ಗುಜರಾತ್‍ನಲ್ಲಿ ಆಮ್ ಆದ್ಮಿಯಿಂದ ಕಾಂಗ್ರೆಸ್‍ಗೆ ಹಿನ್ನೆಡೆ
ಮೈಸೂರು

ಗುಜರಾತ್‍ನಲ್ಲಿ ಆಮ್ ಆದ್ಮಿಯಿಂದ ಕಾಂಗ್ರೆಸ್‍ಗೆ ಹಿನ್ನೆಡೆ

December 9, 2022

ಮೈಸೂರು,ಡಿ.8(ಎಂಟಿವೈ)- ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ ಗಳನ್ನು ವಿಭಜನೆ ಮಾಡಿದ್ದರಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಹಿನ್ನಡೆ ಯಾಗುತ್ತದೆ ಎಂಬ ಮಾಹಿತಿ ನಮಗೆ ಇತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪರ ಒಲವು ಇದೆ ಎಂಬುದು ತಿಳಿದಿತ್ತು. ನಮಗೆ ದೊರೆತ ಮಾಹಿತಿಯಂತೆ ಬಿಜೆಪಿ ಮತ ವಿಭಜನೆ ಮಾಡಲು ಆಮ್ ಆದ್ಮಿಗೆ ಫಂಡ್ ನೀಡಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕಿಂತಲೂ ಹೆಚ್ಚು ಹಣವನ್ನು ಆಮ್ ಆದ್ಮಿ ಗುಜರಾತ್‍ನಲ್ಲಿ ಖರ್ಚು ಮಾಡಿದೆ. ಇದರಿಂದಲೇ ಕಾಂಗ್ರೆಸ್ ಪರವಾಗಿದ್ದ ಮತ ಗಳನ್ನು ಆಪ್ ಪಕ್ಷ ಸೆಳೆದಿದೆ. ಇದು ಕಾಂಗ್ರೆಸ್ ಹಿನ್ನಡೆಯಾಗಲು ಕಾರಣ. ಕಾಂಗ್ರೆಸ್‍ಗೆ ಹೆಚ್ಚಿನ ಮತ ಚಲಾವಣೆಯಾಗುವುದನ್ನು ತಡೆಗಟ್ಟಲು ಬಿಜೆಪಿ ಕುತಂತ್ರ ನಡೆಸಿದೆ. ಆಮ್ ಆದ್ಮಿ ಶೇ.10ರಷ್ಟು ಮತ ಪಡೆದರೂ ಕಾಂಗ್ರೆಸ್‍ಗೆ ಹಿನ್ನಡೆಯಾಗುತ್ತದೆ. ರಾಹುಲ್ ಗಾಂಧೀ ಪಾದಯಾತ್ರೆಯಲ್ಲಿರುವುದರಿಂದ ಹೆಚ್ಚು ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದಲೂ ಸ್ವಲ್ಪ ಮತ ಗಳಿಕೆಗೆ ತೊಡಕಾಗಿದೆ ಎಂದರು.

