ಮೈಸೂರಲ್ಲಿ ಮಳೆ ಅಬ್ಬರ ಮೂವರು ಬಲಿ
ಮೈಸೂರು

ಮೈಸೂರಲ್ಲಿ ಮಳೆ ಅಬ್ಬರ ಮೂವರು ಬಲಿ

May 22, 2023

ಮೈಸೂರು, ಮೇ 21-ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ತುಂಡಾದ ವಿದ್ಯುತ್ ತಂತಿ ತುಳಿದು ಮೂವರು ಸಾವನ್ನಪ್ಪಿದ್ದಾರೆ.

ಬಿರುಗಾಳಿಯಿಂದಾಗಿ ಹತ್ತಾರು ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವು ಮನೆಗಳ ಛಾವಣಿ ಹಾರಿಹೋಗಿವೆ. ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಗೊಂಡಿದೆ. ಒಟ್ಟಾರೆ ಶನಿವಾರ ಮತ್ತು ಭಾನುವಾರ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ.

ಸಿಡಿಲಿಗೆ ಇಬ್ಬರು ಬಲಿ: ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್(42) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರು ಜಮೀನಿಗೆ ತೆರಳಿದ್ದಾಗ ಗುಡುಗು ಸಹಿತ ಭಾರೀ ಮಳೆ ಶುರುವಾಗಿದೆ. ಕೂಡಲೇ ಅವರು ಜಮೀನಿನಲ್ಲಿದ್ದ ಸಣ್ಣ ಗುಡಿಸಿಲಿನಲ್ಲಿ ಆಶ್ರಯ ಪಡೆದಿದ್ದಾಗ ಈ ಅನಾಹುತ ಸಂಭವಿಸಿದೆ.

