ಆನೆ ಪಾಲಕರಾದ ಬೊಮ್ಮನ್, ಬೆಳ್ಳಿ  ದಂಪತಿ ಭೇಟಿ ಮಾಡಿದ ಮೋದಿ
News

ಆನೆ ಪಾಲಕರಾದ ಬೊಮ್ಮನ್, ಬೆಳ್ಳಿ ದಂಪತಿ ಭೇಟಿ ಮಾಡಿದ ಮೋದಿ

April 10, 2023

ಮಧುಮಲೈ,ಏ.9(ಎಂಟಿವೈ, ಎಸ್‍ಎಸ್)- ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಧು ಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭಾನುವಾರ ಭೇಟಿ ನೀಡಿ, ಆಸ್ಕರ್ ಅವಾರ್ಡ್ ಪಡೆದಿರುವ `ದಿ ಎಲಿಫೆಂಟ್ ವಿಸ್ಪ ರರ್ಸ್’ ಕಿರುಚಿತ್ರದ ಪ್ರಮುಖ ಪಾತ್ರಧಾರಿಗಳಾದ ಹಾಗೂ ಆನೆಗಳ ಪಾಲಕರಾದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗಳ ಕುಶಲೋಪರಿ ವಿಚಾರಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾ ರಿಗೆ ಮಾಡಿದ ಬಳಿಕ ಕೆಕ್ಕನಹಳ್ಳ ಬಾರ್ಡರ್‍ನಿಂದ ರಸ್ತೆ ಮಾರ್ಗವಾಗಿ ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು. ಈ ವೇಳೆ ತಾಯಿಯಿಂದ ಬೇರ್ಪಟ್ಟಿದ್ದ ಆನೆ ಮರಿಯನ್ನು ಪಾಲನೆ ಮಾಡಿ ರುವ ಹಾಗೂ ಆಸ್ಕರ್ ಅವಾರ್ಡ್ ಪಡೆದಿರುವ `ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದ ಪ್ರಮುಖ ಪಾತ್ರಧಾರಿಗಳಾದ ಹಾಗೂ ಆನೆಗಳ ಪಾಲಕರಾದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯೊಂದಿಗೆ ಚರ್ಚಿಸಿದರು. ಬಳಿಕ ಆನೆ ಶಿಬಿರದ ಕೃಷ್ಣ, ಭಾಮ, ರಾಣಿ ಸೇರಿದಂತೆ ಇನ್ನಿತರ ಆನೆಗಳಿಗೆ ಕಬ್ಬು ನೀಡಿ, ಉಪಚರಿಸಿದರು.

ಮಾವುತರೊಂದಿಗೆ ಮಾತು: ಬಳಿಕ ಆನೆ ಕ್ಯಾಂಪ್‍ನಲ್ಲಿ ಮಾವುತರಾದ ಕಿರುಮಾರನ್ ಹಾಗೂ ದೇವರಾಜು ಅವರೊಂದಿಗೆ ಸಮಾಲೋಚಿಸಿದರು. ಈ ವೇಳೆ ಮಾವುತರು ಆನೆಗಳ ಪಾಲನೆಯ ಬಗ್ಗೆ ಮಾಹಿತಿ ನೀಡಿದರು.

ಟಿ-23 ಹುಲಿ ಕಾರ್ಯಾಚರಣೆ ಸಿಬ್ಬಂದಿಗಳಿಗೆ ಶ್ಲಾಘನೆ: ಕಳೆದ ಆರು ತಿಂಗಳ ಹಿಂದೆ ಮಧುಮಲೈ ಅರಣ್ಯ ಕಾಡಂಚಿನ ಗ್ರಾಮಗಳ ಉಪಟಳ ನೀಡುತ್ತಿದ್ದ ಟಿ-23 ಸಂಖ್ಯೆಯ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ ಮೀನಕಾಳನ್, ಬೊಮ್ಮನ್ ಹಾಗೂ ಕಾಳನ್ ಎಂಬ ಸಿಬ್ಬಂದಿಗಳನ್ನು ಮಾತನಾಡಿ, ಅವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಈ ಮೂವರಿಗೆ ಈಗಾಗಲೇ ಎನ್‍ಟಿಸಿಎ ವತಿಯಿಂದ ತಲಾ ಒಂದು ಲಕ್ಷ ರೂ. ಮೊತ್ತದ ನಗದು ಬಹುಮಾನ ನೀಡಲಾಗಿದೆ.

ಬಟ್ಟೆ ಬದಲಿಸಿದ ಮೋದಿ: ಬಂಡೀಪುರದಲ್ಲಿ ಸಫಾರಿ ನಡೆಸುವಾಗ ಮತ್ತು ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾಗ ಕ್ಯಾಮಾಫ್ಲೈಸ್ ಧಿರಿಸು ಧರಿಸಿದ್ದ ಪ್ರಧಾನಿ ಮೋದಿ, ಮೈಸೂರಿಗೆ ವಾಪಸ್ಸಾಗುವ ವೇಳೆ ಉಡುಪು ಬದಲಿಸಿದರು. ತೆಪ್ಪಕಾಡು ಬಳಿ ವಿಶ್ರಾಂತಿ ಪಡೆಯಲೆಂದು ಮಾಡಿದ್ದ ರೆಸ್ಟ್ ರೂಮ್‍ನಲ್ಲಿ ಮೋದಿ ಬಿಳಿ ಬಣ್ಣದ ಜುಬ್ಬಾ, ಕುರ್ತಾ, ಕಪ್ಪು ವಾಸ್‍ಕೋಟ್ ಧರಿಸಿದರು. ಬಳಿಕ ಮಸಣಗುಡಿ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿಯ ಓವೆಲ್ ಮೈದಾನದ ಹೆಲಿಪ್ಯಾಡ್‍ಗೆ ಬಂದಿಳಿದರು.

ನಮ್ಮಿಬ್ಬರ ಹೆಗಲ ಮೇಲೆ ಪ್ರಧಾನಮಂತ್ರಿಗಳು ಕೈ ಹಾಕಿದ್ದು ನಮಗೆ ಬಹಳ ಖುಷಿ ತರಿಸಿತು. ದೇಶದ ಪ್ರಧಾನಿಯೊಬ್ಬರು ತಮ್ಮ ಬಳಿಗೆ ಕಾಡಿಗೆ ಬಂದು ಕಾಡು ಕುರುಬರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ನಮ್ಮನ್ನು ಅಭಿನಂದಿಸಿದ್ದು ನಮಗೆ ಹೇಳಿಕೊಳ್ಳಲು ಆಗದಷ್ಟು ಖುಷಿ ತರಿಸಿದೆ. ನಮ್ಮ ಜನರಿಗೆ ವಾಸ ಮಾಡಲು ಒಳ್ಳೆಯ ಮನೆ ಬೇಕು. ಶಾಲಾ ಮಕ್ಕಳಿಗೆ ಲ್ಯಾಪ್‍ಟಾಪ್ ಕೊಡುವಂತೆ ಒಳ್ಳೆಯ ವಿದ್ಯಾಭ್ಯಾಸ ಕೊಡುವಂತೆ ಮನವಿ ಮಾಡಿಕೊಂಡೆವು. ಇದಕ್ಕೆ ಪ್ರಧಾನಿಗಳು ಆಯಿತು ಎಂದರು.

-ಬೆಳ್ಳಿ, ಬೊಮ್ಮ ದಂಪತಿ, ಅಭಿನಂದನೆಗೊಳಗಾದವರು.

Translate »