ಮೈಸೂರು,ನ.21(ಆರ್‍ಕೆ)- ಮಂಗ ಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡ ಪ್ರಕರಣದಲ್ಲಿ ಶಂಕಿತ ಉಗ್ರ ಮೈಸೂರಿ ನಲ್ಲೇ ಬಾಂಬ್ ತಯಾರಿಸುತ್ತಿದ್ದ ಎಂಬುದು ತಿಳಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ತೀವ್ರ ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಭಾನುವಾರ ಮಧ್ಯರಾತ್ರಿಯಿಂದಲೇ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ರಸ್ತೆ, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆಯ ಚೆಕ್‍ಪೋಸ್ಟ್ ಗಳಲ್ಲಿ ದಿನದ 24 ಗಂಟೆಯೂ ಬಂದು ಹೋಗುವ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಹೊರ ಜಿಲ್ಲೆ, ಹೊರ ರಾಜ್ಯಗಳ ನೋಂದಣಿ ಸಂಖ್ಯೆಯ ವಾಹನಗಳು, ದೋಷಪೂರಿತ ಹಾಗೂ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸರು, ಸಂಶಯಾ ಸ್ಪದ ವಾಹನಗಳು, ವ್ಯಕ್ತಿಗಳನ್ನು ವಶಕ್ಕೆ ಪಡೆ ಯುತ್ತಿದ್ದಾರೆ. ಮೈಸೂರಿಗೆ ಬರುವ ಹಾಗೂ ಹೋಗುವ ಎಲ್ಲಾ ವಾಹನಗಳನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಲಾಗುತ್ತಿದೆ.
ಮೂರೂ ಪಾಳಿಯಲ್ಲಿ ಸಬ್‍ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ವಾಹನ ತಪಾಸಣೆಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಪ್ರತೀ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ದೃಶ್ಯಗಳನ್ನು ವೀಕ್ಷಿಸಿ ವಾಹನಗಳ ಚಲನ-ವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಅದೇ ರೀತಿ ಮೈಸೂರಿನ ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲೂ ಪ್ರಯಾಣಿಕರ ಬಗ್ಗೆ ನಿಗಾ ಇರಿಸಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಹೋಟೆಲು, ವಸತಿ ಗೃಹ ಗಳಲ್ಲಿ ವಾಸ್ತವ್ಯ ಹೂಡುವವರ ಸಂಪೂರ್ಣ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಆಯಾ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್‍ಗಳು ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದು, ಸಂಶ ಯಾಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಶಾರೀಕ್ ಕೊಠಡಿ ಬಾಡಿಗೆ ಪಡೆದು ಭಯೋತ್ಪಾದನಾ ಕೃತ್ಯಕ್ಕೆ ಬಾಂಬ್ ತಯಾರಿಸುತ್ತಿದ್ದ ಮೈಸೂರಿನ ಲೋಕನಾಯಕ ನಗರದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ಮಾಡಲಾ ಗಿದೆ. ಪಿಜಿಗಳು, ಹೊರಭಾಗದ ವಸತಿ ನಿಲಯ, ಲಾಡ್ಜ್‍ಗಳು, ಫಾರಂ ಹೌಸ್‍ಗಳ ಮೇಲೂ ನಿಗಾ ವಹಿಸುತ್ತಿರುವ ಪೊಲೀ ಸರು, ರಿಂಗ್ ರಸ್ತೆ ಜಂಕ್ಷನ್‍ಗಳಲ್ಲಿ ಸಂಚಾರ ಪೊಲೀಸರು ಕಟ್ಟೆಚ್ಚರ ವಹಿಸಿ ಅನುಮಾ ನಾಸ್ಪದ ವಾಹನಗಳು ಕಂಡಲ್ಲಿ ವಶಕ್ಕೆ ಪಡೆದು ಪರಿಶೀಲಿಸುವಂತೆ ಉನ್ನತಾಧಿ ಕಾರಿಗಳು ನಿರ್ದೇಶನ ನೀಡಿದ್ದಾರೆ.