ವಿಷಯ ತಿಳಿದು ಹುಣಸೂರು ಶಾಸಕ ಜಿ.ಡಿ. ಹರೀಶ್‍ಗೌಡ ಮೃತ ರೈತನ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನ ಸಹಾಯ ಮಾಡಿದರಲ್ಲದೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವಂತೆ ತಹಸೀಲ್ದಾರ್‍ಗೆ ಸೂಚನೆ ನೀಡಿದರು. ಈ ಸಂದರ್ಭ ದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಆಸ್ವಾಳ್ ಕೆಂಪೇ ಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಉದಯ್, ಕಂದಾಯ ಇಲಾಖೆ ನಿರೀಕ್ಷಕ ನಂದೀಶ್, ಗ್ರಾಮಲೆಕ್ಕಿಗ ಸುಮಂತ್ ಮತ್ತಿತರರಿದ್ದರು. ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಬಳಿಯ ಆವರ್ತಿ ಗ್ರಾಮದ ಲೋಕೇಶ್(55) ಭಾನುವಾರ ಸಂಜೆ ಜಮೀನಿ ನಲ್ಲಿ ಕೆಲಸ ಮಾಡುತ್ತಿದ್ದಾಗ ಬಿರುಸಿನ ಮಳೆಯಾಗಿದ್ದರಿಂದ ಮರದ ಕೆಳಗೆ ನಿಂತಿದ್ದರು. ಈ ಸಿಡಿಲು ಬಡಿದು ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೈಲುಕುಪ್ಪೆ ಪೊಲೀಸರು, ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ವಿದ್ಯುತ್ ತಂತಿ ತುಳಿದು ಸಾವು: ಗಾಳಿ-ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ವಾಮಿ(18) ಎಂಬ ಯುವಕ ಸಾವನ್ನಪ್ಪಿದ್ದಾನೆ. ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಕೂರು ಬಳಿ ಭಾನುವಾರ ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿ ದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ದೊಡ್ಡೆಕೊಪ್ಪಲು ಹರೀಶ್ ಹಾಗೂ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೆಸ್ಕ್ ಬೆಟ್ಟದಪುರದ ಉಪವಿಭಾಗದ ಎಇಇ ಪ್ರಶಾಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಬೆಟ್ಟದಪುರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಪ್ರಕಾಶ ಎಂ.ಎತ್ತಿನ ಮಣಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುರುಬರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕದರೆಗೌಡನ ಕೊಪ್ಪದ ಸುನಿಲ್, ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮನೆಗಳಿಗೆ ಹಾನಿ: ಹುಣಸೂರು ತಾಲೂಕಿನ ಮರೂರು, ಗಾವಡಗೆರೆ, ಮರೂರು ಕಾವಲ್, ಕಟ್ಟೆಮಳಲವಾಡಿ ಭಾಗದಲ್ಲಿ ಮರಗಳು ಹಾಗೂ 20 ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಧರ್ಮಾಪುರ ಸಮೀಪದ ಸುಭಾಷ್ ಕಾಲೊನಿ, ವಿನೋಬ ಕಾಲೊನಿ ಹೊನ್ನಿಕುಪ್ಪೆ ಗ್ರಾಮದಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಸುಭಾಷ್ ಕಾಲೋನಿಯಲ್ಲಿ ಮನೆಯೊಂದರ ಛಾವಣಿ ಹಾರಿಹೋದ ಪರಿಣಾಮ ಮನೆಯೊಳಗೆ ನೀರು ತುಂಬಿದೆ. ಹೊನ್ನಿಕುಪ್ಪೆ ಗ್ರಾಮದಲ್ಲಿ ತೆಂಗಿನಮರ ಬಿದ್ದು ಮನೆಗೆ ಹಾನಿಯಾಗಿದೆ. ಹೆಚ್.ಡಿ.ಕೋಟೆ ಪಟ್ಟಣದ ವಿಶ್ವನಾಥಯ್ಯ ಕಾಲೋನಿಯಲ್ಲಿ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ. ಮಣಿಕಂಠ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ನಗರದಲ್ಲಿ ಮಳೆ ಅಬ್ಬರ: ಮೈಸೂರು ನಗರದೆಲ್ಲೆಡೆ ಭಾನುವಾರ ಭಾರೀ ಗಾಳಿ-ಮಳೆಯಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆÀಗುರುಳಿದ್ದು, ವಿದ್ಯುತ್ ತಂತಿ ತಗುಲಿ ಜಾನುವಾರುವೊಂದು ಮೃತಪಟ್ಟಿದೆ. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ 4 ಗಂಟೆಗೆ ನಗರದ ಕೆಲವೆಡೆ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿ ಯಿತು. ನಂತರ ಕೆಲ ಸಮಯ ಬಿಡುವು ಕೊಟ್ಟ ಮಳೆ 6 ಗಂಟೆಯಿಂದ 7.30ರವರೆಗೂ ಅಬ್ಬರಿಸಿತು. ಭಾರೀ ಗಾಳಿಯಿಂದಾಗಿ ಜಿಲ್ಲಾ ನ್ಯಾಯಾಲಯದ ಎದುರು ಚಾಮ ರಾಜಪುರಂನ ವಿಷ್ಣುವರ್ಧನ್ ರಸ್ತೆಯಲ್ಲಿ ಬೃಹತ್ ಮರವೊಂದು ಬುಡ ಸಮೇತ ನೆಲಕ್ಕುರುಳಿದೆ. ವಿದ್ಯುತ್ ಕಂಬದ ಮೇಲೆ ಮರ ಬಿದ್ದಿರುವುದರಿಂದ ವಿದ್ಯುತ್ ಕಂಬವೂ ತುಂಡಾಗಿದೆ. ಹಾಗೆಯೇ ಹುಣಸೂರು ಮುಖ್ಯ ರಸ್ತೆಯ ಕಲಾಮಂದಿರದ ಎದುರು, ಜೆಎಲ್‍ಬಿ ರಸ್ತೆಯಲ್ಲಿನ ಮುಡಾ ಎದುರು, ಬೋಗಾದಿ 2ನೇ ಹಂತ, ವಿಜಯನಗರ 2ನೇ ಹಂತ, ಆಲನಹಳ್ಳಿ, ಹಳೇ ಆರ್‍ಟಿಓ ತ್ರಿವೇಣಿ ವೃತ್ತ, ವಿದ್ಯಾರಣ್ಯಪುರಂನಲ್ಲಿರುವ ಸೆಂಟ್‍ಥಾಮಸ್ ಸ್ಕೂಲ್ ಹತ್ತಿರ, ಸರಸ್ವತಿಪುರಂನ 5ನೇ ಮುಖ್ಯ ರಸ್ತೆಯಲ್ಲಿ ಮರಗಳು ಧರೆಗುರುಳಿದ್ದರೆ, ಎಂಜಿ ರಸ್ತೆಯಲ್ಲಿರುವ ಕೆ.ಆರ್.ಪೊಲೀಸ್ ಠಾಣೆ ಕಟ್ಟಡದ ಮೇಲೆಯೇ ಮರದ ಕೊಂಬೆಯೊಂದು ಮುರಿದು ಬಿದ್ದಿದೆ.

