ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ರಿಂಗ್ ರೋಡ್ ಜಂಕ್ಷನ್ ಮತ್ತಷ್ಟು ಸುವಿಶಾಲ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ರಿಂಗ್ ರೋಡ್ ಜಂಕ್ಷನ್ ಮತ್ತಷ್ಟು ಸುವಿಶಾಲ

May 24, 2023

ಮೈಸೂರು, ಮೇ 23 (ಆರ್‍ಕೆ)-ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿ, ರಿಂಗ್ ರೋಡ್ ಸಿಗ್ನಲ್ ಲೈಟ್ ಜಂಕ್ಷನ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಡೆಗೂ ತಾತ್ಕಾಲಿಕ ಪರಿಹಾರ ಸಿಕ್ಕಿದೆ.

ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಅಪ ರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾನ್ಹವಿ ಅವರ ನಿರ್ದೇಶನದಂತೆ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ಅವರು, ಎನ್.ಆರ್.ಸಂಚಾರ ಪೊಲೀಸರು ಮೈಸೂರು ಮಹಾ ನಗರಪಾಲಿಕೆ ನೆರವಿನಿಂದ ಮೈಸೂರು-ಬೆಂಗಳೂರು ಹೆದ್ದಾರಿಯ ರಿಂಗ್ ರೋಡ್ ಜಂಕ್ಷನ್ ಅನ್ನು ಸುಧಾರಿಸಿದ್ದಾರೆ.

ಈ ಸಿಗ್ನಲ್ ಲೈಟ್ ಸರ್ಕಲ್ ಮಧ್ಯದಲ್ಲೇ ಇದ್ದ ಕಂಬ ಗಳನ್ನು ಸುಮಾರು 15 ಅಡಿ ದೂರಕ್ಕೆ ಸ್ಥಳಾಂತರಿಸಿರುವು ದಲ್ಲದೇ, ವೃತ್ತದಲ್ಲಿನ ನಾಲ್ಕೂ ರಸ್ತೆಗಳಲ್ಲಿನ ರಸ್ತೆ ವಿಭಜಕಗಳ ಅಗಲ ಕಡಿತಗೊಳಿಸಲಾಗಿದ್ದು, ಇದೀಗ ಸರ್ಕಲ್ ಅಗಲ ವಾಗಿರುವುದರಿಂದ ನಾಲ್ಕೂ ಕಡೆಯಿಂದ ಏಕಕಾಲದಲ್ಲಿ ಐದೈದು ವಾಹನಗಳು ಚಲಿಸಬಹುದಾಗಿದೆ.

ಬೆಂಗಳೂರು ಕಡೆಯಿಂದ, ರಾಯಲ್ ಇನ್ ಜಂಕ್ಷನ್‍ನಿಂದ ಮೈಸೂರು ಕಡೆಯಿಂದ ದೇವೇಗೌಡ ಸರ್ಕಲ್ ಕಡೆಯಿಂದ ಬರುವ ವಾಹನಗಳು ಗ್ರೀನ್ ಸಿಗ್ನಲ್ ಬಂದಾಗ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಯಾವುದೇ ಅಡೆ-ತಡೆಯಿಲ್ಲದೇ ಈಗ ಸರಾಗವಾಗಿ ಮುಂದೆ ಸಾಗಬಹುದಾಗಿದೆ.

ವೃತ್ತದಲ್ಲಿ ರಸ್ತೆ ವಿಭಜಕಗಳು ಅಗಲವಾಗಿದ್ದು, ಸಿಗ್ನಲ್ ಲೈಟ್ ಕಂಬಗಳು ಸರ್ಕಲ್ ಮಧ್ಯೆ ಇದ್ದುದರಿಂದ ಕೇವಲ ಎರಡೆರಡೇ ವಾಹನಗಳು ಸಾಗಬೇಕಿತ್ತು. ಅದರಿಂದ ಗ್ರೀನ್ ಸಿಗ್ನಲ್ ಬಂದಾಗ ಮುಂದೆ ಇದ್ದ ಕೆಲವೇ ವಾಹನಗಳು ಮುಂದೆ ಹೋಗಲು ಸಾಧ್ಯವಾಗುತ್ತಿತ್ತು.

ಅದರಲ್ಲೂ ಶನಿವಾರ, ಭಾನುವಾರ, ಸರ್ಕಾರಿ ರಜಾ ದಿನ ಗಳು, ಹಬ್ಬ-ಹರಿದಿನ, ನಿರಂತರ ನಾಲ್ಕೈದು ದಿನ ನಿರಂತರ ರಜೆ ಬಂದಾಗ ಹಾಗೂ ಪ್ರಮುಖ ಸಮಯದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಹಾಗೂ ಉಳಿದ ಎರಡೂ ಕಡೆ ರಿಂಗ್ ರಸ್ತೆಯಲ್ಲಿ ಸುಮಾರು 400 ಮೀಟರ್‍ಗಳವರೆಗೂ ವಾಹನಗಳು ಸಾಲಾಗಿ ನಿಂತು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿತ್ತು.

