ಮೈಸೂರಿನ ಎಲೆ ತೋಟದಲ್ಲಿಸೆರೆ ಸಿಕ್ಕ ಮೊಸಳೆ
ಮೈಸೂರು

ಮೈಸೂರಿನ ಎಲೆ ತೋಟದಲ್ಲಿಸೆರೆ ಸಿಕ್ಕ ಮೊಸಳೆ

November 18, 2022

ಮೈಸೂರು, ನ.17(ಎಂಟಿವೈ)- ಮೈಸೂರಿನ ರಾಮಾನುಜ ರಸ್ತೆಯ 9ನೇ ಕ್ರಾಸ್‍ನ ಪಕ್ಕದ ಎಲೆ ತೋಟದಲ್ಲಿ ಕಳೆದ ಒಂದು ತಿಂಗಳಿಂದ ಕಣ್ಣಾಮುಚ್ಚಾಲೆ ಆಡುತ್ತ, ಸುತ್ತಮುತ್ತಲ ಜನರಲ್ಲಿ ಭೀತಿ ಹುಟ್ಟಿಸಿದ್ದ ಮೊಸಳೆಯನ್ನು ಇಂದು ಸೆರೆ ಹಿಡಿಯಲಾಗಿದೆ. ಇದು ಸುಮಾರು 45 ವರ್ಷದ ಮೊಸಳೆ ಇರಬಹುದು ಎಂದು ಅಂದಾಜಿಸಿದ್ದು, ಇಲ್ಲಿ ಇನ್ನಷ್ಟು ಮೊಸಳೆ ಇರುವ ಆತಂಕ ವ್ಯಕ್ತವಾಗಿದೆ.

ಕೆಲವು ದಿನಗಳಿಂದ ಪದೇ ಪದೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಮೊಸಳೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿತ್ತು. ನ.13 ರಂದು ಕರುವೊಂದನ್ನು ಬಲಿ ಪಡೆದಿತ್ತು. ಅಲ್ಲದೆ ಜನರ ಮೇಲೂ ದಾಳಿ ಮಾಡಬಹುದೆಂಬ ಆತಂಕ ಉಂಟಾಗಿತ್ತು. ಈ ಹಿನ್ನೆಲೆ ಯಲ್ಲಿ ಕಳೆದ ಎರಡು ದಿನಗಳಿಂದ ಮೊಸಳೆ ಸೆರೆ ಕಾರ್ಯಾ ಚರಣೆ ಮುಂದುವರೆದಿತ್ತು. ಈ ನಡುವೆ ಎಲೆ ತೋಟದ ಗುಂಡಿಯಲ್ಲಿದ್ದ ಕೊಳಚೆ ನೀರನ್ನು ಮೋಟಾರ್ ಪಂಪ್ ಬಳಸಿ ಚರಂಡಿಗೆ ಬಿಡಲಾಗಿತ್ತು. ಆದರೂ ಗುಂಡಿಯಲ್ಲಿ ನೀರು ತುಂಬು ತ್ತಲೇ ಇತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ, ಪಾಲಿಕೆ ವತಿಯಿಂದ ಟ್ರಂಚ್ ನಿರ್ಮಿಸಿ ಅಲ್ಲಿ ಸಂಗ್ರಹವಾಗಿರುವ ನೀರನ್ನು ಹೊರ ಹಾಕಿ, ಮೊಸಳೆ ಸೆರೆ ಕಾರ್ಯಾಚರಣೆ ನಡೆಸುವುದಾಗಿ ಪಾಲಿಕೆಗೆ ಪತ್ರ ಬರೆಯಲಾಗಿತ್ತು. ಅದೇ ರೀತಿ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಚುರುಕುಗೊಳಿಸಿದ ಪಾಲಿಕೆ ಹಾಗೂ ಅರಣ್ಯ ಇಲಾಖೆ ತಂಡ ಎಲೆತೋಟದ ಸುತ್ತಮುತ್ತಲ ಚರಂಡಿಗೆ ಬಲೆ ಹಾಕಿ ಮೊಸಳೆಗಾಗಿ ಕಾರ್ಯಾಚರಣೆ ನಡೆಸಿತ್ತು. ಸಂಜೆ 4.30ರಲ್ಲಿ ಪೊದೆಯೊಂದರ ಬಳಿ ಮೊಸಳೆ ಇದ್ದದ್ದು ಪತ್ತೆಯಾಗಿದೆ. ಒಂದು ತಂಡ ಮೊಸಳೆಯನ್ನು ಅಟ್ಟಿಸಿಕೊಂಡು ಹೋಗಿದೆ. ಕೂಡಲೇ ಚರಂಡಿಗೆ ಇಳಿದ ಮೊಸಳೆ, ನೀರಲ್ಲಿ ಪರಾರಿಯಾಗಲು ಯತ್ನಿಸಿ, ಕೊನೆಗೆ ಬಲೆಯೊಳಗೆ ನುಸುಳಿದೆ. ಈ ವೇಳೆ ಅದನ್ನು ಹಿಂಬಾಲಿಸುತ್ತಿದ್ದ ಸಿಬ್ಬಂದಿ ಬಲೆಯನ್ನು ಮೊಸಳೆಗೆ ಸುತ್ತುವಲ್ಲಿ ಸಫಲರಾಗಿದ್ದಾರೆ. ಅದನ್ನು ಚರಂಡಿಯಿಂದ ಮೇಲೆತ್ತಿ ಪರಿಶೀಲಿಸಿ, ಕಣ್ಣಿಗೆ ಬಟ್ಟೆ, ಕಾಲಿಗೆ ಹಗ್ಗದಿಂದ ಬಿಗಿದು ಅರಣ್ಯ ಇಲಾಖೆಯ ವಾಹನದಲ್ಲಿ ಸಾಗಿಸಲಾಗಿದೆ. ಸೆರೆ ಸಿಕ್ಕ ಮೊಸಳೆ ಅಂದಾಜು 45 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕಬಿನಿಗೆ ರವಾನೆ: ಹೀಗೆ ಸೆರೆ ಹಿಡಿದ ಈ ಮೊಸಳೆಯನ್ನು ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ಕೆ.ಸುರೇಂದ್ರ, ಡಿಆರ್‍ಎಫ್‍ಓಗಳಾದ ವೆಂಕಟಾಚಲ ಮತ್ತು ಸಂಜೀವ್ ಪಾಟೀಲ್, ಪ್ರಾಣಿ ರಕ್ಷಕ ಪ್ರದೀಪ, ಸ್ನೇಕ್ ಶಿವು, ಅಭಯ ಸಿಬ್ಬಂದಿ ಪಾಲ್ಗೊಂಡಿದ್ದರು. ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಸ್ಥಳದಲ್ಲಿದ್ದರು.

Translate »