ಸಿಎಫ್‍ಟಿಆರ್‍ಐ ಆವರಣದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ
ಮೈಸೂರು

ಸಿಎಫ್‍ಟಿಆರ್‍ಐ ಆವರಣದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

January 5, 2023

ಮೈಸೂರು, ಜ.4(ಎಂಟಿವೈ)- ಮೈಸೂರಿನ ಹೃದಯ ಭಾಗದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್‍ಟಿಆರ್‍ಐ) ವಿಶಾಲ ಆವರಣದಲ್ಲಿ ಮುಂಜಾನೆ ಜೋಡಿ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಇವುಗಳ ಸೆರೆಗೆ ಕಾರ್ಯಾ ಚರಣೆ ಆರಂಭಿಸಿದೆ. ಮುಂಜಾಗ್ರತಾ ಕ್ರಮವಾಗಿ ಸಿಎಫ್‍ಟಿಆರ್‍ಐ ಶಾಲೆಗೆ ರಜೆ ಘೋಷಿಸಲಾಗಿದೆ. ಇತ್ತೀಚಿನ ದಿನ ಗಳಲ್ಲಿ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನ ಹೃದಯ ಭಾಗದಲ್ಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿವೆ.

ಸಿಎಫ್‍ಟಿಆರ್‍ಐ ಆವರಣದಲ್ಲಿ ಜೋಡಿ ಚಿರತೆ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದು, ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಿ.ನರಸೀಪುರ ತಾಲೂಕಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾದ ಘಟನೆ ಯಿಂದ ಜನರಲ್ಲಿ ಚಿರತೆ ಎಂದ ತಕ್ಷಣ ಭಯ. ಇಬ್ಬರನ್ನು ಬಲಿ ಪಡೆದ ಚಿರತೆ ಸೇರಿದಂತೆ ಒಂದೇ ವಾರದಲ್ಲಿ ನಾಲ್ಕು ಚಿರತೆಗಳನ್ನು ವಿವಿಧೆಡೆ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಮೈಸೂರು ಹೊರವಲಯದ ಆರ್‍ಎಂಪಿ ಬಿಳಿಕೆರೆ ಸುತ್ತಮುತ್ತ ಚಿರತೆ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿವೆ. ಸಿಎಫ್‍ಟಿ ಆರ್‍ಐ ಸಂಸ್ಥೆಯ ವಿವಿಧ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಇಲ್ಲಿನ ವಸತಿ ಗೃಹ ಗಳ ನಿವಾಸಿಗಳು ಎಚ್ಚರದಿಂದ ಇರುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂಜಾನೆಯೇ ಪ್ರತ್ಯಕ್ಷ: ಸಿಎಫ್‍ಟಿಆರ್‍ಐ ಆವರಣದಲ್ಲಿರುವ ಶಾಲೆಯ ಪಕ್ಕದ ರಸ್ತೆಯ ಜಂಕ್ಷನ್ ಪಹರೆ ಪಾಯಿಂಟ್‍ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಎಸ್.ಕೆ.ಪ್ರಭಾಕರ್, ಎರಡು ಚಿರತೆ ರಸ್ತೆಯಲ್ಲಿ ಹಾದು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಶಾಲೆಯ ಆಟದ ಮೈದಾ ನದ ಸಮೀಪದ ರಸ್ತೆಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾನೆಯೇ ಶಾಲೆಗೆ ರಜೆ ಘೋಷಿಸಿ, ಪೋಷಕರ ವಾಟ್ಸಪ್ ಗ್ರೂಪ್‍ಗೆ ಸಂದೇಶ ಕಳುಹಿಸಲಾಗಿದೆ. ಆದರೂ, ಹಲವು ವಿದ್ಯಾರ್ಥಿಗಳು ಶಾಲೆಗೆ ಆಗಮಿ ಸಿದ್ದರು. ಅಲ್ಲದೆ, ಶಾಲೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಆಗಮಿ ಸಿದ್ದರು. ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ಸು ಹೋಗುವಂತೆ ಸೂಚಿಸಲಾಯಿತು. ತಕ್ಷಣ ಪೋಷಕರು ಶಾಲೆಗೆ ಆಗಮಿಸಿದ ತಮ್ಮ ತಮ್ಮ ಮಕ್ಕಳನ್ನು ಕರೆದೊಯ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸಿಎಫ್ ಲಕ್ಷ್ಮೀಕಾಂತ್, ಆರ್‍ಎಫ್‍ಓ ಸುರೇಂದ್ರ, ಡಿಆರ್‍ಎಫ್ ವೆಂಕಟಾಚಲ ಇನ್ನಿತರರ ತಂಡ, ಕೂಂಬಿಂಗ್ ಕಾರ್ಯಾಚರಣೆ ಆರಂಭಿ ಸಿತು. ಶಾಲೆಯ ಪಕ್ಕದ ರಸ್ತೆಯಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಪೊದೆ ಸೇರಿ ದಂತೆ ಅರಣ್ಯದಂತೆ ಬೆಳೆದಿರುವ ಮರಗಳ ನಡುವೆ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದರು. ಆದರೆ, ಚಿರತೆಗಳ ಸುಳಿವೇ ಸಿಗಲಿಲ್ಲ. ಎಲ್ಲಿಯೂ ಚಿರತೆಗಳ ಹೆಜ್ಜೆ ಗುರುತು, ಅವುಗಳ ಮಲ ಸೇರಿದಂತೆ ಯಾವ ಸುಳಿವೂ ದೊರೆಯಲಿಲ್ಲ.

