ಹತ್ತೇ ದಿನದಲ್ಲಿ6,329 ಪ್ರಕರಣದಲ್ಲಿ 28.67 ಲಕ್ಷ ರೂ. ದಂಡ ಸಂಗ್ರಹ
ಮೈಸೂರು

ಹತ್ತೇ ದಿನದಲ್ಲಿ6,329 ಪ್ರಕರಣದಲ್ಲಿ 28.67 ಲಕ್ಷ ರೂ. ದಂಡ ಸಂಗ್ರಹ

June 5, 2022

ಸಂಚಾರ ನಿಯಮ ಉಲ್ಲಂಘನೆ ವಿಶೇಷ ಕಾರ್ಯಾಚರಣೆ

ಮೈಸೂರು, ಜೂ.೪(ಆರ್‌ಕೆ)- ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಮೈಸೂರಿನ ಸಂಚಾರ ಠಾಣೆಗಳ ಪೊಲೀಸರು ಕೇವಲ ೧೦ ದಿನದಲ್ಲಿ ೬,೩೨೯ ಪ್ರಕರಣ ದಾಖಲಿಸಿ ಒಟ್ಟು ೨೮,೬೭, ೪೦೦ ರೂ. ದಂಡ ಸಂಗ್ರಹಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು, ಹೆಲ್ಮೆಟ್ ಧರಿಸದೇ ಚಾಲನೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರು ವುದು, ಸಿಗ್ನಲ್ ಜಂಪ್, ಅತೀ ವೇಗ ಮತ್ತು ಅಜಾಗರೂಕ ಚಾಲನೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯಂತಹ ಸಂಚಾರ ನಿಯಮ ಉಲ್ಲಂಘನೆ ಮಾಡುವುದು ಹೆಚ್ಚಾಗಿ ಕಂಡು ಬಂದ ಕಾರಣ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿರ್ದೇಶನದಂತೆ ಮೇ ೨೫ರಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು.

ಮೇ ೨೫ರಿಂದ ಜೂ.೩ರ ವರೆಗೆ ಕಳೆದ ೧೦ ದಿನಗಳಲ್ಲಿ ೬,೩೨೯ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ೨೮,೬೭, ೪೦೦ ರೂ. ದಂಡ ವಸೂಲು ಮಾಡಲಾಗಿದೆ. ಕೆ.ಆರ್.ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ೨,೨೮೩ ಪ್ರಕರಣ ದಾಖಲಿಸಿ ೮,೬೪,೨೦೦ ರೂ. ದಂಡ ವಿಧಿಸಿದ್ದರೆ, ಎನ್.ಆರ್. ಸಂಚಾರ ಠಾಣೆಯಲ್ಲಿ ೧,೫೦೧ ಪ್ರಕರಣದಲ್ಲಿ ೭,೪೪,೪೦೦ ರೂ. ಹಾಗೂ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ೧,೦೭೭ ಪ್ರಕರಣ ದಾಖಲಿಸಿ ಒಟ್ಟು ೫,೦೮,೯೦೦ ರೂ. ದಂಡ ವಸೂಲಿ ಮಾಡಿದ್ದಾರೆ. ಅದೇ ರೀತಿ ವಿವಿಪುರಂ ಸಂಚಾರ ಠಾಣೆ ಪೊಲೀಸರು ೭೮೬ ಪ್ರಕರಣ ದಾಖಲಿಸಿದ್ದು, ೩,೭೯,೬೦೦ ರೂ., ದೇವರಾಜ ಸಂಚಾರ ಠಾಣೆ ಪೊಲೀಸರು ೬೮೨ ಪ್ರಕರಣದಲ್ಲಿ ೩,೭೦,೩೦೦ ರೂ.ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.

ರಸ್ತೆ ಸುರಕ್ಷತೆ, ನಿಯಮ ಪಾಲನೆ, ವಾಹನ ಚಾಲನೆಯಲ್ಲಿ ಶಿಸ್ತು ಮೂಡಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಿ ಸಾವು-ನೋವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಈ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನ ಸಂಚಾರ ನಿಯಮ ಪಾಲಿಸಬೇಕೆಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಲಹೆ ನೀಡಿದ್ದಾರೆ.

 

Translate »