ಚಿಣ್ಣರ ಮೇಳಕ್ಕೆ ವರ್ಣರಂಜಿತ ಚಾಲನೆ
ಮೈಸೂರು

ಚಿಣ್ಣರ ಮೇಳಕ್ಕೆ ವರ್ಣರಂಜಿತ ಚಾಲನೆ

April 10, 2023

ಮೈಸೂರು, ಏ.9(ಎಸ್‍ಬಿಡಿ)- ಮೈಸೂ ರಿನ ರಂಗಾಯಣದಲ್ಲಿ `ನಮ್ಮೀ ತಾಯ್ನೆಲ’ ಶೀರ್ಷಿಕೆಯಡಿ ಆಯೋಜಿಸಿರುವ 25 ದಿನಗಳ `ಚಿಣ್ಣರ ಮೇಳ’ಕ್ಕೆ ಭಾನುವಾರ ವರ್ಣರಂಜಿತ ಚಾಲನೆ ದೊರಕಿತು.

ಸಂಗೀತ ನಿರ್ದೇಶಕ, ಗಾಯಕ, ನಟ ವಾಸುಕಿ ವೈಭವ್, ಮಕ್ಕಳಿಗೆ ಬಣ್ಣ ಹಚ್ಚುವ ಮೂಲಕ ಈ ಬಾರಿಯ `ಚಿಣ್ಣರ ಮೇಳ’ ಬೇಸಿಗೆ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರಲ್ಲದೆ, ಮನೋಜ್ಞ ಗೀತ ಗಾಯನದ ಮೂಲಕ ಮಕ್ಕಳೊಂದಿಗೆ ಮಗುವಾಗಿ ನೆರೆದಿದ್ದವರನ್ನು ರಂಜಿಸಿದರು.

ಇದಕ್ಕೂ ಮುನ್ನ ಚಿಣ್ಣರ ಮೇಳದ `ನಮ್ಮೀ ತಾಯ್ನೆಲ’ ಆಶಯಗೀತೆ ಹಾಗೂ ಶ್ರೀನಿವಾಸ ಭಟ್ಟರು ರಚಿಸಿದ ಮಕ್ಕಳ ಹಾಡನ್ನು ರಂಗಾ ಯಣದ ಕಲಾವಿದರು ಹಾಡಿದರು. ಇದೇ ವೇಳೆ ರಂಗಾಯಣ ಸಂಗೀತ ನಿರ್ದೇಶಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿಧನರಾದ ಶ್ರೀನಿವಾಸಭಟ್ಟರ(ಚೀನಿ) ಭಾವ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಚೀನಿ ಅವರಿಗೆ ಸಮ ರ್ಪಿಸಲಾಯಿತು. ಶಿಬಿರದ ನಿರ್ದೇಶಕ ಕೃಷ್ಣ ಕುಮಾರ್ ನಾರ್ಣಕಜೆ, ಶ್ರೀನಿವಾಸಭಟ್ಟರ ಜೀವನ-ಸಾಧನೆಯನ್ನು ತಿಳಿಸಿಕೊಟ್ಟರು.

ನಂತರ `ಇಂದಿನ ವಾರ ಶುಭ ವಾರ…’ ದಾಸ ವಾಣಿ ಪ್ರಸ್ತುತಿಯೊಂದಿಗೆ ಮಾತು ಆರಂಭಿಸಿದ ವಾಸುಕಿ ವೈಭವ್, ನನ್ನ ಜೀವನದಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸಿದೆ. ಶಾಲೆಯಲ್ಲಿ ಶಿಕ್ಷಣ ಪಡೆದರೆ, ರಂಗಭೂಮಿಯಿಂದ ಸಂಸ್ಕಾರ ದೊರೆತಿದೆ. ನಾಲ್ಕಾರು ಜನರೊಂದಿಗೆ ಬೆರೆತರೆ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಪ್ರೀತಿ, ವಿಶ್ವಾಸ ಇನ್ನಿತರ ಮೌಲ್ಯಗಳು ಬೆಳೆಯುತ್ತವೆ. ನನ್ನ ದೃಷ್ಟಿ ಯಲ್ಲಿ ರಂಗಾಯಣ ಹಾಗೂ ಬಿ.ವಿ.ಕಾರಂ ತರು ಬೇರೆಯಲ್ಲ. ಅವರು ಕಟ್ಟಿ ಬೆಳೆಸಿದ ರಂಗಾ ಯಣದಲ್ಲಿ ಆಯೋಜಿಸಿರುವ ಚಿಣ್ಣರ ಮೇಳ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ. ಅಡಿಪಾಯ ಚೆನ್ನಾಗಿದ್ದಾರೆ ಮುಂದೊಂದು ದಿನ ಈ ಮಕ್ಕಳು ಅತ್ಯುತ್ತಮ ಕಲಾವಿದರಾಗಿ ಹೊರಹೊಮ್ಮಬಹುದು. ಈ ಮೇಳಕ್ಕೆ ತಮ್ಮ ಮಕ್ಕಳನ್ನು ಸೇರಿಸಿ, ಒಳ್ಳೆಯ ಕೆಲಸ ಮಾಡಿದಿರಿ ಎಂದು ರಂಗಾಯಣದಲ್ಲಿ ನೆರೆದಿದ್ದ ಪೋಷಕರಿಗೆ ತಿಳಿಸಿದರು.

