ಅಗ್ನಿಶಾಮಕ ಸಿಬ್ಬಂದಿಯ ವಸತಿಗೃಹದಲ್ಲಿ ಸಿಲಿಂಡರ್ ಸ್ಫೋಟ: 6 ಮಂದಿಗೆ ಗಾಯ
ಮೈಸೂರು

ಅಗ್ನಿಶಾಮಕ ಸಿಬ್ಬಂದಿಯ ವಸತಿಗೃಹದಲ್ಲಿ ಸಿಲಿಂಡರ್ ಸ್ಫೋಟ: 6 ಮಂದಿಗೆ ಗಾಯ

January 5, 2023

ಮೈಸೂರು, ಜ.4(ಎಂಟಿವೈ)-ಮೈಸೂರಿನ ಬನ್ನಿಮಂಟಪದಲ್ಲಿರುವ ಅಗ್ನಿಶಾಮಕ ಸಿಬ್ಬಂದಿಯ ವಸತಿಗೃಹ ದಲ್ಲಿ ಅಡುಗೆ ಅನಿಲ(ಎಲ್‍ಪಿಜಿ)ದ ಸಿಲಿಂಡರ್ ಸ್ಫೋಟಿಸಿ 6 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಬನ್ನಿಮಂಟಪದ ಅಗ್ನಿಶಾಮಕ ಠಾಣೆಯ ಅನತಿ ದೂರದ ಸಿಬ್ಬಂದಿ ಮಹದೇವ್ ಅವರ ವಸತಿ ಗೃಹದಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಫೈರ್‍ಮನ್ ಮಹದೇವ ಅವರ ಮನೆಯಲ್ಲಿ ನಾಲ್ವರು ಹಾಗೂ ಪಕ್ಕದ ಮನೆಯ ಇಬ್ಬರು ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಇಂದು ಬೆಳಗ್ಗೆ 7.05ರಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ನಡೆದಿದೆ. ಬೆಳಗ್ಗೆ ಕಾಫಿ ಮಾಡಲು ಗ್ಯಾಸ್ ಸ್ಟವ್ ಹಚ್ಚಲು ಲೈಟರ್ ಹೊತ್ತಿಸುತ್ತಿದ್ದಂತೆ ಇಡೀ ಮನೆಯಲ್ಲಿ ಬೆಂಕಿ ಆವರಿಸಿದೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಅಡುಗೆ ಮನೆಯ ಗೋಡೆ ಯೊಂದು ಛಿದ್ರಗೊಂಡಿದೆ. ಅಲ್ಲದೆ, ಬೆಂಕಿ ಜ್ವಾಲೆಗೆ ಮನೆಯಲ್ಲಿದ್ದ ಪೀಠೋ ಪಕರಣ, ಹಾಸಿಗೆ ಸೇರಿದಂತೆ ಇನ್ನಿತರ ವಸ್ತುಗಳು ಭಸ್ಮವಾಗಿವೆ.

ಗಾಯಾಳುಗಳಿಗೆ ಚಿಕಿತ್ಸೆ: ಘಟನೆ ಸಂಭವಿಸುತ್ತಿದ್ದಂತೆ ಪಕ್ಕದಲ್ಲೇ ಇರುವ ಅಗ್ನಿಶಾಮಕ ಠಾಣೆಯ ಕರ್ತವ್ಯನಿರತ ಸಿಬ್ಬಂದಿ ಕೂಡಲೇ ದೌಡಾಯಿಸಿ, ತುರ್ತು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರಲ್ಲದೆ, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖ ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಫೈರ್‍ಮನ್ ಮಹದೇವ(36), ಅವರ ಪತ್ನಿ ಗೀತಾ(32) ಮಕ್ಕಳಾದ ಮೌನಶ್ರೀ (10), ಮಿಥುನ(5) ಹಾಗೂ ಪಕ್ಕದ ಮನೆಯ ಸವಿತಾ ಮತ್ತು ಭಾಗ್ಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸುಧಾರಿಸಿದೆ ಎಂದು ಮೂಲಗಳು ತಿಳಿಸಿವೆ.

ಅನಿಲ ಸೋರಿಕೆಯೇ ಘಟನೆಗೆ ಕಾರಣ: ಬೆಂಕಿ ಹಾಗೂ ಸಿಲಿಂಡರ್ ಸ್ಫೋಟಕ್ಕೆ ಅನಿಲ ಸೋರಿಕೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರಾತ್ರಿ ಅಡುಗೆ ಮಾಡಿದ ನಂತರ ಸಿಲಿಂಡರ್ ಸರಿಯಾಗಿ ಬಂದ್ ಮಾಡದಿರುವುದು ಇಲ್ಲವೆ ಪೈಪ್‍ನಲ್ಲಿ ಸೋರಿಕೆ ಉಂಟಾಗಿರ ಬಹುದು ಎಂದು ಶಂಕಿಸಲಾಗಿದೆ. ಅನಿಲ ಸೋರಿಕೆಯಿಂದಾಗಿ ಮನೆಯಲ್ಲಿ ಗ್ಯಾಸ್ ಶೇಖರಣೆಯಾಗಿದ್ದರಿಂದ ಸ್ಟವ್ ಹಚ್ಚುವ ವೇಳೆ ಇಡೀ ಮನೆಗೆ ಬೆಂಕಿ ಆವರಿಸಿದೆ ಎಂದು ಹೇಳಲಾಗಿದೆ. ವಿಷಯ ತಿಳಿದು, ಸ್ಥಳಕ್ಕೆ ಪೊಲೀಸ್ ಆಯುಕ್ತ ರಮೇಶ್, ಡಿಸಿಪಿ ಎಂ.ಮುತ್ತುರಾಜ್ ಭೇಟಿ ನೀಡಿ, ಪರಿಶೀಲಿಸಿದರು. ಎಫ್‍ಎಸ್‍ಎಲ್ ಅಧಿಕಾರಿಗಳ ತಂಡ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿಯಲು ಕೆಲವು ವಸ್ತುಗಳ ತುಣುಕನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಕೊಂಡೊಯ್ದರು. ಈ ಸಂಬಂಧ ಎನ್.ಆರ್.ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »