ಕಫ್ರ್ಯೂ ಬದಲು ಸಂಪೂರ್ಣ ಲಾಕ್‍ಡೌನ್ ಮಾಡಬೇಕಿತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮತ
ಮಂಡ್ಯ

ಕಫ್ರ್ಯೂ ಬದಲು ಸಂಪೂರ್ಣ ಲಾಕ್‍ಡೌನ್ ಮಾಡಬೇಕಿತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮತ

April 27, 2021

ಶ್ರೀರಂಗಪಟ್ಟಣ, ಏ.26- ಸರ್ಕಾರ 14 ದಿನಗಳ ಕಫ್ರ್ಯೂ ಘೋಷಣೆ ಮಾಡುವುದರ ಬದಲು 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಬೇಕಿತ್ತು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಉಪವಿಭಾಗಾ ಧಿಕಾರಿ, ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತ ನಾಡಿದ ಅವರು, ಸರ್ಕಾರ ಲಾಕ್ ಡೌನ್ ಬದಲು ಕಫ್ರ್ಯೂ ಘೋಷಣೆ ಮಾಡಿದೆ.

ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತಿದ್ದೇನೆ. ತಕ್ಷಣ ಲಾಕ್‍ಡೌನ್ ಘೋಷಣೆ ಮಾಡಬೇಕು. ಸೋಂಕಿತರ ಸರಪಳಿಯನ್ನು ಈಗಲೇ ಕತ್ತರಿಸ ಬೇಕಿದೆ. ಮುಂದೊಂದು ದಿನ ಪರಿಸ್ಥಿತಿ ಕೈ ಮೀರಿದ ಮೇಲೆ ಲಾಕ್‍ಡೌನ್ ಘೋಷಣೆ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ 15 ದಿನ ಲಾಕ್‍ಡೌನ್ ಮಾಡಿ ತಕ್ಷಣ ಬಿಪಿಎಲ್ ಕುಟುಂಬದವರಿಗೆ ತಲಾ 10 ಸಾವಿರ ರೂ.ಗಳನ್ನು ಅವರ ಖಾತೆಗೆ ಹಾಕಬೇಕು. ನಿಸ್ಸಹಾಯಕರಿಗೆ ಊಟದ ವ್ಯವಸ್ಥೆ ಮಾಡಬೇಕು, ಬೆಳಗ್ಗೆ 4 ತಾಸು ಜನರು ಓಡಾಡಲು ಅನುಮತಿ ನೀಡಿದ್ದೀರಿ ಇದರಿಂದ ಸೋಂಕಿತರ ಸಂಖ್ಯೆ ಲಕ್ಷಗಟ್ಟಲೆ ಮುಟ್ಟುವ ಸ್ಥಿತಿಗೆ ಹೋಗಲಿದೆ. ಆದ್ದರಿಂದ ಕೂಡಲೇ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳು ಸಿಗದೆ, ಜನ ಭಯಭೀತರಾಗಿದ್ದಾರೆ. ವೆಂಟಿಲೇಟರ್ ಹಾಗೂ ಸೂಕ್ತ ಆಕ್ಸಿಜನ್ ಸಿಗದೆ ಜನರು ಪರದಾಡುತಿದ್ದಾರೆ. ನಾವು ಈ ಹಿಂದೆಯೇ ತಾಲೂಕಿನ ಹೋಬಳಿ ಕೇಂದ್ರಕ್ಕೆ ಒಂದು ವಿದ್ಯುತ್ ಚಿತಾಗಾರ ನೀಡುವಂತೆ ಮನವಿ ಮಾಡಿದ್ದೆ. ಆದರೆ ಸರ್ಕಾರ ಸತ್ತವರಿಗೆ ಚಿತಾಗಾರವಿರಲಿ ಬದುಕಿದ್ದವರಿಗೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರಿದರು.

ತಾಲೂಕು ಆರೋಗ್ಯ ಇಲಾಖೆಯವರು ಎರಡು ಹೆಚ್ಚುವರಿ ಆಂಬುಲೆನ್ಸ್ ಹಾಗೂ ಎರಡು ಹೆಚ್ಚುವರಿ ಜೀಪ್‍ಗಳನ್ನು ಕೇಳಿ ದ್ದಾರೆ. ಅವರಿಗೆ ಅವುಗಳನ್ನ ಒದಗಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡ ಲಾಗಿದೆ, ಸರ್ಕಾರದಿಂದ ಬರಬೇಕಿದ್ದ ಸೌಲಭ್ಯಗಳ ಜೊತೆಗೆ ದಾನಿಗಳ ಸಹಾಯದ ಮೂಲಕ ಒಂದಷ್ಟು ಸೌಲಭ್ಯಗಳನ್ನು ಒದಗಿಸಲು ಸಿದ್ದರಿದ್ದೇವೆ ಎಂದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತ ನೇಣಿಗೆ ಶರಣು :- ತಾಲೂಕಿನ ಅರಕೆರೆ ಗ್ರಾಮದ ಜೈಕುಮಾರ್ (48) ಎಂಬಾತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತಿದ್ದ ವೇಳೆ ಬೆಳಗಿನ ಜಾವ ಕೋವಿಡ್ ವಾರ್ಡ್‍ನಿಂದ ಹೊರ ಬಂದು ಆಸ್ಪತ್ರೆಯ ಆವರಣದಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ವೈಧ್ಯಾಧಿಕಾರಿ ಡಾ.ಮಾರುತಿ ಇವರು ಆರೋಗ್ಯವಾಗಿದ್ದರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಗಣಂಗೂರಿನ ಮುರಾರ್ಜಿ ವಸತಿ ಶಾಲೆಯಲ್ಲಿ ಏ.21ರಂದು ದಾಖಲಾಗಿದ್ದರು. ನಂತರ ಏ.25 ರಂದು ಗಣಂಗೂರಿನ ಮುರಾರ್ಜಿ ವಸತಿ ಶಾಲೆಯಿಂದ ಮತ್ತೆ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಯಿತು. ರಾತ್ರಿ 12ರ ತನಕ ಇಬ್ಬರು ಹೋಂ ಗಾರ್ಡ್‍ಗಳು ಈ ವಾರ್ಡ್ ಬಳಿ ಕಾವಲು ಕಾಯುತ್ತಿದ್ದರು. ನಂತರ ಅವರು ನಿದ್ರೆಗೆ ಜಾರಿದ್ದರಿಂದ ಜೈಕುಮಾರ್ ಪಕ್ಕದಲ್ಲೇ ಇದ್ದ ವಾರ್ಡ್‍ನ ಕೀಯಿಂದ ಬೀಗ ತೆಗೆದು ಹೊರಗೆ ಹೋಗಿ ನೇಣು ಹಾಕಿಕೊಂಡಿದ್ದಾನೆ ಎಂದು ತಿಳಿಸಿದರು.

Translate »