ವಿದ್ಯುತ್ ದರ ಕಡಿತಕ್ಕೆ ಸಂಪುಟ ಸಭೆ ಸಮ್ಮತಿ
News

ವಿದ್ಯುತ್ ದರ ಕಡಿತಕ್ಕೆ ಸಂಪುಟ ಸಭೆ ಸಮ್ಮತಿ

December 9, 2022

ಬೆಂಗಳೂರು, ಡಿ.8(ಕೆಎಂಶಿ)- ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ವಿದ್ಯುತ್ ದರ ಕಡಿತಗೊಳಿಸಲು ತೀರ್ಮಾನಿಸಿರುವ ಸರ್ಕಾರ, ಇದರಿಂದ ವಿದ್ಯುತ್ ಕಂಪನಿಗಾಗುವ 3000 ಕೋಟಿ ರೂ. ನಷ್ಟ ಭರಿಸಲು ಸಚಿವ ಸಂಪುಟ ಸಮ್ಮತಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸರ್ಕಾರದಿಂದ ಹಣಕಾಸಿನ ನೆರವು ಒದಗಿಸುವುದರ ಜೊತೆಗೆ ಮೂರು ಸಾವಿರ ಕೋಟಿ ರೂ.ಗಳ ಸಾಲವನ್ನು ಪಡೆಯಲು ಖಾತರಿ ನೀಡಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿದ್ಯುತ್ ಪ್ರಸರಣ ನಿಗಮಗಳು ಪ್ರತಿ ಯುನಿಟ್‍ಗೆ 2 ರಿಂದ 3 ರೂ. ದರ ಹೆಚ್ಚಳ ಮಾಡಿ ದ್ದವು. ಇದರಿಂದ ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತಿದೆ ಎಂಬುದನ್ನು ಮನಗಂಡ ಸರ್ಕಾರ ಇದೀಗ ಪ್ರತಿ ಯೂನಿಟ್‍ಗೆ 70 ಪೈಸೆಯಿಂದ ಎರಡು ರೂ. ಇಳಿಸಲು ಮುಂದಾಗಿದೆ. ಇದರಿಂದಾಗುವ ನಷ್ಟವನ್ನು ಸರ್ಕಾರವೇ ಅನುದಾನ ಮತ್ತು ಸಾಲದ ರೂಪದಲ್ಲಿ ಭರಿಸಲು ಸಂಪುಟ ಸಮ್ಮತಿ ಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸ ದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ವಿದ್ಯುತ್ ಇಲಾಖೆಗೆ 2008 ರಿಂದ 15290 ಕೋಟಿ ರೂ.ಗಳ ಸಬ್ಸಿಡಿ ನೀಡಬೇಕಾಗಿತ್ತು, ಅದರಲ್ಲಿ 8064 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು. ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್ ಬೆಂಬಲಿತ ಒಂದು ಸಾವಿರ ಮೆಗಾವ್ಯಾಟ್ ಪಂಪ್ಡ್ ಹೈಡ್ರೋ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಪಿಸಿಕೆಎಲ್ ಸಂಸ್ಥೆಗಳಿಂದ ನಾಲ್ಕು ಸಾವಿರ ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನು ಷ್ಠಾನಗೊಳಿಸಲು ಸಮ್ಮತಿ ನೀಡಿದೆ.

ಮೈಸೂರು ಜಿಲ್ಲೆ ನಂಜನಗೂಡು-ಶಿರಾ ರಸ್ತೆ ಸಂಪರ್ಕಿಸಲು ಕಬಿನಿ ನದಿಗೆ ಅಡ್ಡ ಲಾಗಿ 27 ಕೋಟಿ ರೂ.ಅಂದಾಜು ಮೊತ್ತ ದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.  ಚಿಕ್ಕಮಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಆರು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಸಂಪುಟ ಸಮ್ಮತಿಸಿದೆ. ಕೇಂದ್ರ ಸರ್ಕಾರದ ಯೋಜನೆಯಡಿ 921 ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಒಪ್ಪಿಗೆ ನೀಡಿದೆ. ವಿಕಲಚೇತನರ ಕಲ್ಯಾಣ ಮತ್ತು ಹಿರಿಯ ನಾಗರಿಕರ ಸೇವೆಗಳಿಗೆ ಮೈಸೂರಿನ ರಾಜ್ಯ ಪುನರ್‍ವಸತಿ ಕೇಂದ್ರದ ನೌಕರರ ವಿಲೀನಾತಿ ನಿಯಮ 2022ಕ್ಕೆ ಅನುಮೋದನೆ ನೀಡಿದೆ. ಕುರಿಗಾಹಿಗಳ ಘಟಕ ಸ್ಥಾಪಿಸಲು 354.50 ಕೋಟಿ ರೂ. ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅನುಷ್ಠಾನಕ್ಕೆ ಸಮ್ಮತಿ ನೀಡಿದೆ. ಯೋಜನೆಯಡಿ 20 ಸಾವಿರ ಕುರಿಗಾಹಿಗಳಿಗೆ 1.75 ಲಕ್ಷ ರೂ. ವೆಚ್ಚದಲ್ಲಿ 20 ಕುರಿ ಇಲ್ಲವೇ ಮೇಕೆ ಖರೀದಿಸಲು ಅನುಮತಿಸಲಾಗಿದೆ. ಕರ್ನಾಟಕ ಯುವ ನೀತಿ 2022ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

 

Translate »