ಕಾಂಗ್ರೆಸ್ ಗಂಭೀರ ಆರೋಪ;ಜಾಗೃತಿ ಮೂಡಿಸುವ ನೆಪದಲ್ಲಿ ಮತದಾರರ ಡಾಟಾಗೆ ಕನ್ನ
News

ಕಾಂಗ್ರೆಸ್ ಗಂಭೀರ ಆರೋಪ;ಜಾಗೃತಿ ಮೂಡಿಸುವ ನೆಪದಲ್ಲಿ ಮತದಾರರ ಡಾಟಾಗೆ ಕನ್ನ

November 18, 2022

ಬೆಂಗಳೂರು, ನ.17(ಕೆಎಂಶಿ)- ರಾಜ್ಯದಲ್ಲಿ ಮತ್ತೆ ಪಕ್ಷ ವನ್ನು ಅಧಿಕಾರಕ್ಕೆ ತರಲು ಮತದಾರರನ್ನೇ ಆಪರೇಷನ್ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಇಂದಿಲ್ಲಿ ಗಂಭೀರವಾಗಿ ಆರೋಪಿಸಿದೆ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಮುಂದಿನ ಚುನಾವಣೆಯಲ್ಲಿ ಮತದಾರ ರನ್ನೇ ಆಪರೇಷನ್ ಕಾರ್ಯಾಚರಣೆಗೆ ಒಳಪಡಿಸಿ, ಅಧಿಕಾರಕ್ಕೆ ಬರಲು ಹೊರಟಿದೆ ಎಂದು ದಾಖಲೆ ಸಮೇತ ದೂರಿದ್ದಾರೆ. ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದಿರುವ ಬಿಜೆಪಿ ಸರ್ಕಾರ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾ ಗಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬೆಳ್ಳಂಬೆಳ್ಳಗ್ಗೆ ತುರ್ತು ಪತ್ರಿಕಾಗೋಷ್ಠಿ ಕರೆದು, “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ. ಆಪರೇಷನ್ ಕಮಲದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು.

ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆಯ ಹಗರಣ ನಡೆಸಿದ ಸಂಸ್ಥೆಯ ಹೆಸರು ರಾಜ್ಯದ ಸಚಿವರೊಬ್ಬರ ಒಡೆತನದ ಸಂಸ್ಥೆಯ ಹೆಸರಿನ ಜೊತೆ ತಾಳೆಯಾಗುವುದು ಕಾಕತಾಳೀಯವಾಗಿರಲಾರದು. ಅದೇ ರೀತಿ ಸಂಸ್ಥೆಯ ಕಚೇರಿ ಇರುವ ಸ್ಥಳದ ಸಮೀಪದಲ್ಲಿಯೇ ಈ ಸಂಶಯಿತ ಸಚಿವರ ಸಂಸ್ಥೆಗಳೂ ಇರುವುದು ಸಂಶಯವನ್ನು ಇನ್ನಷ್ಟು ಬಲಪಡಿಸುತ್ತದೆ.

ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗದೆ ಇಂತಹದ್ದೊಂದು ಹಗರಣ ನಡೆಸಲು ಸಾಧ್ಯವಿಲ್ಲ, ಅಧಿಕಾರಿಗಳು ಸ್ವಇಚ್ಛೆಯಿಂದ ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಂದ ಹಿಡಿದು ಹಿರಿಯ ಸಚಿವರೆಲ್ಲರೂ ಭಾಗಿಯಾಗಿಯೇ ಈ ಕೆಲಸ ಮಾಡಿದ್ದಾರೆ. ‘ಮೇಲಿನವರ’ ರಕ್ಷಣೆ ಇಲ್ಲದೆ ಮಹಾನಗರ ಪಾಲಿಕೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡಲು ಅನುಮತಿ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿದ್ದು ಖಾಸಗಿ ಸಂಸ್ಥೆಗೆ ಇದನ್ನು ಒಪ್ಪಿಸುವುದೇ ಅಪರಾಧವಾಗಿದೆ. ಖಾಸಗಿ ಸಂಸ್ಥೆಯ ಸಿಬ್ಬಂದಿಯನ್ನು ಬಿಬಿಎಂಪಿಯ ಅಧಿಕಾರಿಗಳೇ ಎಂದು ತಪ್ಪಾಗಿ ತಿಳಿದು ಮತದಾರರು ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ಇದು ವಿಶ್ವಾಸ ದ್ರೋಹವಾಗಿದೆ. ಚಿಲುಮೆ ಸಂಸ್ಥೆಯ ಮಾಲೀಕ ಕೃಷ್ಣಪ್ಪ ರವಿಕುಮಾರ ಎಂಬುವರು ಈ ಹಗರಣದ ರೂವಾರಿಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಇದರ ಹಿಂದೆ ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಕೈವಾಡ ಖಂಡಿತ ಇದೆ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಬಯಲಾಗಲು ಸಾಧ್ಯ. ಯಾವುದೋ ಒಂದು ಸಂಸ್ಥೆ ಅರ್ಜಿ ನೀಡಿ ತಾವು ಮತದಾರರನ್ನು ಜಾಗೃತಗೊಳಿಸುವ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದಾಗಲೇ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಮೂಡಬೇಕಿತ್ತು. ಹೀಗಿದ್ದರೂ 20 ಆಗಸ್ಟ್ 2022ರಂದು ಬಿಬಿಎಂಪಿ ಆಯುಕ್ತರು ಅನುಮತಿ ನೀಡಿದ್ದಾರೆ. ಜಾಹಿರಾತು ನೀಡದೆ. ಟೆಂಡರ್ ಕರೆಯದೆ ಬಿಬಿಎಂಪಿ ಒಂದು ಖಾಸಗಿ ಕಂಪನಿಗೆ ಈ ಕೆಲಸವನ್ನು ನೀಡಲು ಹೇಗೆ ಸಾಧ್ಯ? ಅನುಮತಿ ನೀಡುವಾಗ ಸಂಸ್ಥೆಯ ಹಿನ್ನೆಲೆಯನ್ನು ಯಾಕೆ ಪರಿಶೀಲಿಸಿಲ್ಲ. ಉಚಿತ ಸೇವೆ ನೀಡುವ ಉದ್ದೇಶದ ಹಿನ್ನೆಲೆಯನ್ನು ಯಾಕೆ ತಿಳಿದುಕೊಂಡಿಲ್ಲ. ಚಿಲುಮೆ ಕಂಪನಿಯವರು ಬಿಬಿಎಂಪಿ ಮೂಲಕ ತಮ್ಮ ನೌಕರರಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದೇ ಅಕ್ರಮವಾಗಿದೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರಲ್ಲದವರು ಬೂತ್ ಲೆವೆಲ್ ಆಫೀಸರ್ ಆಗಲು ಅವಕಾಶ ಇಲ್ಲ.

Translate »