ಕಾಂಗ್ರೆಸ್ ಭಾರೀ ಪ್ರತಿಭಟನೆ
ಮೈಸೂರು

ಕಾಂಗ್ರೆಸ್ ಭಾರೀ ಪ್ರತಿಭಟನೆ

June 17, 2022

ಇಡೀ ದಿನ ಹೈಡ್ರಾಮ, ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ವಿಚಾರಣೆ ನೆಪದಲ್ಲಿ ಇಡಿ ಮೂಲಕ ರಾಹುಲ್, ಸೋನಿಯಾಗೆ ಕಿರುಕುಳ ಆರೋಪ

ಬೆಂಗಳೂರು, ಜೂ.೧೬(ಕೆಎಂಶಿ)-ಕೇAದ್ರ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ಹಮ್ಮಿಕೊಂ ಡಿದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಯಿತು.

ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ನಡೆಸಿದ ಪ್ರತಿಭಟನೆ ಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಧ್ರುವ ನಾರಾಯಣ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯಕ್, ಡಾ.ಎಚ್.ಸಿ ಮಹ ದೇವಪ್ಪ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ರಾಜ್ಯಪಾಲರ ಭೇಟಿಯ ನಂತರ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇಶ ದಲ್ಲಿ ಆಗುತ್ತಿರುವ ಅನ್ಯಾಯ, ಪ್ರಜಾಪ್ರಭುತ್ವದ ಕಗ್ಗೊಲೆ, ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆ ದಿದೆ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಮಾನಸಿಕ ಕಿರುಕುಳ ನೀಡಿ, ಬಂಧಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ನಾಯಕರು ದೇಶವನ್ನು ಒಗ್ಗೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ ಜೋಡೋ ಪಾದಯಾತ್ರೆಯನ್ನು ಘೋಷಿಸಿದ ನಂತರ, ಅವರ ಯಾತ್ರೆ ಯಶಸ್ವಿಯಾಗಿ ಅವರ ಖ್ಯಾತಿ ಎಲ್ಲಿ ಹೆಚ್ಚುತ್ತದೆಯೋ, ಎಲ್ಲಿ ನಮ್ಮ ಸರ್ಕಾರ ಅಪಾಯಕ್ಕೆ ಸಿಲುಕು ತ್ತದೆಯೋ ಎಂದು ಭಯಭೀತರಾಗಿ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿದೆ. ನಮ್ಮ ನಾಯಕರ ತ್ಯಾಗ ಹಾಗೂ ಹೋರಾಟದ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು. ನೆಹರೂ ಕುಟುಂಬ ದೇಶಕ್ಕಾಗಿ ಅಲಹಾಬಾದ್‌ನಲ್ಲಿ ೨೦ ಸಾವಿರ ಕೋಟಿ ರೂ. ಮೊತ್ತದ ಆಸ್ತಿ ದಾನ ಮಾಡಿದೆ. ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಂಸ್ಥೆ ಅವರ ಸ್ವಂತ ಆಸ್ತಿ ಎಂದು ಘೋಷಿಸಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ಆಸ್ತಿ. ಪಕ್ಷದ ಆಚಾರ, ವಿಚಾರವನ್ನು ಪ್ರಚಾರ ಮಾಡಲು ಈ ಪತ್ರಿಕೆ ನಡೆಸು ತ್ತಿದ್ದಾರೆ. ಅವರು ಈ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ ಅಷ್ಟೇ. ನೆಹರೂ ಅವರು ಜೈಲಿಗೆ ಹೋಗಿ ದೇಶಕ್ಕೆ ಸ್ವಾತಂತ್ರ÷್ಯ ತಂದುಕೊಟ್ಟಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಇಂತಹವರಿಗೆ ಈ ರೀತಿ ಕಿರುಕುಳ ನೀಡುವುದನ್ನು ಜನ ಸಹಿಸುವುದಿಲ್ಲ. ಪಕ್ಷದ ಕಚೇರಿ ನಮ್ಮ ದೇವಾಲಯ. ಇದಕ್ಕೆ ಪ್ರವೇಶ ನೀಡಲು ಅವಕಾಶ ನೀಡದ ಬಿಜೆಪಿಯ ನೀಚ ಸರ್ಕಾರದ ನಡೆ ಖಂಡಿಸಿ ರಾಜಭವನ ಮುತ್ತಿಗೆ ಹಾಕುತ್ತಿದ್ದೇವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಉಳಿಸಲು ಈ ಹೋರಾಟ. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಾಗಬಾರದು ಎಂದು ಆಗ್ರಹಿಸಿ ಈ ಹೋರಾಟ ಮಾಡುತ್ತಿದ್ದೇವೆ. ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ಮಾಡಬೇಕು. ಅಲ್ಲಿರುವ ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು. ದ್ವೇಷದ ರಾಜಕಾರಣ ಮಾಡುತ್ತಿದ್ದು, ನಿಮ್ಮ ಈ ಬೆದರಿಕೆಗಳಿಗೆ, ಷಡ್ಯಂತ್ರಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ, ಯಂಗ್ ಇಂಡಿಯಾ ಎಲ್ಲವೂ ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೇರಿ ದೇಣ ಗೆ ನೀಡಿದ್ದಾರೆ. ಅದನ್ನು ಕೇಳಲು ಅವರು ಯಾರು? ನೀವು ತೊಂದರೆ ನೀಡುತ್ತೀರಾ ನೀಡಿ, ಜೈಲಿಗೆ ಹಾಕುತ್ತೀರಾ ಹಾಕಿ ಎಂದು ಸವಾಲೆಸೆದರು. ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಹಾಗೂ ಆರೋಗ್ಯ ಸಚಿವರ ಮೇಲೆ ಮೊದಲು ಪ್ರಕರಣ ದಾಖಲಿಸಲಿ. ಕೇವಲ ನಮ್ಮ ವಿರುದ್ಧ ಕೇಸು ದಾಖಲಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಮಂತ್ರಿಗಳು ನಿಯಮ ಉಲ್ಲಂಘಿಸಿದ್ದಕ್ಕೆ ಯಾಕೆ ಕೇಸ್ ಹಾಕಿಲ್ಲ? ವಿಧಾನಸೌಧದಲ್ಲಿ ಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ದಲ್ಲಿ ನಿಯಮ ಉಲ್ಲಂಘನೆಯಾಗಿದ್ದಕ್ಕೆ ಯಾಕೆ ಪ್ರಕರಣ ದಾಖಲಿಸಿಲ್ಲ? ಬಿಜೆಪಿಯ ಅನೇಕ ಪ್ರಕರಣಗಳಲ್ಲಿ ಕೇಸ್ ದಾಖಲಿಸಿಲ್ಲ. ನಮಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವ ಹಕ್ಕು ಇದೆ. ಈ ದೇಶಕ್ಕೆ ಸ್ವಾತಂತ್ರ ಬಂದಿದ್ದೇ ಹೋರಾಟದ ಮೂಲಕ ಎಂದರು.

Translate »