮತ್ತೊಂದು ಭಾಗದಲ್ಲಿ ಸಂಘಟನೆ ಬಲಿಷ್ಠಗೊಳ್ಳಬೇಕು. ಮುಖಂಡರು ಗಳು ಪ್ರತಿಪಕ್ಷಗಳನ್ನು ಎದುರಿಸಿ, ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ ಒಲವು ಮೂಡಿಸುವ ಕೆಲಸ ನಡೆಯಲಿ. ಚುನಾವಣೆ ಸಮಯದಲ್ಲಿ ಕೈಕಟ್ಟಿ ಕುಳಿತುಕೊಳ್ಳುವುದಲ್ಲ. ಮುಖಂಡರು ಮತ್ತು ಕಾರ್ಯಕರ್ತರು, ಮನೆ ಬಾಗಿಲಿಗೆ ತೆರಳಿ, ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ನಡೆಯಬೇಕು. ಕಾರ್ಯ ಕರ್ತರ ಹುರಿದುಂಬಿಸುವ ಬೃಹತ್ ಸಮಾವೇಶ, ರ್ಯಾಲಿಗಳು ಮತ್ತು ರೋಡ್‍ಶೋ ಗಳನ್ನು ನಡೆಸಿ. ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅಷ್ಟೇ ಅಲ್ಲ ಎಲ್ಲ ವರ್ಗದ ಜನರು ಮತ್ತು ರೈತರನ್ನು ಪಕ್ಷದತ್ತ ಸೆಳೆಯಲು ಕಾರ್ಯಕ್ರಮ ರೂಪಿಸಿ. ನಮ್ಮಿಂದ ನಿಮಗೆ ಏನು ಆಗಬೇಕು, ಅದರ ಪಟ್ಟಿ ಮಾಡಿ ನಮಗೆ ಕಳುಹಿಸಿ, ಕಾನೂನಾತ್ಮಕವಾಗಿದ್ದರೆ, ಅವುಗಳಿಗೆ ತಕ್ಷಣವೇ ಹಸಿರು ನಿಶಾನೆ ನೀಡಲಾಗುವುದು. ವಿಳಂಬ ಮಾಡಬೇಡಿ, ಪ್ರತಿಪಕ್ಷದವರು ಒಂದು ಕೈ ಮೇಲಿದ್ದಾರೆ ಎಂದು ನಾವು ಕುಸಿಯುವುದು ಬೇಡ, ನಮ್ಮ ಬಲಿಷ್ಠತೆಯನ್ನು ತೋರಿಸಲು ಸಿದ್ಧರಾಗಿ ಎಂದು ರಾಜ್ಯ ನಾಯಕರನ್ನು ಹುರಿದುಂಬಿಸಿದ್ದಾರೆ. ಸಭೆಯಲ್ಲಿ ಯಡಿಯೂರಪ್ಪನವರಿಗೆ ಹೆಚ್ಚು ಒತ್ತು ನೀಡಿದ ಪ್ರಧಾನಿಯವರು ಇತರೆ ನಾಯಕರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಚುನಾವಣೆಗಾಗಿ ಪಕ್ಷ ಮತ್ತು ಸರ್ಕಾರದಲ್ಲಿ ಬದಲಾವಣೆ ತರಬೇಕೇ ಎಂಬ ಬಗ್ಗೆಯು ರಾಜ್ಯ ನಾಯಕರಿಂದ ಪ್ರಧಾನಿಯವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಪ್ರಧಾನಿಯವರು ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಸಚಿವರಾದ ಆರ್. ಅಶೋಕ್, ಅಶ್ವತ್ಥ್‍ನಾರಾಯಣ್, ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಭಾಗವಹಿಸಿದ್ದರು

Translate »