ಜೀವನ ಪ್ರೀತಿ, ಜನ ಪ್ರೀತಿ ರಾಮಪ್ರಸಾದರ ವ್ಯಕ್ತಿತ್ವದ ಅರ್ಥಪೂರ್ಣ ಸಂಗತಿ
ಮೈಸೂರು

ಜೀವನ ಪ್ರೀತಿ, ಜನ ಪ್ರೀತಿ ರಾಮಪ್ರಸಾದರ ವ್ಯಕ್ತಿತ್ವದ ಅರ್ಥಪೂರ್ಣ ಸಂಗತಿ

May 22, 2023

ಮೈಸೂರು,ಮೇ 21(ಪಿಎಂ)- ಜೀವನ ಪ್ರೀತಿ ಮತ್ತು ಜನ ಪ್ರೀತಿ ಎಂಬುದು ಹಿರಿಯ ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್ ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳು. ಇವೇ ಅವರ ಶಕ್ತಿ ಎಂದು ಕೆಎಸ್‍ಐಐಡಿಸಿ (ಕರ್ನಾ ಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ) ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಹೇಳಿದರು.

ಮೈಸೂರಿನ ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ, ಹೊಯ್ಸಳ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಸಾಹಿತಿ ಎಸ್.ರಾಮಪ್ರಸಾದ್ ಅವರ ಅಭಿನಂದನಾ ಸಮಾರಂಭದಲ್ಲಿ (80ನೇ ಜನ್ಮದಿನದ ಸಂಭ್ರಮ ಕಾರ್ಯಕ್ರಮ) ಎಸ್.ರಾಮಪ್ರಸಾದ್ ಅವರನ್ನು ಅಭಿನಂ ದಿಸಿ, ಅವರ 4 ಕೃತಿಗಳನ್ನು ಬಿಡುಗಡೆಗೊ ಳಿಸಿ, ಅಭಿನಂದನಾ ಭಾಷಣ ಮಾಡಿದರು.
ರಾಮಪ್ರಸಾದ್ ಅಪಾರ ಜನರ ಪ್ರೀತಿ ಹೊಂದಿದ್ದಾರೆ. ಒಬ್ಬ ವ್ಯಕ್ತಿ ತನ್ನ ಜೀವಿತ ಅವಧಿಯಲ್ಲಿ ಇಷ್ಟೊಂದು ಕೆಲಸ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಇವರ ವಿಚಾರ ದಲ್ಲಿ ಮೂಡುತ್ತದೆ. ಅವರ ಹೆಸರಿನಲ್ಲೇ `ರಾಮ’ ಮತ್ತು `ಪ್ರಸಾದ’ ಎರಡೂ ಇದೆ. ನನ್ನ ಪ್ರಕಾರ ಅವರು ಮೈಸೂರಿಗೆ ರಾಮನ ಪ್ರಸಾದವೇ ಆಗಿದ್ದಾರೆ. ಆ ಮಟ್ಟಿಗೆ ಅವರು ತಮ್ಮ ಜೀವನದಲ್ಲಿ ಕಾಯಕ ಮಾಡಿದ್ದಾರೆ. ಯಾವುದೇ ಕಳಂಕ, ವಿವಾದ ಅವರ ಹತ್ತಿರಕ್ಕೆ ಸುಳಿದಿಲ್ಲ. ಅಧಿಕಾರ, ಅಂತಸ್ತು, ಹೆಸರು ಲಭಿಸುತ್ತಿದ್ದಂತೆ `ಅಹಂ’ ಎಂಬ ಕೋಟೆ ಕಟ್ಟಿಕೊಳ್ಳುವವರೇ ಹೆಚ್ಚು. ಆದರೆ ಇವರು `ಅಹಂ’ ಎಂಬ ಕೋಟೆ ಕಟ್ಟಿಕೊ ಳ್ಳದೇ ಅರ್ಥಪೂರ್ಣ ಬದುಕು ಕಟ್ಟಿಕೊಂಡಿ ದ್ದಾರೆ. ತನ್ನ ಜೊತೆಗೆ ಇರುವವರ ಬದು ಕಿಗೂ ಮೌಲ್ಯಗಳನ್ನು ಕಲ್ಪಿಸಿದ್ದಾರೆ ಎಂದರು.

`ಈ 4 ದಿನಗಳ ಬದುಕಿನಲ್ಲಿ ಹೊಂದಿ ಕೊಂಡು ಬದುಕುವುದು ಎಷ್ಟು ಕಷ್ಟ’ ಎಂಬುದು ಅದ್ಭುತವಾದ ವೇದಾಂತ. ಈ ನಿಟ್ಟಿನಲ್ಲಿ 80 ವರ್ಷದ ರಾಮಪ್ರಸಾದ್ ಸಮಾಜದೊಂದಿಗೆ ಹೊಂದಿಕೊಂಡು ಸಾಗಿ ರುವುದು ಸಾಮಾನ್ಯ ಸಂಗತಿಯಲ್ಲ. ಅವರ `ಮನೆಯೊಂದು ಬಾಗಿಲೈದು’ ಪುಸ್ತಕ ಓದುವಾಗ ಕಣ್ಣಿನಲ್ಲಿ ನೀರು ಬಂದಿತು. ಬಹಳ ಅಂತಃಕರಣದಿಂದ ಬರೆದ ಪುಸ್ತಕ ಇದು. ಈ ಪುಸ್ತಕದಲ್ಲಿ ಅವರು ತಮ್ಮ ಮನೆ ಯನ್ನು ಅನಾಥಾಶ್ರಮ ಎಂದು ಹೇಳಿ ಕೊಂಡಿರುವುದನ್ನು ಓದುವಾಗ ಕಣ್ಣುಗಳು ತುಂಬಿ ಬಂದವು ಎಂದು ಭಾವುಕರಾದರು.

