ಮೈಸೂರಲ್ಲಿ `ಪವಾಡ ಬಸವ’ನ ಆಕರ್ಷಕ ಮೆರವಣಿಗೆ; ಭಕ್ತರಿಂದ ಭಕ್ತಿ ಸಮರ್ಪಣೆ
ಮೈಸೂರು

ಮೈಸೂರಲ್ಲಿ `ಪವಾಡ ಬಸವ’ನ ಆಕರ್ಷಕ ಮೆರವಣಿಗೆ; ಭಕ್ತರಿಂದ ಭಕ್ತಿ ಸಮರ್ಪಣೆ

April 25, 2022

ಮೈಸೂರು,ಏ.24(ಆರ್‍ಕೆಬಿ)-ಇಷ್ಟಾರ್ಥ ನೆರವೇರಿ ಸುವ ಕಲಿಯುಗದ ಬಸವಣ್ಣ ಎಂದೇ ಖ್ಯಾತವಾಗಿರುವ ಪವಾಡ ಬಸವನ ಮೆರವಣಿಗೆ ಮೈಸೂರಿನಲ್ಲಿ ಭಾನುವಾರ ನೆರವೇರಿತು. ಕುವೆಂಪುನಗರ ಬಸ್ ಡಿಪೋ ಬಳಿಯಿರುವ ತರಕಾರಿ ಅಂಗಡಿಯೊಂದರ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ವಿವೇಕಾನಂದ ನಗರ ವೃತ್ತ, ನಿಮಿಷಾಂಬ ನಗರ ರಸ್ತೆ, ರಾಮಕೃಷ್ಣನಗರದ ಮುಖ್ಯ ರಸ್ತೆಯಿಂದ ಸುಯೋಗ ಆಸ್ಪತ್ರೆ ರಸ್ತೆ ಮೂಲಕ ರಾಮಕೃಷ್ಣಗರ ಜಿ ಬ್ಲಾಕ್‍ನಲ್ಲಿರುವ ಲಿಂಗಾಂಬುದಿ ಪಾರ್ಕ್ ಬಳಿಯಿರುವ ವೃಷಭ ದೇವಸ್ಥಾನದವರೆಗೆ ರಾಜಗಾಂಭೀರ್ಯದಿಂದ ಸಾಗಿದ ಪವಾಡ ಬಸವ, ಭಕ್ತರಿಗೆ ಆಶಿರ್ವದಿಸಿತು.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಕವಣಾ ಪುರ ಧರ್ಮಕ್ಷೇತ್ರ ಬಸವೇಶ್ವರ ದೇವಾಲಯದ ಪವಾಡ ಬಸವನಿಗಾಗಿಯೇ ವಿಶೇಷವಾಗಿ ಸುಸಜ್ಜಿತ ಬಸವ ರಥ ನಿರ್ಮಿಸಲಾಗಿದ್ದು, ಅದರಲ್ಲಿ ಆಗಮಿಸಿದ ಪವಾಡ ಬಸವನಿಗೆ ಕುವೆಂಪುನಗರದ ಬಸ್ ಡಿಪೋ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಹೊರಟ ಬಸವನಿಗೆ ಮೆರವಣಿಗೆ ಉದ್ದಕ್ಕೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಅನೇಕ ಭಕ್ತರು ಕಷ್ಟ ಕಳೆಯಲು ವರ ಬೇಡಿ ಬಸವನ ಮುಂದೆ ಮಲಗಿದರು. ಅವರ ಪ್ರಾರ್ಥನೆಯನ್ನು ಮನ್ನಿಸಿ ಅವರನ್ನು ದಾಟಿದ ಬಸವ ಆಶೀರ್ವದಿಸುತ್ತಿದ್ದದು ವಿಶೇಷವಾಗಿತ್ತು.