ಹಲವೆಡೆ ವಿದ್ಯುತ್ ಕಂಬ ನೆಲಸಮ: ಮರಗಳ ಜೊತೆಗೆ ಹಲವೆಡೆ ವಿದ್ಯುತ್ ಕಂಬ ಗಳು ತುಂಡಾಗಿದ್ದು, ಕಗ್ಗತ್ತಲು ಆವರಿಸಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯ ವರುಣ, ಮೆಲ್ಲಹಳ್ಳಿ, ರಮ್ಮನಹಳ್ಳಿ, ಹಂಚ್ಯಾ, ಮೇಗಳಾಪುರ ಮತ್ತಿತರ ಗ್ರಾಮಗಳು ಹತ್ತಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳು ತುಂಡಾಗಿ ಬಿದ್ದ ಪರಿಣಾಮ ಗ್ರಾಮಗಳಲ್ಲಿ ಕತ್ತಲೂ ಆವರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಅಪಾಯಕಾರಿ ಕಟೌಟ್: ನಗರದ ರಾಮಸ್ವಾಮಿ ವೃತ್ತದಲ್ಲಿನ ಫುಟ್‍ಪಾತ್‍ನಲ್ಲಿ ಕಬ್ಬಿಣದ ಪೈಪ್‍ಗಳನ್ನು ಬಳಸಿ ನಿಲ್ಲಿಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೃಹತ್ ಕಟೌಟ್ ಮುರಿದು ಬಿದ್ದಿದ್ದು, ಪಾದಚಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಗಾಳಿಯ ರಭಸಕ್ಕೆ ಬಾರಿ ಎತ್ತರದ ಕಟೌಟ್ ಅರ್ಧಕ್ಕೆ ತುಂಡಾಗಿ, ಪಕದಲ್ಲಿಯೇ ಹಾದು ಹೋಗಿರುವ ಕೇಬಲ್ ವೈರ್‍ಗಳ ಕಂಬದ ಮೇಲೆ ಬಿದ್ದಿದೆ. ನೆಲಕ್ಕೆ ಬಿದ್ದಿದ್ದರೆ ಅನಾಹುತವೇ ಸಂಭವಿಸುತ್ತಿತ್ತು ಎಂದು ಕೆಲ ಪಾದಚಾರಿಗಳು ಆತಂಕ ವ್ಯಕ್ತಪಡಿದರಲ್ಲದೆ ಕೂಡಲೇ ತೆರವು ಗೊಳಿಸದಿದ್ದರೆ ಪಾದಚಾರಿಗಳ ತಲೆ ಮೇಲೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಕಟೌಟ್ ಜೋತು ಬಿದ್ದಿರುವ ಕೆಲಭಾಗದಲ್ಲಿ ಯಾರು ಸಂಚರಿಸಬೇಡಿ ಎಂದು ಎಚ್ಚರಿಸಿದರು.

ಸವಾರರು ಹೈರಾಣ: ಬಾರೀ ಗಾಳಿ-ಮಳೆಯಿಂದಾಗಿ ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಡುವಂತಾಯಿತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ವಾಹನ ಚಾಲಿಸಲು ಸಾಧ್ಯವಾಗದೆ ಅಲ್ಲಲ್ಲಿ ನಿಂತು ಮಳೆ ಕಡಿಮೆಯಾದಂತೆ ಮುಂದೆ ಸಾಗಿದರು. ಹಾಗೆಯೇ ಪ್ರಮುಖ ರಸ್ತೆ, ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದು ಪಾದಚಾರಿಗಳು ಪರದಾಡುವಂತಾಯಿತು. ಹಾಗೆಯೇ ಕೆ.ಆರ್.ನಗರ, ನಂಜನಗೂಡು, ತಿ.ನರಸೀಪುರ ತಾಲೂಕುಗಳ ಹಲವೆಡೆ ಭಾರೀ ಮಳೆಯಾಗಿದ್ದು, ಹಲವು ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

Translate »