ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರತಿಧ್ವನಿ ಮೈಸೂರಲ್ಲಿ ಎನ್‍ಐಎ ಅಧಿಕಾರಿಗಳಿಂದ ತನಿಖೆ ತೀವ್ರ
ಮೈಸೂರು

ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರತಿಧ್ವನಿ ಮೈಸೂರಲ್ಲಿ ಎನ್‍ಐಎ ಅಧಿಕಾರಿಗಳಿಂದ ತನಿಖೆ ತೀವ್ರ

November 22, 2022

ಮೈಸೂರು, ನ. 21(ಆರ್‍ಕೆ)- ಮಂಗಳೂರಿನಲ್ಲಿ ಶನಿವಾರ ಸಂಜೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಐವರು ಸದಸ್ಯರನ್ನೊಳಗೊಂಡ ಎನ್‍ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ತಂಡವು, ಮೈಸೂರಿನಲ್ಲಿ ಇಂದು ತೀವ್ರಗತಿಯಲ್ಲಿ ತನಿಖೆ ನಡೆಸಿತು.

ಶಂಕಿತ ಉಗ್ರ ಮೊಹಮದ್ ಶಾರಿಕ್ ವಾಸವಿದ್ದ ಮನೆಯ ಕೊಠಡಿಯಲ್ಲೇ ರಸಾಯನಿಕ ಬಳಸಿ ಕುಕ್ಕರ್ ಬಾಂಬ್ ತಯಾರಿ ಸುತ್ತಿದ್ದ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿರುವ ಎನ್‍ಐಎ ತಂಡದ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವಿನಿಂದ ಮೇಟಗಳ್ಳಿಯ ಲೋಕನಾಯಕ ನಗರದಲ್ಲಿ ರೂಂನಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕನಾಯಕನಗರದ 2ನೇ ಮುಖ್ಯ ರಸ್ತೆ, 10ನೇ ಕ್ರಾಸ್‍ನಲ್ಲಿರುವ ಮಂಗಳಮ್ಮ ಎಂಬುವರ ಮನೆ ಕೊಠಡಿಯಲ್ಲಿ ವಾಸವಾಗಿದ್ದ ಶಂಕಿತ, ಕುಕ್ಕರ್ ಬಾಂಬ್ ತಯಾರಿಸುತ್ತಿದ್ದು, ಅದಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದರು. ಸೋಮವಾರ ಎನ್‍ಐಎ ಅಧಿಕಾರಿಗಳು, ಆತ ವಾಸಿಸುತ್ತಿದ್ದ ಕೊಠಡಿ ಹಾಗೂ ಪೊಲೀಸರು ವಶಪಡಿಸಿ ಕೊಂಡಿರುವ ವಸ್ತುಗಳನ್ನು ಪರಿಶೀಲಿಸಿದರು. ಅದೇ ರೀತಿ ಮೊಬೈಲ್ ರಿಪೇರಿ ತರಬೇತಿ ಪಡೆದು ಸಿಮ್ ಕಾರ್ಡ್ ಖರೀ ದಿಸಿದ್ದನೆನ್ನಲಾದ ಅಗ್ರಹಾರದ ಮೊಬೈಲ್ ಶಾಪ್‍ಗೂ ಮಧ್ಯಾಹ್ನ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸ್ನೇಹಿತ ಸೈಯದ್ ಅಹಮದ್‍ನೊಂದಿಗೆ ಮೊಬೈಲ್ ರಿಪೇರಿ ತರಬೇತಿ ಪಡೆದಿದ್ದು, ಶಂಕಿತ ಉಗ್ರನೊಂದಿಗೆ ಇನ್ನೂ ಮೂವರು ನಿರಂತರ ಸಂಪರ್ಕ ದಲ್ಲಿದ್ದರು ಎಂದು ತಿಳಿದುಬಂದಿದೆ.
2020ರಿಂದೀಚೆಗೆ ಕರ್ನಾಟಕದ ಎರಡು ಕಡೆ ನಡೆದಿದ್ದ 2 ಕಾನೂನುಬಾಹಿರ ಚಟುವಟಿಕೆ ಪ್ರಕರಣದಲ್ಲಿ ಶಾರಿಕ್ ಭಾಗಿ ಯಾಗಿದ್ದ. 2022ರ ಸೆಪ್ಟೆಂಬರ್‍ನಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಭಯೋತ್ಪಾದನಾ ಕೃತ್ಯದಲ್ಲೂ ಆತ ಪೊಲೀಸರಿಗೆ ಬೇಕಾಗಿ ದ್ದನಲ್ಲದೆ ಐಸಿಸ್ ಸಂಘಟನೆಯೊಂದಿಗೂ ನಂಟು ಹೊಂದಿದ್ದ ನೆಂಬುದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿ, ಅದರ ರೂವಾರಿ ಮೈಸೂರಲ್ಲೇ ಬಾಂಬ್ ಸಿದ್ಧಪಡಿಸುತ್ತಿದ್ದ ಎಂಬ ಸ್ಫೋಟಕ ಮಾಹಿತಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಮ್ಮ ಕಾರ್ಯಾ ಚರಣೆಯನ್ನು ಚುರುಕುಗೊಳಿಸಿದ್ದು, ಮೈಸೂರು ನಗರದಾದ್ಯಂತ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಅನುಮಾನಾಸ್ಪದ ವ್ಯಕ್ತಿಗಳು, ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೈಸೂರು ನಗರದ ಸಾರ್ವಜನಿಕ ಸ್ಥಳಗಳು, ಪ್ರಮುಖ ರಸ್ತೆ, ಸರ್ಕಲ್‍ಗಳು, ಜಂಕ್ಷನ್‍ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುವಂತೆ ಎಚ್ಚರ ವಹಿಸುತ್ತಿರುವ ಪೊಲೀಸರು, ದೃಶ್ಯಾವಳಿ ಮೇಲೆ ನಿರಂತರ ನಿಗಾ ವಹಿಸಿ ಅನು ಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದಾರೆ.

Translate »