ಸದಾ ಒತ್ತಡದಲ್ಲಿ ಕೆಲಸ ಮಾಡುವ ವೈದ್ಯರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು
ಮೈಸೂರು

ಸದಾ ಒತ್ತಡದಲ್ಲಿ ಕೆಲಸ ಮಾಡುವ ವೈದ್ಯರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು

December 13, 2020

ಮೈಸೂರು, ಡಿ.12(ಎಂಕೆ)- ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ತಮ್ಮ ಆರೋಗ್ಯದ ಬಗೆಗೂ ಗಮನ ಹರಿಸಬೇಕು ಎಂದು ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಸಲಹೆ ನೀಡಿದರು.

ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಮನರಂಜನೆ ಎಂಬುದಿಲ್ಲ. ಜವಾಬ್ದಾರಿ ಜೊತೆಗೆ ಸದಾ ಒತ್ತಡ ದಲ್ಲಿ ಕೆಲಸ ಮಾಡುವ ವೈದ್ಯರು ಹೃದಯ ಮತ್ತು ಕ್ಯಾನ್ಸರ್ ಪತ್ತೆ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.

ಒಬ್ಬರು ರೋಗಿಗೆ ಚಿಕಿತ್ಸೆ ನೀಡುತ್ತಿದ್ದರೆ, ಕೇವಲ 5 ನಿಮಿಷದಲ್ಲಿ 5ರಿಂದ 10 ಮೊಬೈಲ್/ದೂರವಾಣಿ ಕರೆಗಳು ಬರುತ್ತವೆ. ಹೇಗೆ ಚಿಕಿತ್ಸೆ ನೀಡುತ್ತಿದ್ದೀರಿ, ಉಳಿಯುತ್ತಾರೆಯೇ? ಅಥವಾ ಚೆನ್ನಾಗಿ ಚಿಕಿತ್ಸೆ ನೀಡಿ ಎಂಬಿತ್ಯಾದಿ ಒತ್ತಡ ಹಾಕುತ್ತಾರೆ. ಇದರ ನಡುವೆಯೇ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರಿಗೂ ಚಿಕಿತ್ಸೆಯ ಅಗತ್ಯವಿದೆ ಎಂದರು.

ಕೇವಲ 30-40 ವರ್ಷದೊಳಗಿನವರಲ್ಲಿಯೇ ಶೇ.50ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಒಂದೆಡೆ, ಮೊಬೈಲ್, ಕಂಪ್ಯೂಟರ್ ಅತಿ ಬಳಕೆ ಕಾರಣವಾದರೆ, ಮತ್ತೊಂದೆಡೆ ಪರಿಸರ ಮಾಲಿನ್ಯವೂ ಕಾರಣವಾಗಿದೆ. ಒಂದೇ ಸ್ಥಳದಲ್ಲಿ ಸತತ 4 ಗಂಟೆ ಕುಳಿತು ಕೆಲಸ ಮಾಡಿದರೆ 4 ಸಿಗರೇಟ್ ಸೇವನೆ ಮಾಡಿದಂತೆ. ಆದ್ದರಿಂದ ಅವಕಾಶ ಸಿಕ್ಕಾಗಲೆಲ್ಲಾ ಕುರ್ಚಿ ಯಿಂದ ಮೇಲೆದ್ದು ನಡೆದಾಡುವುದು ಒಳ್ಳೆಯದು. 1,500 ಹೆಜ್ಜೆ ನಡೆದರೆ 1 ಕಿಮೀ ನಡೆದಂತೆ ಎಂದು ಮಾರ್ಗದರ್ಶನ ಮಾಡಿದರು.

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ದೇಶದಲ್ಲಿ ಮಧು ಮೇಹ ಮತ್ತು ಹೃದ್ರೋಗಳಿಗೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ತಂದೆ-ತಾಯಂದಿರೇ ಹರೆಯದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಡಾ.ಸಿ.ಎನ್.ಮಂಜುನಾಥ್ ವಿಷಾದಿಸಿದರು.

ಮಾಯುಮಾಲಿನ್ಯದಿಂದಲೂ ಹೃದಯ ಸಂಬಂಧಿ ಕಾಯಿಲೆ ಗಳು ಬರುತ್ತಿವೆ. ದೇಶದಲ್ಲಿ ಪ್ರತಿವರ್ಷ 13 ಲಕ್ಷ ಜನರು ಮಲಿನ ಗಾಳಿ ಸೇವನೆಯಿಂದಲೇ ಸಾಯುತ್ತಿದ್ದಾರೆ. ಕಲುಷಿತ ಗಾಳಿ ಸೇವನೆ ತಂಬಾಕು ಸೇವಿಸಿದಂತೆಯೇ ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಟ ಸಮಸ್ಯೆ, ಕ್ಯಾನ್ಸರ್‍ನಂತಹ ಮಾರಕ ಕಾಯಿಲೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

 

ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಸಂವಹನವಿರ ಬೇಕು. ವೈದ್ಯರು ಸದಾ ನಗುಮುಖದಿಂದ ಚಿಕಿತ್ಸೆ ನೀಡಿದರೆ ರೋಗಿಗಳಲ್ಲಿ ಒತ್ತಡ ತಗ್ಗುತ್ತದೆ. ಮೈಸೂರಲ್ಲಿರುವ ಪ್ರಮುಖ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾವೇರಿ ಆಸ್ಪತ್ರೆಯೂ ಒಂದಾಗಿದ್ದು, ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಮುಂದೆಯೂ ಒಳ್ಳೆಯ ಸೇವೆ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ದೊರಕಲಿ ಎಂದು ಹಾರೈಸಿದರು. ಮೈಸೂರಿನ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ್, ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾ ಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇ ಶಕಿ ಡಾ.ಸರಳಾ ಚಂದ್ರಶೇಖರ್, ಡಾ.ರಾಜಗೋಪಾಲ್, ಡಾ. ರಾಜೀವ್, ಬಿ.ಜೆ.ಸಂದೀಪ್ ಪಟೇಲ್ ಮತ್ತಿತರರಿದ್ದರು.

 

 

Translate »