ಎಕ್ಸ್‍ಪ್ರೆಸ್ ವೇ ನಿರ್ಮಾಣವಾದ ನಂತರವಂತೂ ಈ ಮಾರ್ಗ ದಲ್ಲಿ ಅತ್ಯಧಿಕ ವಾಹನಗಳು ಸಂಚರಿಸಲಾರಂಭವಾದ ನಂತರ ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಯಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿ ದ್ದರಲ್ಲದೆ, ಸಂಚಾರ ಪೊಲೀಸರೂ ಹೆಣಗಾಡಬೇಕಾಗಿತ್ತು.
ಬೆಂಗಳೂರಿನಿಂದ ಶೀಘ್ರ ಮೈಸೂರು ತಲುಪಿದರೂ, ಕಿರಿ ದಾಗಿದ್ದ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಲೈಟ್ ಜಂಕ್ಷನ್ ದಾಟಲು ಕನಿಷ್ಠ 20 ನಿಮಿಷ ಬೇಕಾಗಿತ್ತಲ್ಲದೆ, ರೆಡ್ ಸಿಗ್ನಲ್ ಬರುತ್ತದೆ ಎಂದು ನಾ ಮುಂದು-ತಾ ಮುಂದು ಎಂದು ಮುಂದೆ ಸಾಗುವ ಭರದಲ್ಲಿ ವಾಹನಗಳು ಪರಸ್ಪರ ಉಜ್ಜಿಕೊಂಡು, ಜಗಳ ಕಾಯುವ ವಾಹನ ಚಾಲಕರಿಂದ ಸರ್ಕಲ್‍ನಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗುತ್ತಿತ್ತು. ದಸರಾ ಮಹೋತ್ಸವ ಸಂದರ್ಭದಲ್ಲಂತೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದು ಹೋಗುತ್ತಿದ್ದರಿಂದ ಈ ಜಂಕ್ಷನ್ ದಾಟುವುದೇ ಒಂದು ತ್ರಾಸವಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದೀಗ ಜಂಕ್ಷನ್ ಅಗಲವಾಗಿದ್ದು, ವಿಭಜಕಗಳ ಅಗಲ ಕಡಿಮೆ ಮಾಡಿ ಸಿಗ್ನಲ್ ಲೈಟ್ ಕಂಬಗಳನ್ನು ಬದಿಗೆ ಸರಿಸಿ ರುವ ಕಾರಣ ವಾಹನಗಳು ಯಾವುದೇ ತಡೆಯಿಲ್ಲದೇ ಸರಾಗ ವಾಗಿ ಹಾಗೂ ವೇಗವಾಗಿ ಮುಂದೆ ಸಾಗುವಂತಾಗಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿದಂತಾಗಿದೆ.

ಮೈಸೂರು-ಬೆಂಗಳೂರು ದಶಪಥ ಎಕ್ಸ್‍ಪ್ರೆಸ್ ಕಾರಿಡಾರ್ ನಿರ್ಮಾಣ ಕಾಮಗಾರಿ ಜೊತೆಯಲ್ಲೇ ಉದ್ದೇಶಿತ ಮಣಿ ಪಾಲ್ ಆಸ್ಪತ್ರೆ ಬಳಿಯ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಫ್ಲೈ ಓವರ್ ಅಥವಾ ಗ್ರೇಡ್ ಸೆಪರೇಟರ್ ನಿರ್ಮಿಸಲಾಗುತ್ತದೆ ಎಂದು ಘೋಷಿಸಿದ್ದರಿಂದ ಈವರೆಗೆ ಜಂಕ್ಷನ್‍ನಿಂದ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸಬೇಕಾಯಿತು.

ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರಾದರೂ, ಫ್ಲೈ ಓವರ್ ಯೋಜನೆ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ, ಎನ್.ಆರ್. ಸಂಚಾರ ಠಾಣೆ ಪೊಲೀಸರೇ ಹಿರಿಯ ಅಧಿಕಾರಿಗಳ ಗಮನ ಸೆಳೆದು ಮೈಸೂರು ನಗರಪಾಲಿಕೆ ಸಹಾಯ ಪಡೆದು ಸರ್ಕಲ್ ಅನ್ನು ಅಗಲೀಕರಣಗೊಳಿಸಿರು ವುದು ಶ್ಲಾಘನೀಯ. ಇದೀಗ ವಾಹನ ಚಾಲಕರು, ಸವಾರರು ನಿಟ್ಟುಸಿರು ಬಿಡುತ್ತಿದ್ದು, ಸಂಚಾರ ಪೊಲೀಸರ ಕಾರ್ಯವನ್ನು ಪ್ರಶಂಸಿಸುತ್ತಿದ್ದಾರೆ. ಸಿಗ್ನಲ್‍ಗಾಗಿ ಕಾಯುತ್ತಿದ್ದ ಅಷ್ಟೂ ವಾಹನ ಗಳು ರೆಡ್ ಸಿಗ್ನಲ್ ಬರುವಷ್ಟರಲ್ಲಿ ಪಾಸಾಗುತ್ತಿರುವುದರಿಂದ ಎಲ್ಲರೂ ಖುಷಿಯಾಗಿ ಸಂಚರಿಸುವಂತಾಗಿದೆ.

Translate »