ಬಾಲ ಸಾಧಕಿ: ಭಾರತೀಯ ಅತೀ ಕಿರಿಯ ವುಶು(ಸಮರಕಲೆ) ಚಾಂಪಿಯನ್ ಎಂದೆನಿಸಿಕೊಂಡಿರುವ ಮೈಸೂರಿನ 9 ವರ್ಷದ ಜಿ.ಪ್ರಣತಿ, ಎಲ್ಲರ ಗಮನ ಸೆಳೆದರು. ಅತೀ ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ್ದರೂ ಅದರ ಛಾಯೆ ಆಕೆಯ ಮುಗ್ದ ಮುಖದಲ್ಲಿ ಕಾಣಿಸಲಿಲ್ಲ. ಕಾರ್ಯಕ್ರಮದಲ್ಲಿ ಸಮರ ಕಲೆ ಪ್ರದರ್ಶಿಸಿ, ನೆರೆದಿದ್ದ ನೂರಾರು ಚಿಣ್ಣರಿಗೆ ಸ್ಫೂರ್ತಿಯಾದಳು. ಪೋಷಕರು, ಕಲಾಸಕ್ತರು ಚಪ್ಪಾಳೆ ಮೂಲಕ ಪುಟ್ಟ ಸಾಧಕಿಯನ್ನು ಪ್ರಶಂಸಿದರು.
ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯ: ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಯಾವುದೇ ಬೇಧ, ಪರಿಧಿ ಇರುವುದಿಲ್ಲ. ವಿಶ್ವವೇ ನನ್ನದೆಂಬ ಭಾವನೆ ಇರುತ್ತದೆ. ಆದರೆ ಬೆಳೆಯುವ ಪರಿಸರದಿಂದ ಬದಲಾಗುತ್ತಾರೆ. ಹಾಗಾಗಿಯೇ ರಾಷ್ಟ್ರಕವಿ ಕುವೆಂವು ಅವರು `ಹುಟ್ಟುವಾಗ ಎಲ್ಲರೂ ವಿಶ್ವಮಾನವರೇ ಆಗಿರುತ್ತಾರೆ. ಆದರೆ ಬೆಳೆಯುತ್ತಾ ಹಲವು ಸಂಕೋಲೆಗಳಲ್ಲಿ ಸಿಲುಕಿ ಅಲ್ಪ ಮಾನವರಾಗುತ್ತಾರೆ’ ಎಂದಿದ್ದಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕು. ಇದು ನಾಲ್ಕು ಗೋಡೆಗಳ ನಡುವೆ ಸಿಗುವುದಿಲ್ಲ. ಆಟ, ಪಾಠ, ಕತೆ, ಗುಂಪು ಚಟುವಟಿಕೆಗಳಿಗೆ ಮೂಲಕ ಪರಸ್ಪರ ಬೆರೆತಾಗ ಪ್ರೀತಿ, ವಿಶ್ವಾಸ, ತಾಳ್ಮೆ, ಎಲ್ಲರನ್ನೂ ಗೌರವಿಸುವ ಗುಣ ಇನ್ನಿತರ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ರಂಗಾಯಣ ಉತ್ತಮ ಅವಕಾಶ ಕಲ್ಪಿಸಿದೆ. 1997ರಿಂದಲೂ ಚಿಣ್ಣರ ಮೇಳ ಆಯೋಜಿಸಿಕೊಂಡು ಬರಲಾಗಿದೆ. ಮೊದಲ ಮೇಳದ ಮುಖಾಮುಖಿಯಲ್ಲಿ ಭಾಗವಹಿಸಿದ್ದ ಶಿವರಾಮ ಕಾರಂತರು ಸೇರಿ ಹಲವು ಸಾಧಕರು ಪಾಲ್ಗೊಂಡು ಹರಿಸಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಈವರೆಗಿನ ಎಲ್ಲಾ ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ಈ ಬಾರಿಯೂ ತಿಂಗಳ ಮುಂಚೆಯೇ ನಿರ್ದೇಶಕರು ಎಲ್ಲರೊಡನೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಿದ್ದರು. ಅದರಂತೆಯೇ ಇಂದಿನಿಂದ ಮೇ 5ರವರೆಗೆ ಚಿಣ್ಣರ ಮೇಳ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಶ್ರೀನಿವಾಸಭಟ್ಟರಿಗೆ ಸಮರ್ಪಿಸ ಲಾಗುತ್ತಿದೆ ಎಂದು ತಿಳಿಸಿದರು. ಹಿರಿಯ ಕಲಾವಿದ ಶಿವಾಜಿರಾವ್ ಜಾದವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಿದ್ದರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರು ಗೈರಾಗಿದ್ದರು. ಮೂರು ವರ್ಷಗಳ ನಂತರ ಚಿಣ್ಣರ ಮೇಳ ಆಯೋಜಿಸಲಾಗಿದ್ದು, `ನಮ್ಮೀ ತಾಯ್ನೆಲ’ ಶೀರ್ಷಿಕೆಯಡಿ ಇಂದಿನಿಂದ ಮೇ 5ರವೆರೆಗೆ ಶಿಬಿರ ನಡೆಯಲಿದೆ. ಧರೆ, ಇಳೆ, ಭುವಿ, ಪೃಥ್ವಿ, ಧರಣಿ, ಭಾರತಿ, ಅವನಿ ಹಾಗೂ ಜನನಿ ತಂಡಗಳಲ್ಲಿ ಸುಮಾರು 300 ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ.

Translate »