ರಾಜ್ಯದ ಮೇಲೆ ಪರಿಣಾಮ ಬೀರದು: ಗುಜರಾತ್ ಫಲಿತಾಂಶ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಒಂದು ರಾಜ್ಯದ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಆಯಾ ರಾಜ್ಯಗಳ ಚುನಾವಣೆ ಸ್ಥಳೀಯ ಸಮಸ್ಯೆ ಮೇಲೆ ನಡೆಯುತ್ತದೆ. ಬಿಜೆಪಿ ನಾಯಕರು ಗುಜರಾತ್ ಫಲಿತಾಂಶ ದಿಕ್ಸೂಚಿ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಿದ್ದರೆ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಯಾಕೆ ಗೆಲ್ಲಲಿಲ್ಲ. ಪಶ್ಚಿಮ ಬಂಗಾಳ, ದೆಹಲಿ, ಕೇರಳ, ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಯಾಕೆ ಪ್ರಭಾವ ಬೀರಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮಿತಿ ಮೀರಿದ ಭ್ರಷ್ಟಾಚಾರ ನಡೆಸುತ್ತಿದೆ. ಕಮಿಷನ್, ವರ್ಗಾವಣೆ ದಂಧೆ ನಡೆಯುತ್ತಿದೆ. ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ರಾಜ್ಯ ಸರ್ಕಾರಕ್ಕೆ ಕರೆಯಲಾಗಿತ್ತು. ಬಿಜೆಪಿಗರ ಭ್ರಷ್ಟಾಚಾರ ಕಂಡು ರಾಜ್ಯದ ಜನ ಬೇಸತ್ತಿದ್ದಾರೆ. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಯಿಂದ ಕಾಂಗ್ರೆಸ್ ಪ್ರಬಲವಾಗಿದೆ. ಜನರ ಒಲವು ಕಾಂಗ್ರೆಸ್ ಮೇಲಿದೆ. ಈ ಹಿಂದೆ ನಮ್ಮ ಸರ್ಕಾರದ ಯೋಜನೆಗಳ ಮಹತ್ವ ಎಲ್ಲರಿಗೂ ಮನವರಿಕೆಯಾಗಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಜನರು ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ತಂತ್ರಗಾರಿಕೆ ಮಾಡದೆ ಇದ್ದರೂ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಹವಾ ಎಲ್ಲೂ ಇಲ್ಲ: ಮೋದಿ ಹವಾ ಇದೆ ಎಂದು ಬಿಜೆಪಿಗರು ಬೀಗುತ್ತಿದ್ದಾರೆ. ಆದರೆ ವಾಸ್ತವವಾಗಿ ಎಲ್ಲಿಯೂ ಮೋದಿ ಹವಾ ಇಲ್ಲ. ಒಂದು ವೇಳೆ ಹವಾ ಇದ್ದಿದ್ದರೆ, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾಗಿತ್ತು. ದೆಹಲಿಯಲ್ಲಿಯೇ ಪ್ರಧಾನಿ ಮೋದಿ ಅವರ ನಿವಾಸವಿದೆ. ಅಲ್ಲೇ ವಾಸ ಮಾಡುತ್ತಿದ್ದಾರೆ. ಆದರೆ ಪಾಲಿಕೆ ಚುನಾವಣೆ ಯಾಕೆ ಗೆಲ್ಲಲು ಆಗಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಅವರದ್ದೇ ಸರ್ಕಾರವಿತ್ತು. ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲಿ ಹೋಯ್ತು ಹವಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಆಪ್ ಇಲ್ಲ: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಮತ ಸೆಳೆಯುವಷ್ಟು ಪ್ರಬ ಲವಾಗಿಲ್ಲ. ಬಿಜೆಪಿ ಗುಜರಾತ್‍ನಲ್ಲಿ ಮತ ವಿಭಜನೆ ಮಾಡಲು ಫಂಡ್ ನೀಡಿದಂತೆ ರಾಜ್ಯದಲ್ಲೂ ಆಪ್ ಪಕ್ಷದೊಂದಿಗೆ ಸಂಚು ನಡೆಸುವುದಿಲ್ಲ. ಅವರ ತಂತ್ರಗಾರಿಕೆ ಏನಿದ್ದರೂ ಜೆಡಿಎಸ್‍ನೊಂದಿಗೆ ಮಾಡಬಹುದು. ಆಮ್ ಆದ್ಮಿಯಂತೆ ಜೆಡಿಎಸ್ ಹೊಸದಾಗಿ ಚುನಾವಣೆಗೆ ನಿಲ್ಲುತ್ತಿಲ್ಲ. 1999ರಿಂದಲೂ ಚುನಾವಣಾ ರಾಜಕೀಯದಲ್ಲಿ ಇದೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »