ಬಂಡೀಪುರದ ರಮ್ಯ ಪ್ರಕೃತಿ ಸೌಂದರ್ಯ ಸವಿದ ಮೋದಿ
ಚಾಮರಾಜನಗರ

ಬಂಡೀಪುರದ ರಮ್ಯ ಪ್ರಕೃತಿ ಸೌಂದರ್ಯ ಸವಿದ ಮೋದಿ

April 10, 2023

ಚಾಮರಾಜನಗರ, ಏ.9(ಎಸ್‍ಎಸ್) -ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀ ಪುರ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿ ಎರಡು ಗಂಟೆಗಳ ಕಾಲ ಸಫಾರಿ ನಡೆಸಿದರು.

ಮೈಸೂರಿನಿಂದ ವಾಯುಪಡೆ ವಿಶೇಷ ಹೆಲಿಕಾಫ್ಟರ್‍ನಲ್ಲಿ ಹೊರಟ ನರೇಂದ್ರ ಮೋದಿ ಬೆಳಗ್ಗೆ 7.20ರ ಸುಮಾರಿಗೆ ಮೇಲುಕಾನಹಳ್ಳಿಯ ಸಫಾರಿ ಕೇಂದ್ರದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿ ಪ್ಯಾಡ್‍ಗೆ ಬಂದಿಳಿದರು. ಇವರನ್ನು ಹಿರಿಯ ಅರಣ್ಯಾಧಿಕಾರಿಗಳಾದ ಡಿ.ಡಿ.ಜಿ. ಸುಬ್ರಮಣ್ಯಂ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರದ ಐಜಿಪಿ ಮುರುಳಿ ಸ್ವಾಗತಿಸಿದರು. ಹಸಿರು ಜಾಕೆಟ್, ಖಾಕಿ ಪ್ಯಾಂಟ್, ಟೋಪಿ ಹಾಗೂ ಕಪ್ಪು ಬಣ್ಣದ ಶೂ ಧರಿಸಿದ ಪ್ರಧಾನಿ ಸಫಾರಿಗೆ
ಹೊಂದಿಕೊಳ್ಳುವ ವಸ್ತ್ರ ಧರಿಸಿದ್ದು ವಿಶೇಷವಾಗಿತ್ತು.

ನಂತರ ಹೆಲಿಪ್ಯಾಡ್‍ನಿಂದ ಬಂಡೀಪುರದಲ್ಲಿ ಸುಮಾರು 6ರಿಂದ 7 ಕಿ.ಮೀ. ತೆರಳಿದರು. ಈ ವೇಳೆ ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ವಿಶೇಷ ಫಲಕವನ್ನು ವೀಕ್ಷಿಸಿ ಫೋಟೋ ತೆಗೆಸಿಕೊಂಡರು. ನಂತರ ಅಲ್ಲೇ ಇದ್ದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಬಳಿಕ 7.50ರ ಸುಮಾರಿನಲ್ಲಿ ತೆರೆದ ಜೀಪ್‍ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಅವರು ಎರಡು ಗಂಟೆಗಳ ಕಾಲ ಬಂಡೀಪುರ ಅರಣ್ಯದಲ್ಲಿ ಸಂಚರಿಸಿ, ಅರಣ್ಯ ಸೌಂದರ್ಯ ಸವಿದರು.

ದರ್ಶನ ನೀಡದ ಹುಲಿ: ಎರಡು ಗಂಟೆಗಳ ಅವಧಿಯಲ್ಲಿ ಮೋದಿ ಅವರು, ಅರಣ್ಯದ ಕಚ್ಚಾ ರಸ್ತೆಯಲ್ಲಿ 22 ಕಿ.ಮೀ ಸಂಚರಿಸಿ ಬಂಡೀಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು. ಈ ವೇಳೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಕಂಡು ಪ್ರಧಾನಿ ಖುಷಿಪಟ್ಟರು. ಆದರೆ, ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕೀರ್ತಿಗೆ ಪಾತ್ರರಾಗಿರುವ ಬಂಡೀಪುರದಲ್ಲಿ ಪ್ರಧಾನಿಯವರಿಗೆ ಹುಲಿ ದರ್ಶನವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಫಾರಿ ವೇಳೆ ಬಂಡೀಪುರ ಅಭಯಾರಣ್ಯದ ಅತೀ ಎತ್ತರದ ಪ್ರದೇಶ ಬೋಳು ಗುಡ್ಡದಲ್ಲಿರುವ ಕಳ್ಳ ಭೇಟೆ ಶಿಬಿರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೆರಳಿ ಅಭಯಾರಣ್ಯದ ಮಧ್ಯೆ ನಿಂತು ಬೈನಾಕುಲರ್ ಹಿಡಿದು ಕೆಲಹೊತ್ತು ಇಡೀ ಕಾಡನ್ನು ವೀಕ್ಷಣೆ ಮಾಡುವ ಮೂಲಕ ಬಂಡೀಪುರ ಸೌಂದರ್ಯ ಕಂಡು ಪುಳಕಿತರು.

ಬಳಿಕ ಬೆಳಗ್ಗೆ 9.50ರ ಸುಮಾರಿನಲ್ಲಿ ಸಫಾರಿ ಮುಗಿಸಿಕೊಂಡು ಕೆಕ್ಕನಹಳ್ಳ ಚೆಕ್‍ಫೋಸ್ಟ್‍ಗೆ ಬಂದ ಮೋದಿ ಅವರು, ಅಲ್ಲಿಂದ ತಮ್ಮ ವಾಹನದಲ್ಲಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು.

ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಎಸ್‍ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Translate »