ಬಸವನ ಮೆರವಣಿಗೆ ಆರಂಭದಲ್ಲಿ ತರಕಾರಿ ರಘು ಮತ್ತು ಕುಟುಂಬದವರು, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ.ಗಂಗಾಧರ್ ಇನ್ನಿತರರು ಮೆರವಣಿಗೆ ಆರಂಭದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಸಿ ಬಸವನ ಆಶೀರ್ವಾದ ಪಡೆದುಕೊಂಡರು.
ಮೆರವಣಿಗೆ ಲಿಂಗಾಂಬುದಿ ಪಾರ್ಕ್ ಬಳಿಯ ವೃಷಭ ದೇವಸ್ಥಾನದ ಬಳಿ ಅಂತ್ಯಗೊಂಡಿತು. ದೇವಸ್ಥಾನದಲ್ಲಿ ಪವಾಡ ಬಸವನಿಗೆ ಪೂಜಿಸಲಾಯಿತು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಇದರ ಅಂಗವಾಗಿ ಸುಯೋಗ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬರದಲ್ಲಿ ನೂರಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಚಾಲನೆ ನೀಡಿ, ಮಾತ ನಾಡಿ, ಲಿಂಗಾಂಬುದಿ ಪಾರ್ಕ್ ಸುತ್ತಮುತ್ತಲಿನ ಪ್ರದೇಶ ದಲ್ಲಿ ಓಡಾಡುತ್ತಿದ್ದ ಜನರ ಪ್ರೀತಿಯ ಬಸವ ಮರಣ ಹೊಂದಿತು. ಅದಕ್ಕೆ ಭಕ್ತರೆಲ್ಲರೂ ಕೂಡಿ ಅಂತ್ಯ ಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿಯೇ 15 ವರ್ಷದ ಹಿಂದೆ ವೃಷಭ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇಂದು ಈ ದೇವ ಸ್ಥಾನ ಬೇಡಿ ಬಂದ ನೂರಾರು ಭಕ್ತರಿಗೆ ಆಶೀರ್ವದಿಸುತ್ತಿದೆ. ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಹೇಳಿದರು.

ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ.ಯೋಗಣ್ಣ ಮಾತ ನಾಡಿ, ಆಧುನಿಕ ಜೀವನ ಶೈಲಿಯಿಂದ ಇಂದು ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಘ ಇದೆ. 500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಕ್ಕರೆ ಕಾಯಿಲೆ ಇರುವವರೆಲ್ಲರೂ ಈ ಸಂಘದ ಸದಸ್ಯರಾಗಿ ಪರಸ್ಪರ ವಿಚಾರ ವಿನಿಮಯದ ಮೂಲಕ ಸಕ್ಕರೆ ರೋಗವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಮಾತನಾಡಿ, ಜನರ ಮನಸ್ಸಿನಲ್ಲಿ ಸದಾ ಗೊಂದಲ, ಧರ್ಮದ ಗಲಾಟೆಗಳು ಟಿವಿ, ವಾಟ್ಸಾಪ್‍ಗಳಲ್ಲಿ ದಿನವೂ ಒಂದಿಲ್ಲೊಂದು ವಿಚಾರದಲ್ಲಿ ಧವರ್iದ ಚರ್ಚೆಗಳೇ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿ ಕದಡುವಂತಾಗಿದೆ. ಬಸವೇ ಶ್ವರರು ಹೇಳಿದಂತೆ ಮಾನವೀಯ ಮೌಲ್ಯ ಬಿಡದೇ ಅಳವಡಿಸಿಕೊಂಡರೆ ಧರ್ಮ, ಜಾತಿ, ಭೇದ ಮರೆಯಾಗಿ ಎಲ್ಲರೂ ಶಾಂತಿಯಿಂದಿರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತರಕಾರಿ ರಘು, ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಮುಖಂಡ ರಾದ ಮಂಜುನಾಥ್, ಪ್ರಭಾಕರ್, ರವಿಕುಮಾರ್ ನಾಯಕ್, ಕೃಷ್ಣಯ್ಯ, ಮಣಿವನ್, ಮಹೇಶ್, ಯೋಗೇಶ್‍ಗೌಡ, ರಾಮನಾಯಕ, ಜವರಪ್ಪ, ಬಸವಪ್ಪ, ಮಲ್ಲಿಕಾರ್ಜುನ ಸ್ವಾಮಿ, ಜೆ.ರಘು, ಸೋಮಶೇಖರ್ ಇತರರಿದ್ದರು.

Translate »