ಕನ್ನಡದ 12 ನಾಟಕ ಸೇರಿದಂತೆ ಒಟ್ಟು 20 ಪ್ರದರ್ಶನ
ಮೈಸೂರು

ಕನ್ನಡದ 12 ನಾಟಕ ಸೇರಿದಂತೆ ಒಟ್ಟು 20 ಪ್ರದರ್ಶನ

December 9, 2022

ಮೈಸೂರು,ಡಿ.8(ಎಂಟಿವೈ)-ರಂಗಾಯಣದ ಪ್ರಸಕ್ತ ಸಾಲಿನ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು `ಭಾರತೀಯತೆ’ ಶೀರ್ಷಿಕೆಯಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮದ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪಲು ಕ್ರಮ ಕೈಗೊಳ್ಳಲಾಗಿದ್ದು, ರಂಗಾಯಣ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ರಂಗಾಯಣದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಈ ಬಾರಿ ವಿಶಿಷ್ಟ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ. ರಂಗಉತ್ಸವದ ರಸದೌತಣ ಉಣಬಡಿಸಲು ಸಕಲ ಸಿದ್ಧತೆ ಯನ್ನು ಮಾಡಿಕೊಳ್ಳಲಾಗಿದ್ದು, ಶುಕ್ರವಾರದಿಂದ(ಡಿ.9) ಬಹು ರೂಪಿಯ ಚಲನಚಿತ್ರೋತ್ಸವ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಆರಂಭವಾಗಲಿದೆ. ಬಹು ರೂಪಿ ರಾಷ್ಟ್ರೀಯ ರಂಗೋತ್ಸ ವದ ಮುನ್ನುಡಿಯಾಗಿ `ಬಹು ರೂಪಿ ಜಾನಪದೋತ್ಸವ’ ಗುರುವಾರ ಸಂಜೆಯೇ ಆರಂಭವಾಗಿದ್ದು, ಈ ಸಾಲಿನ ನಾಟಕೋತ್ಸವದಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕ ಗಳು, ಕನ್ನಡದ 12 ನಾಟಕಗಳು ಮತ್ತು ತುಳು ನಾಟಕ ಸೇರಿ ಒಟ್ಟು 20 ನಾಟಕಗಳು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು. ಡಿ.9ರಂದು ಸಂಜೆ 4.30ಕ್ಕೆ ಕರಕುಶಲ ಮಳಿಗೆಗಳನ್ನು ಮೈಲ್ಯಾಕ್ ಅಧ್ಯಕ್ಷ ರಘು ಆರ್.ಕೌಟಿಲ್ಯ ಉದ್ಘಾಟಿಸಿದರೆ, ಚಿತ್ರಕಲಾ ಪ್ರದರ್ಶನಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‍ಗೌಡ ಚಾಲನೆ ನೀಡಲಿದ್ದಾರೆ. ಆಹಾರ, ತಿನಿಸು, ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಕರಕುಶಲ ಕರ್ಮಿಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಕರಕುಶಲ ವಸ್ತುಗಳು ಮತ್ತು ಬಟ್ಟೆಗಳಿಗಾಗಿ 15 ಮಳಿಗೆ, ದೇಸೀ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಅಣಿಗೊಳಿಸಲಾಗಿದೆ. ಸಹಜ ಕೃಷಿ ಆಹಾರಗಳು, ಮೈಸೂರು ಶೈಲಿ, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಗೆ ಬಗೆಯ ವಿಶೇಷ ಆಹಾರ ಪದಾರ್ಥಗಳ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಡಿ.15 ರವರೆಗೆ ನಡೆಯುವ `ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ರಂಗಾಸಕ್ತರ ಹಬ್ಬವಾಗಿ ಮಾರ್ಪಡಲಿದೆ. ಸಮಾಜಕ್ಕೆ ಕನ್ನಡಿ ಹಿಡಿಯುವ ವಸ್ತು ವಿಷಯದ ಆಧಾರದಲ್ಲಿ ನಡೆಯುತ್ತದೆ. `ಭಾರತೀಯತೆ’ ಶೀರ್ಷಿಕೆಯಡಿ ನಡೆಯುತ್ತಿರುವ ಬಹುರೂಪಿಯಲ್ಲಿ ಭಾರತವೆಂದರೆ ಇದು ಕೇವಲ ನೆಲವೊಂದೇ ಅಲ್ಲ, ಇದನ್ನು `ಮಾತೆ’ ಎಂದು ಪೂಜಿಸುವುದನ್ನು ಮನವರಿಕೆ ಮಾಡಿಕೊಡುವ ಮಹತ್ತರ ಕಾರ್ಯಕ್ರಮವೂ ಮೂಡಿ ಬರಲಿದೆ. ಅನೇಕ ಭಾಷೆ, ಧರ್ಮ, ಜಾತಿ ಜನಾಂಗಗಳ ಏಕ ಸಮೂಹವೇ ಭಾರತ. ಹಾಗಾಗಿ ಬಹುರೂಪಿಗೆ `ಭಾರತೀಯತೆ’ ಎಂದು ಶೀರ್ಷಿಕೆ ಇಡಲಾಗಿದೆ ಎಂದು ತಿಳಿಸಿದರು.

ಡಿ.10ರಂದು ಬೆಳಗ್ಗೆ 10.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಚಿಂತಕಿ ಡಾ.ಎಸ್.ಆರ್.ಲೀಲಾ ಉದ್ಘಾಟಿಸಲಿ ದ್ದಾರೆ. ಎರಡು ದಿನಗಳ ಕಾಲ ಪ್ರಾಚೀನ ಸಂಸ್ಕøತಿ ಮತ್ತು ಭಾರತೀಯತೆ, ಭವಿಷ್ಯದಲ್ಲಿ ಭಾರತೀಯ ಸಂಸ್ಕøತಿ, ವೈವಿಧ್ಯತೆಯಲ್ಲಿ ಭಾರತೀಯತೆ ಹಾಗೂ ಪ್ರಾಚೀನ ರಂಗಭೂಮಿ ಮತ್ತು ಭಾರತೀಯತೆ ವಿಚಾರ ಕುರಿತು ಗೋಷ್ಠಿ ನಡೆಯಲಿದೆ ಎಂದರು.

ಡಿ.10ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಟ ರಮೇಶ್ ಅರವಿಂದ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನಿಲ್‍ಕುಮಾರ್, ಮೇಯರ್ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಮನವಾರ್ತೆ ಇದ್ದರು.

Translate »