ಎನ್‍ಐಇ ಕಾಲೇಜಿನಲ್ಲಿ ನೆರೆದವರ ಕಣ್ಮನ ಸೂರೆಗೊಂಡ ಶ್ವಾನ ಪ್ರದರ್ಶನ
ಮೈಸೂರು

ಎನ್‍ಐಇ ಕಾಲೇಜಿನಲ್ಲಿ ನೆರೆದವರ ಕಣ್ಮನ ಸೂರೆಗೊಂಡ ಶ್ವಾನ ಪ್ರದರ್ಶನ

May 22, 2023

ಮೈಸೂರು,ಮೇ 21(ಎಂಟಿವೈ)- ಮೈಸೂರಿನ ಎನ್‍ಐಇ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ಶ್ವಾನಗಳು ತಮ್ಮ ವಯ್ಯಾರದಿಂದ ಸಭಿಕರ ಕಣ್ಮನ ಸೆಳೆದವು.

ಕಾಲೇಜಿನ ವಿದ್ಯಾರ್ಥಿ ಸಂಘವು ಮೈಸೂರು ಕೆನೈನ್ ಕ್ಲಬ್ ನೆರವಿನೊಂದಿಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ 22 ತಳಿಯ 75 ಶ್ವಾನಗಳು ಪಾಲ್ಗೊಂ ಡಿದ್ದವು. ಮೈಸೂರು ಕೆನೈನ್ ಕ್ಲಬ್‍ನಲ್ಲಿ ನೋಂದಣಿ ಮಾಡಿಕೊಂಡು ಮೈಕ್ರೋ ಚಿಪ್ ಅಳವಡಿಸಲಾಗಿರುವ ಶ್ವಾನಗಳನ್ನು ಪ್ರದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕಾಲೇಜಿನ ವಜ್ರಮಹೋತ್ಸವ ಭವನದಲ್ಲಿ ನಡೆದ ಶ್ವಾನ ಪ್ರದರ್ಶನ ವಿದ್ಯಾರ್ಥಿ ಸಮೂಹ ಹಾಗೂ ಶ್ವಾನಪ್ರಿಯರನ್ನು ಆಕರ್ಷಿಸಿತು.

ತಳಿಗೆ ಅನುಗುಣವಾಗಿ ಪ್ರತ್ಯೇಕ ವಿಭಾಗದಲ್ಲಿ ನಡೆದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮುದ್ದಾದ ಶ್ವಾನಗಳು, ಮಾಲೀಕರು ನೀಡಿದ ಆಜ್ಞಾನುಸಾರ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದವು. ಶ್ವಾನಗಳ ನಡಿಗೆ, ಅವುಗಳ ಸುಕೋಮಲ ಕೂದಲು, ಆರೋಗ್ಯಕರ ದೈಹಿಕ ಸದೃಢತೆ ಸೇರಿದಂತೆ ವಿವಿಧ ಆಯಾಮದಲ್ಲಿ ಶ್ವಾನಗಳನ್ನು ಪರೀಕ್ಷಿಸಲಾಯಿತು. ಅಂತಿಮವಾಗಿ ಹೆಚ್ಚು ಅಂಕ ಪಡೆದ ವಿವಿಧ ತಳಿಯ ಒಂದೊಂದು ಶ್ವಾನಕ್ಕೆ ಬಹುಮಾನ ನೀಡಲಾಯಿತು.

ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರಿವರ್, ಶಿಟ್ಜು, ಪಗ್, ಸೇಂಟ್ ಬರ್ನಾಡ್, ಗ್ರೇಟ್ ಡೇನ್, ಸೈಬೀರಿಯನ್ ಹಸ್ಕಿ, ಮುದೋಳ್ ಸೇರಿದಂತೆ ಇನ್ನಿತರ ತಳಿಯ ಶ್ವಾನಗಳು ಪಾಲ್ಗೊಂಡಿದ್ದವು. ಎಲ್ಲಾ ಶ್ವಾನಗಳು ಚಾಣಾಕ್ಷತನ ಪ್ರದರ್ಶಿಸಿ ಗಮನ ಸೆಳೆದವು. ಸ್ಪರ್ಧೆಗೆ ಪಾಲ್ಗೊಳ್ಳಲು ಒಂದು ಶ್ವಾನಕ್ಕೆ 300 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ, ಶ್ವಾನ ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸ ಲಾಗಿತ್ತು. ಇದರಿಂದ ಕಾಲೇಜಿನ ವಿದ್ಯಾರ್ಥಿ ಗಳ ಸಮೂಹದೊಂದಿಗೆ ಶ್ವಾನಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ವಾನಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಬಹುತೇಕರು ಶ್ವಾನದೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

ಮೈಸೂರು ಕೆನೈನ್ ಕ್ಲಬ್ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪಶುಸಂಗೋ ಪನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ.ರಾಜಶೇಖರ್, ಅಭಿಷೇಕ್ ಪರಶಿವಮೂರ್ತಿ, ಎನ್‍ಐಇ ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷ ದೀಕ್ಷಿತ್ ಗೌಡ, ಜಂಟಿ ಕಾರ್ಯದರ್ಶಿ ಸಾರ್ಥಕ್ ಪಿ.ಗೌಡ, ಪ್ರೇಕ್ಷಿತ, ಸುದೀಪ್ ಕುಮಾರ್, ನೀರಜ್ ಎಂ. ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »