ಪ್ರಧಾನಿ ಮೋದಿ ತವರು ಗುಜರಾತ್‍ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
News

ಪ್ರಧಾನಿ ಮೋದಿ ತವರು ಗುಜರಾತ್‍ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

December 9, 2022

ಅಹಮದಾಬಾದ್, ಡಿ.8-ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಸತತ ಏಳನೇ ಬಾರಿಗೆ ಪ್ರಧಾನಿ ಮೋದಿ ತವರಿನಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ತನ್ನ ಗೆಲುವಿನ ನಾಗಾ ಲೋಟವನ್ನು ಮುಂದುವರೆಸಿದೆ.

ಒಟ್ಟು 182 ಕ್ಷೇತ್ರಗಳ ಪೈಕಿ ಬಿಜೆಪಿ 156 ಸ್ಥಾನ ಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಕೇವಲ 17 ಸ್ಥಾನಗಳಿಗೆ ಕುಸಿದಿದೆ. ಆಮ್ ಆದ್ಮಿ ಪಾರ್ಟಿ 5 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ನಾಲ್ವರು ಇತರರು ಗೆಲುವು ಸಾಧಿಸಿದ್ದಾರೆ. ಗುಜರಾತ್ ವಿಧಾನಸಭೆ ಇತಿಹಾಸದಲ್ಲಿ ಸತತ ಏಳನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದ ದಾಖಲೆ ಜೊತೆಗೆ ಅತೀ ಹೆಚ್ಚು ಸ್ಥಾನಗಳನ್ನು ಪಡೆದ ದಾಖಲೆಯನ್ನೂ ಕೂಡ ಈ ಚುನಾವಣೆಯಲ್ಲಿ ಬಿಜೆಪಿ ನಿರ್ಮಿಸಿದೆ. 1985 ರಲ್ಲಿ 149 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ದಾಖಲೆ ಸೃಷ್ಟಿಸಿತ್ತು.

ಇದೀಗ ಈ ದಾಖಲೆಯನ್ನು ಬಿಜೆಪಿ ಮುರಿದಿದೆ. ಗುಜರಾತ್‍ನಲ್ಲಿ ಮುಸ್ಲಿಂ ಪ್ರಾಬಲ್ಯ ವಿರುವ 19 ಕ್ಷೇತ್ರಗಳ ಪೈಕಿ 17ರಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮುಸ್ಲಿಮರೂ ಕೂಡ ತಮ್ಮ ಮೇಲೆ ಒಲವು ಹೊಂದಿದ್ದಾರೆ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿದೆ. ಉಳಿದ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾದರೆ, ಮುಸ್ಲಿಂ ಪ್ರಾಬಲ್ಯವಿರುವ 19 ಕ್ಷೇತ್ರಗಳ ಪೈಕಿ 13ರಲ್ಲಿ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಒಂದೇ ಒಂದು ಸ್ಥಾನವನ್ನೂ ಕೂಡ ಪಡೆಯುವಲ್ಲಿ ವಿಫಲವಾಗಿದೆ. ಲಿಂಬಾಯತ್ ಕ್ಷೇತ್ರದಲ್ಲಿ ಒಟ್ಟು 44 ಮಂದಿ ಸ್ಪರ್ಧಿಸಿದ್ದು, ಅವರಲ್ಲಿ 36 ಅಭ್ಯರ್ಥಿಗಳು ಮುಸ್ಲೀಮರಾಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗೀತಾ ಬೆನ್ ರಾಜೇಂದ್ರ ಪಾಟೀಲ್ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಗೋಧ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರ ಸಿನ್ಹ ರಾಮಲ್ಜಿ ಅವರು ಸತತ 6ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗಾಂಧಿ ಧಾಮ ಕ್ಷೇತ್ರದಲ್ಲಿ ತಮ್ಮ ಸೋಲು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಭರತ್ ಬೈ ವೆಲ್ಜಿಬೈ ಸೋಲಂಕಿ ಅವರು ಕತ್ತಿಗೆ ಕೇಸರಿ ಶಾಲನ್ನು ಬಿಗಿಯಾಗಿ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೈಡ್ರಾಮಾ ನಡೆಸಿದ ವೀಡಿಯೋ ವೈರಲ್ ಆಗಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿ 156 ಸ್ಥಾನಗಳನ್ನು ಪಡೆದರೆ, ಆಗ 77 ಸ್ಥಾನ ಪಡೆದಿದ್ದ ಕಾಂಗ್ರೆಸ್ 17ಕ್ಕೆ ಕುಸಿದಿದೆ. ಅಧಿಕೃತ ವಿರೋಧ ಪಕ್ಷ ಸ್ಥಾನ ದೊರೆಯಬೇಕಾದರೆ, ಒಟ್ಟು ಕ್ಷೇತ್ರಗಳ ಪೈಕಿ ಕನಿಷ್ಠ ಶೇ.10ರಷ್ಟು ಸ್ಥಾನಗಳನ್ನು ಪಡೆದಿರಬೇಕು. ಗುಜರಾತ್‍ನಲ್ಲಿ ಒಟ್ಟು 182 ಸ್ಥಾನಗಳಿದ್ದು, ಕಾಂಗ್ರೆಸ್ ಕೇವಲ 17 ಸ್ಥಾನ ಮಾತ್ರ ಗಳಿಸಿರುವುದರಿಂದ ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯಲೂ ಕಾಂಗ್ರೆಸ್ ವಿಫಲವಾಗಿದೆ.

Translate »