80 ವರ್ಷದ ರಾಮಪ್ರಸಾದ್ ಅವರ ಮನೆಯಲ್ಲಿ ಇವರಿಗಿಂತ ಹಿರಿಯರಾದ ಅವರ ಅಕ್ಕಂದಿರಿದ್ದಾರೆ. ವೃದ್ಧರ ಬದುಕಿನ ಕಷ್ಟದ ಕಲ್ಪನೆ ಬಹುಶಃ ಅನೇಕರಿಗೆ ಇಲ್ಲ. ಅದು ಅನುಭವಿಸಿದವರಿಗೇ ಗೊತ್ತು. ಮಕ್ಕಳು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ಹೋಗುವ ಕಾರಣ ನಗರ ಪ್ರದೇಶದಲ್ಲಿನ ಮನೆಗಳು ವೃದ್ಧಾಶ್ರಮಗಳಂತಾಗುವುದು ಹೆಚ್ಚಾಗುತ್ತಿದೆ. ಇಂತಹ ಮನೆಗಳಲ್ಲಿ ವಯೋ ವೃದ್ಧರ ಕಷ್ಟ ನೋಡಲಾಗದು. ರಾಮ ಪ್ರಸಾದ್ ಇಂತಹ ಪರಿಸ್ಥಿತಿ ಬಗ್ಗೆ ನಕಾರಾ ತ್ಮಕವಾಗಿ ಚಿಂತನೆ ಮಾಡಿದವರಲ್ಲ ಎಂದರು.

ಯಾರ ಕೇಡನ್ನೂ ಬಯಸದ ರಾಮ ಪ್ರಸಾದ್, ಎಲ್ಲರ ಹಿತ ಬಯಸಿದವರು. ವಿಶ್ವಮಾನವರಾಗಿ ಹುಟ್ಟಿ, ವಿಶ್ವಮಾನವ ರಾಗಿಯೇ ಬದುಕಿ, ವಿಶ್ವ ಕುಟುಂಬಿಕರಾಗಿ ಇದ್ದಾರೆ. ಮುಂದಿನ ಪೀಳಿಗೆಗೆ ಇವರ ಬದುಕು ಆದರ್ಶಪ್ರಾಯ. 80 ವರ್ಷ ಪೂರೈ ಸಿರುವ ಅವರು ದೈಹಿಕವಾಗಿ ಸ್ವಲ್ಪ ಅಶಕ್ತ ರಾಗಿ ಕಂಡರೂ ಕ್ರಿಯಾಶೀಲರು. ಮತ್ತೆರಡು ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆ ಗಳನ್ನು ಬರೆಯುವ ಜೊತೆಗೆ ತಮ್ಮ ಆತ್ಮೀ ಯರಿಂದಲೂ ಬರೆಸಿ ಡಾಕ್ಯೂಮೆಂ ಟೇಷನ್ ಮಾಡುವ ಪ್ರವೃತ್ತಿ ಹೊಂದಿರುವ ರಾಮಪ್ರಸಾದ್, ಶತಾಯುಷಿಗಳಾಗಲಿ. ಆ ಕಾರ್ಯಕ್ರಮಕ್ಕೂ ನಾವೆಲ್ಲ ಬರುವಂತಾ ಗಬೇಕು ಎಂದು ಹಾರೈಸಿದರು.

ಇದಕ್ಕೂ ಮುನ್ನ ಎಸ್.ರಾಮಪ್ರಸಾದ್ ಅವರನ್ನು ಹಿತೈಷಿಗಳು, ಅಭಿಮಾನಿಗಳೂ ಪ್ರತ್ಯೇಕವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥ `ರಾಮ ಪ್ರಭೆ’, `ಮನೆಯೊಂದು ಬಾಗಿಲೈದು’, `ಕೇಳು ಜಾಣತಮ್ಮನ ಮುಕ್ತಕಗಳು’, `ಆಳ್ವಾರ್ಸ್ ಅಂಡ್ ಶ್ರೀರಾಮಾನುಜಾಚಾರ್ಯ’ ಕೃತಿ ಗಳನ್ನು ಬಿಡುಗಡೆ ಮಾಡಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃತಿಗಳ ಕುರಿತು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತು ಮುಕ್ತ ವಿವಿ ಕನ್ನಡ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

Translate »