ಬೋನ್, ಕ್ಯಾಮರಾ ಟ್ರಾಪ್ ಅಳವಡಿಕೆ: ಸದ್ಯಕ್ಕೆ ಚಿರತೆಗಳ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಸಿಎಫ್‍ಟಿಆರ್‍ಐ ಆವರಣದಲ್ಲಿ ಬೋನ್ ಇಡಲು ನಿರ್ಧರಿಸಲಾಗಿದೆ. ಅಲ್ಲದೆ, ಚಿರತೆಗಳು ಓಡಾಡಬಹುದಾದ ಸ್ಥಳ ಗುರುತಿಸಿ, ಕ್ಯಾಮರಾ ಟ್ರಾಪ್ ಅಳವಡಿಸಲು ತೀರ್ಮಾನಿಸಲಾಗಿದೆ. ಎರಡು ದಿನ ಕ್ಯಾಮರಾ ಟ್ರಾಪ್‍ನಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲು ಅರಣ್ಯ ಸಿಬ್ಬಂದಿ ನಿರ್ಧರಿಸಿದ್ದಾರೆ.

ಪಾಳು ಬಿದ್ದ ಕಟ್ಟಡಗಳಲ್ಲಿ ಅನುಮಾನ: ಸಿಎಫ್‍ಟಿಆರ್‍ಐ ಆವರಣದಲ್ಲಿ ಸಿಬ್ಬಂದಿಗಳಿಗಾಗಿ ನಿರ್ಮಿಸಿರುವ ಸುಮಾರು 30ಕ್ಕೂ ಹೆಚ್ಚು ವಸತಿ ಗೃಹಗಳು ಖಾಲಿಯಿದ್ದು, ಇವುಗಳ ಸುತ್ತಮುತ್ತಲೂ ಗಿಡಗಂಟೆ ಬೆಳೆದುಕೊಂಡಿದೆ. ಅಲ್ಲದೆ, ಕೆಲವು ವಸತಿ ಗೃಹಗಳ ಬಾಗಿಲು ಮುರಿದಿರುವುದರಿಂದ ಚಿರತೆಗಳು, ಇಲ್ಲಿ ಬೀಡು ಬಿಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಇದುವರೆಗೂ ಸಿಎಫ್‍ಟಿಆರ್‍ಐ ಆವರಣದಲ್ಲಿ ಚಿರತೆಯಿಂದ ಯಾವುದೇ ಪ್ರಾಣಿಗಳು ಬಲಿಯಾಗಿಲ್ಲ. ಎಲ್ಲಿಯೂ ಆತಂಕ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿರತೆಗಳು ಅಲ್ಲಿಯೇ ಬೀಡು ಬಿಟ್ಟಿರಬಹುದು ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

Translate »