ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪತಿಗೆ ಐದು ವರ್ಷ ಜೈಲು ಶಿಕ್ಷೆ
ಮೈಸೂರು

ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪತಿಗೆ ಐದು ವರ್ಷ ಜೈಲು ಶಿಕ್ಷೆ

December 29, 2020

ಮೈಸೂರು,ಡಿ.28-ಪತ್ನಿಯನ್ನು ಕೊಲ್ಲಲು ಯತ್ನಿ ಸಿದ ಪತಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 11 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ದೊಡ್ಡೇಗೌಡ ತೀರ್ಪು ನೀಡಿದ್ದಾರೆ. ತಿ.ನರಸೀಪುರ ತಾಲೂಕು ಬನ್ನೂರು ಠಾಣೆ ವ್ಯಾಪ್ತಿಗೊಳಪಟ್ಟ ಹಿಟ್ಟುವಳ್ಳಿ ಗ್ರಾಮದ ನಾಗ ರಾಜು ಶಿಕ್ಷೆಗೊಳಗಾದವನಾಗಿದ್ದು, ಈತ ತನ್ನ ಪತ್ನಿ ಚೆನ್ನಮ್ಮ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದ.

ವಿವರ: ನಾಗರಾಜು ಮತ್ತು ಚೆನ್ನಮ್ಮ ಅವರಿಗೆ 2007ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದು, ಮೂರನೇ ಮಗು ಜನಿಸಿದ ನಂತರ ತನಗೆ ಪತಿ ನಾಗರಾಜು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಈತನಿಗೆ ಅತ್ತೆ ಮತ್ತು ನಾಗರಾಜುವಿನ ತಂಗಿ ಸಹಕರಿಸುತ್ತಿದ್ದರು ಎಂದು ಚೆನ್ನಮ್ಮ 2017ರ ಮೇ 11ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. 2017ರ ಮೇ 4ರಂದು ರಾತ್ರಿ ಪತಿ ಮತ್ತು ಆತನ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದು, ತನ್ನ ತಂದೆ-ತಾಯಿ ಬಂದು ಸಮಾಧಾನ ಮಾಡಿ ತೆರಳಿದ್ದರು.

ಮಾರನೇ ದಿನ ಸಂಜೆ 5 ಗಂಟೆ ಸಮಯದಲ್ಲಿ ತಾನು ಬಟ್ಟೆ ಒಗೆಯುತ್ತಿದ್ದಾಗ ಪತಿ ನಾಗರಾಜು ಕೊಠಡಿಗೆ ಕರೆದೊಯ್ದು, ಕೆಳಗೆ ಕೆಡವಿ ಮುಖದ ಮೇಲೆ ದಿಂಬಿನಿಂದ ಅದುಮಿ ಕೊಲೆ ಮಾಡಲು ಪ್ರಯತ್ನಿಸಿದ್ದ ಎಂದು ಚೆನ್ನಮ್ಮ ತನ್ನ ದೂರಿನಲ್ಲಿ ತಿಳಿಸಿ ದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೂರು ಠಾಣೆಯ ಅಂದಿನ ಸಬ್ ಇನ್ಸ್‍ಪೆಕ್ಟರ್ ಡಿ.ಕೆ. ಲತೇಶ್ ಕುಮಾರ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನಾಗರಾಜುವಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಪ್ಪ ಸಿ. ನಾಕ್‍ಮನ್ ವಾದ ಮಂಡಿಸಿದ್ದರು.

Translate »