ಮೈಸೂರು ನಗರ, ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಒತ್ತಾಯ
ಮೈಸೂರು

ಮೈಸೂರು ನಗರ, ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಒತ್ತಾಯ

January 5, 2023

ಮೈಸೂರು, ಜ.4 (ಆರ್‍ಕೆಬಿ)- ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸುವ ಬೇಡಿಕೆ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಕುರಿತು ಬುಧವಾರ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ನಗರಪಾಲಿಕೆ 2023-24ನೇ ಸಾಲಿನ ಬಜೆಟ್ ಕರಡು ಸಿದ್ಧಪಡಿಸುವ ಸಂಬಂಧ ಪೂರ್ವಭಾವಿಯಾಗಿ ಕರೆದಿದ್ದ ಎರಡನೇ ಸುತ್ತಿನ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಈ ಒತ್ತಾಯಗಳು ಕೇಳಿ ಬಂದವು.

ಮೈಸೂರು ನಗರ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಎಸ್.ಕೆ.ದಿನೇಶ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ ಇನ್ನಿತರರು ಸಭೆಯಲ್ಲಿ ವಿಷಯ ಪ್ರಸ್ತಾ ಪಿಸಿದರು. ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಬಸ್ ನಿಲ್ದಾಣವನ್ನು ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿಯ ರಿಂಗ್ ರಸ್ತೆ ಜಂಕ್ಷನ್‍ಗೆ ಸ್ಥಳಾಂತರಿಸಲು ಸಲಹೆ ನೀಡಿದರು.

ಮೈಸೂರಿನ ಹೃದಯ ಭಾಗದಲ್ಲಿನ ಸಂಚಾರ ದಟ್ಟಣೆಯನ್ನು ತಪ್ಪಿಸಲು ನಗರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ, ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣವನ್ನು ಸಹ ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ಎಸ್.ಕೆ.ದಿನೇಶ್ ಸಲಹೆ ನೀಡಿದರು. ಇದಕ್ಕೆ ದನಿಗೂಡಿಸಿದ ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಬನ್ನಿಮಂಟಪ ದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸಾಕಷ್ಟು ಜಮೀನು ಇದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಒತ್ತಡವನ್ನು ತಪ್ಪಿಸಲು ಬಸ್ ನಿಲ್ದಾಣವನ್ನು ಸ್ಥಳಾಂತರಿಸುವುದು ಉತ್ತಮ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ನಗರಾಭಿವೃದ್ದಿ ಪ್ರಾಧಿ ಕಾರದ (ಮುಡಾ) ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಯೋಜನೆ ನಮ್ಮ ಮುಂದಿದೆ. ಆದರೆ ಯೋಜನೆಯ ವಿವರಗಳನ್ನು ಮಾತ್ರ ಅವರು ನೀಡ ಲಿಲ್ಲ. ಈ ವೇಳೆ ಪ್ರಾಧಿಕಾರಕ್ಕೆ ಸಂಬಂಧಿಸಿದ ಕುಂದುಕೊರತೆ ಗಳ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

100 ಅಡಿ ಎತ್ತರದ ನಾಲ್ವಡಿ ಪ್ರತಿಮೆ: ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸುವಂತೆ ಸಾರ್ವಜನಿಕ ಒತ್ತಾಯಗಳ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದರು.

ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮಾತನಾಡಿ, ಕೇಂದ್ರ ದಿಂದ ನಿಗದಿಪಡಿಸಿದ ರಾಜ್ಯ ಸರ್ಕಾರದ ಜಿಎಸ್ಟಿ ಮೊತ್ತ ದಲ್ಲಿ ಸ್ಥಳೀಯ ಸಂಸ್ಥೆಗಳು ಪಾಲು ಪಡೆಯಬಹುದಾದ್ದ ರಿಂದ ನಗರಪಾಲಿಕೆ ಅಧಿಕಾರಿಗಳು ತಮಗೆ ಬರಬೇಕಾದ ಜಿಎಸ್‍ಟಿ ಹಣವನ್ನು ಪಡೆದುಕೊಳ್ಳುವುದರತ್ತ ಹೆಚ್ಚು ಗಮನ ಕೇಂದ್ರೀಕರಿಸಿ, ಪ್ರಯತ್ನಿಸಬೇಕು. ಇದರಿಂದ ಪಾಲಿಕೆಗೆ ಆದಾಯ ದೊರೆಯಲಿದೆ ಎಂದು ಸಲಹೆ ನೀಡಿದರು.

ಮೈಸೂರಿನ ಜೆ.ಪಿ.ನಗರ, ಶಾರದಾದೇವಿನಗರ ಮತ್ತು ಹೆಬ್ಬಾಳದಲ್ಲಿ ಪಾಲಿಕೆಗೆ ಮಂಜೂರಾದ ಮುಡಾ ನಿವೇಶನ ಗಳು ನಿರ್ಲಕ್ಷ್ಯಕ್ಕೆ ಒಳಗಾಗಿ, ಪಾಳು ಬಿದ್ದಿರುವ ಬಗ್ಗೆ ಭೈರಪ್ಪ ಗಮನ ಸೆಳೆದರು. ರಿಂಗ್‍ರಸ್ತೆಯ ಹೊರ ವಲಯದಲ್ಲಿ ಸ್ಥಳೀಯ ನಿವಾಸಿಗಳಿಂದ ಸಂಗ್ರಹಿಸುವ ನೀರು ಮತ್ತು ಒಳಚರಂಡಿ ತೆರಿಗೆಯ ಪಾಲು ನಗರಪಾಲಿಕೆಗೆ ಸೇರಬೇಕು. ಅಲ್ಲಿನ ನಿವಾಸಿಗಳಿಗೆ ನೀರು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆಯವರು ಈ ಹಣವನ್ನು ಮುಡಾದಿಂದ ಪಡೆಯಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಸ್ಥಾಪಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ ನೀಡುವ ಕೆಲಸವನ್ನು ಪಾಲಿಕೆ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸಲಹೆ ನೀಡಿದರು. ಪಾಲಿಕೆಯು 2023-24ರ ಬಜೆಟ್ ತಯಾರಿ ಸುವ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲೆಂದು ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ, ಸಭೆಯ ಆರಂಭದಲ್ಲಿ ಬಜೆಟ್‍ಗಿಂತ ಹೆಚ್ಚಾಗಿ ನಗರಾಭಿವೃದ್ಧಿ ಪ್ರಾಧಿ ಕಾರಕ್ಕೆ ಸಂಬಂಧಿಸಿದ ಬೇಡಿಕೆಗಳೇ ಹೆಚ್ಚಾಗಿ ಕೇಳಿ ಬಂದವು.

ಮೇಯರ್ ಶಿವಕುಮಾರ್, ಮೇಯರ್ ಡಾ.ಜಿ.ರೂಪ, ಮಾಜಿ ಮೇಯರ್‍ಗಳಾದ ಸುನಂದಾ ಪಾಲನೇತ್ರ, ಎಚ್.ಎನ್. ಶ್ರೀಕಂಠಯ್ಯ, ಮಾಜಿ ಉಪಮೇಯರ್ ಮೋದಾಮಣಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಜಿ.ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್. ನಾಗೇಶ್, ಇನ್ನಿತರರು ಉಪಸ್ಥಿತರಿದ್ದರು.

Translate »