ಮನೆ ಮನೆಯಿಂದ ಇ-ವೇಸ್ಟ್ ಸಂಗ್ರಹಿಸುವ ಪಾಲಿಕೆ ಯೋಜನೆ ಸ್ಥಗಿತ
ಮೈಸೂರು

ಮನೆ ಮನೆಯಿಂದ ಇ-ವೇಸ್ಟ್ ಸಂಗ್ರಹಿಸುವ ಪಾಲಿಕೆ ಯೋಜನೆ ಸ್ಥಗಿತ

September 20, 2020

ಮೈಸೂರು, ಸೆ. 19(ಆರ್‍ಕೆ)- ಸ್ವಚ್ಛ ನಗರಿ ಖ್ಯಾತಿ ಪಡೆದಿರುವ ಮೈಸೂರು ನಗರ ದಲ್ಲಿ ಮನೆ ಮನೆಗೆ ತೆರಳಿ ಇ-ವೇಸ್ಟ್ (ಎಲೆಕ್ಟ್ರಾನಿಕ್ ತ್ಯಾಜ್ಯ) ಸಂಗ್ರಹಿಸುವ ಮಹ ತ್ವಾಕಾಂಕ್ಷಿ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಕೈಬಿಟ್ಟಂತಿದೆ.

ನಗರದಲ್ಲಿ ಉತ್ಪತ್ತಿಯಾಗುವ ವಸತಿ ಹಾಗೂ ವಾಣಿಜ್ಯ ಬಳಕೆಯ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಪ್ರತೀ ತಿಂಗಳ 17ರಂದು ಮನೆ ಮನೆಗೆ ತೆರಳಿ ಸಂಗ್ರಹಿಸಿ ವೈಜ್ಞಾನಿಕ ವಾಗಿ ವಿಲೇವಾರಿ ಮಾಡುವ ಯೋಜನೆ ಯನ್ನು ಮೈಸೂರು ಮಹಾನಗರ ಪಾಲಿಕೆಯು ಆರಂಭಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಯೋಜನೆಯನ್ನು ಪಾಲಿಕೆ ಮರೆತಿದ್ದು, ಇದರಿಂದ ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಇತ್ತೀ ಚೆಗೆ ನಡೆದ ಮೈಸೂರು ಗ್ರಾಹಕರ ಪರಿ ಷತ್(ಎಂಜಿಪಿ) ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಪರಿಸರ ಇಂಜಿ ನಿಯರ್ ಮಧುಕರ್ ತಿಳಿಸಿದ್ದರು.

ಇ-ತ್ಯಾಜ್ಯಗಳ ವಿಲೇವಾರಿಗೆ ಸಹ ಕರಿಸಲು ಪಾಲಿಕೆಯು ಕಂಪನಿಗಳನ್ನು ಆಹ್ವಾನಿಸಿತ್ತು. ನಾಲ್ಕೈದು ಕಂಪನಿಗಳು ಅದಕ್ಕೆ ಆಸಕ್ತಿ ತೋರಿದ್ದವಾದರೂ ತದ ನಂತರ ತ್ಯಾಜ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ವಿಲೇವಾರಿ ಮಾಡಲಿಲ್ಲ. ಹಾಗಾಗಿ ಈ ಯೋಜನೆಯೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜನ್ಮದಿನದ ಅಂಗವಾಗಿ ಕಳೆದ ವರ್ಷ ಸೆ.17ರಂದು ಇ-ವೇಸ್ಟ್ ಸಂಗ್ರಹ ಮತ್ತು ವಿಲೇವಾರಿ ಯೋಜನೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿತ್ತು. ಹೀಗೆ ಮನೆ ಮನೆಯಿಂದ ಕಲೆಹಾಕಿದ್ದ ಹಳೆಯ ಬ್ಯಾಟರಿ, ಕಂಪ್ಯೂಟರ್, ಕೀ ಬೋರ್ಡ್, ಮೊಬೈಲ್ ಫೋನ್, ಇನ್ನಿತರೆ ಎಲೆ ಕ್ಟ್ರಾನಿಕ್ ವಸ್ತುಗಳು, ಟಿವಿ ಸೆಟ್‍ಗಳು, ಟ್ಯೂಬ್ ಲೈಟ್ಸ್, ಚಾರ್ಜರ್, ಪ್ರಿಂಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಆಯಾ ವಲಯ ಕಚೇರಿಯ ಜೀರೋ ವೇಸ್ಟ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ಸಂಗ್ರಹಿಸಲಾಗುತ್ತಿತ್ತು. ನಂತರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂ ತ್ರಣ ಮಂಡಳಿ ಅಧಿಕಾರಿಗಳ ಸಹಾಯ ದಿಂದ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಜಾರಿಯಲ್ಲಿತ್ತು. ಆದರೆ ಆ ವ್ಯವಸ್ಥೆ ತದನಂತರ ಮುಂದು ವರೆಯಲಿಲ್ಲವಾದ್ದರಿಂದ ನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯದ ಜೊತೆಗೆ ಇ-ತ್ಯಾಜ್ಯವನ್ನು ಸೀವೆಜ್‍ಫಾರಂ ನಲ್ಲಿರುವ ಕಸದರಾಶಿಗೆ ಡಂಪ್ ಮಾಡ ಲಾಗುತ್ತಿದೆ ಎಂಬ ವಿಷಯವೂ ಎಂಜಿಪಿ ಸಭೆಯಲ್ಲಿ ಪ್ರಸ್ತಾಪವಾಯಿತು.

ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯೆ ನೀಡಿದ ಮೈಸೂರು ಮಹಾ ನಗರ ಪಾಲಿಕೆಯ ವೈದ್ಯಾಧಿಕಾರಿ ಡಾ. ಡಿ.ಜಿ. ನಾಗರಾಜ್, ಮೈಸೂರು ನಗರದಲ್ಲಿ ನಿತ್ಯ 450 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಆ ಪೈಕಿ ಶೇ.90ರಿಂದ 95ರಷ್ಟು ತ್ಯಾಜ್ಯವನ್ನು ವಿದ್ಯಾರಣ್ಯಪುರಂನಲ್ಲಿರುವ ಎಕ್ಸೆಲ್ ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ಪ್ಲಾಂಟ್‍ನಲ್ಲಿ ವಿಲೇವಾರಿ ಮಾಡಲಾಗುತ್ತದೆ. ಅದೇ ರೀತಿ ಕಳೆದ ವರ್ಷ ಆರಂಭವಾದ ಇ-ವೇಸ್ಟ್ ಸಂಗ್ರಹ ಪ್ರತಿ ತಿಂಗಳು ನಡೆಯು ತ್ತಿದೆ. ಈ ರೀತಿ ಸಂಗ್ರಹವಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗಿಂದಾಗ್ಗೆ ಹರಾಜು ಮಾಡುವ ವ್ಯವಸ್ಥೆಯೂ ನಮ್ಮಲ್ಲಿ ಮುಂದುವರೆದಿದೆ ಎಂದು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ಒಂಭತ್ತು ವಲಯ ಕಚೇರಿಗಳ ಪೈಕಿ 6ರಲ್ಲಿ ಜೀರೋ ವೇಸ್ಟ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಮುಂದುವರೆದಿದೆ. ಪ್ರತಿ ತಿಂಗಳ 17ರಂದು ಪೌರಕಾರ್ಮಿಕರು ಮನೆ ಮನೆಯಿಂದ ಇ-ವೇಸ್ಟ್‍ಗಳನ್ನು ಕಲೆಹಾಕಿ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

Translate »