ಹಾಸನ: ನಗರದ ಹೊರವಲಯ ದಲ್ಲಿರುವ ಹನುಮಂತಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳ ಪಾಲಿಗೆ ಮಂಗಳವಾರ ಎಂದಿನಂತಿರಲಿಲ್ಲ.
ಶಾಲೆಗೆ ಹೊರಟು ಬಂದ ಅವರನ್ನೆಲ್ಲಾ ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಅದ್ಧೂರಿಯಾಗಿ ಕರೆ ತರಲಾ ಯಿತು. ಜತೆಗೆ ಪೂರ್ಣಕುಂಭ ಕಳಶದ ಸ್ವಾಗತವೂ ಮಕ್ಕಳಿಗೆ ದೊರೆಯಿತು. ಇದನ್ನೆಲ್ಲಾ ಕಂಡು ಮಕ್ಕಳು ಹಿರಿಹಿರಿ ಹಿಗ್ಗಿದರು. ಕುದುರೆ ಗಾಡಿಯಲ್ಲಿ ಕುಳಿತು ಕೇಕೆ ಹಾಕಿ ನಕ್ಕರು.
ಮಕ್ಕಳನ್ನು ಕುದುರೆ ಗಾಡಿಯಲ್ಲಿ ಕುಳ್ಳಿರಿಸಿದ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. ಶಾಲೆಗೆ ಪೂರ್ಣ ಕುಂಭ ಸ್ವಾಗತದ ಮೂಲಕ ಶಿಕ್ಷಕ ವೃಂದದವರು ಹಾಗೂ ಸುಗಮ್ಯ ಶಿಕ್ಷಾ ಕಾರ್ಯಕ್ರಮ ತಂಡದ ವರು ಬರಮಾಡಿಕೊಂಡರು. ಕುದುರೆ ಗಾಡಿಯ ಅಕ್ಕಪಕ್ಕ ಬಣ್ಣದ ಛತ್ರಿಗಳು, ಸ್ವಾಗತದ ಚಾಮರಗಳು, ಕಳಸ ಹೊತ್ತ ಮಕ್ಕಳು ಮೆರವಣಿಗೆಗೆ ಮೆರಗು ತಂದರು.
ನಂತರ ಶಾಲೆಯಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸುಗಮ್ಯ ಶಿಕ್ಷಾ ಕಾರ್ಯಕ್ರಮದಡಿ ಹೊರ ತಂದ 2018-19ನೇ ಶಾಲಾ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು
ಕುದುರೆ ಗಾಡಿಯಲ್ಲಿ ಬಂದ ಮಕ್ಕಳನ್ನು ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ಪ್ರೀತಿಯಿಂದ ತರಗತಿಯೊಳಗೆ ಕರೆದೊಯ್ದರು. ಈ ವೇಳೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹೊಸದಾಗಿ ಶಾಲೆಗೆ ಬಂದ ಮಕ್ಕಳ ಮೇಲೆ ಪುಷ್ಪವೃಷ್ಟಿಗರೆದು ವಿದ್ಯಾದೇಗುಲಕ್ಕೆ ಸ್ವಾಗತಿಸಿದರು.