ಮನೆಗೆ ನುಗ್ಗಿ ಮಗನ ಮುಂದೆಯೇ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ
ಮೈಸೂರು

ಮನೆಗೆ ನುಗ್ಗಿ ಮಗನ ಮುಂದೆಯೇ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

August 9, 2022

ಮೈಸೂರು,ಆ.8(ಎಸ್‍ಬಿಡಿ)- ಮನೆಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಸೋಮ ವಾರ ಹಾಡಹಗಲೇ ನಡೆದಿದೆ.

ಬೃಂದಾವನ ಬಡಾವಣೆ, 1ನೇ ಹಂತ, 7ನೇ ಕ್ರಾಸ್‍ನ ನಿವಾಸಿ ಸಂಪತ್‍ಕುಮಾರ್ (60) ಹತ್ಯೆಯಾದವರು. ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆ ಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ರಾಡ್‍ನಿಂದ ತಲೆಗೆ ಹೊಡೆದು ಪರಾರಿ ಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು, ಸಂಪತ್ ಕುಮಾರ್ ಸ್ಥಳದಲ್ಲೇ ಸಾವನ್ನ ಪ್ಪಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಅಗರ ಬತ್ತಿ ವ್ಯಾಪಾರ ಮಾಡಿಕೊಂಡಿದ್ದ ಸಂಪತ್ ಕುಮಾರ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಯಾಗಿರುವ ಪತ್ನಿ ಗಾಯತ್ರಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ 16 ವರ್ಷದ ಪುತ್ರನೊಂದಿಗೆ ವಾಸವಿದ್ದರು. ಇಂದು ಎಂದಿನಂತೆ ಗಾಯತ್ರಿ ಅವರು ಶಾಲೆಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಪುತ್ರ, ಮನೆಗೆ ವಾಪಸ್ಸಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪುತ್ರನ ಕಣ್ಣೆದುರೇ ಹತ್ಯೆ!

ಸಂಪತ್ ಕುಮಾರ್ ಅವರ ಪುತ್ರ ಕಾಲೇಜಿನಿಂದ ಮನೆಗೆ ವಾಪಸ್ಸಾಗುವ ಸಮಯದಲ್ಲೇ ಈ ಘಟನೆ ನಡೆದಿದೆ. ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ತಂದೆಯ ತಲೆ ಹಿಂಭಾಗಕ್ಕೆ ಬಲವಾಗಿ ಹೊಡೆದ. ನಾನು ರಕ್ಷಣೆಗೆ ಮುಂದಾದಾಗ ನನಗೂ ಹೊಡೆಯಲು ಬಂದ. ಭಯದಿಂದ ಕೂಗಿಕೊಂಡು ನಾನು ಹೊರಗೆ ಓಡಿ ಹೋಗಿ ನೆರೆ ಮನೆಯವರಿಗೆ ವಿಷಯ ತಿಳಿಸಿದೆ. ಅಷ್ಟರಲ್ಲಿ ಆ ವ್ಯಕ್ತಿ ಓಡಿಹೋಗಿದ್ದ ಎಂದು ಸಂಪತ್ ಕುಮಾರ್ ಪುತ್ರ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆ ಮನೆಯವರು `112’ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮನೆಯೊಳಗೆ ಯಾರೂ ತೆರಳದಂತೆ ಬಂದೋಬಸ್ತ್ ಮಾಡಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ ಹಾಗೂ ಗೀತಾ ಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್, ವಿವಿ ಪುರಂ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ವೆಂಕಟೇಶ್, ಮೇಟಗಳ್ಳಿ ಠಾಣೆ ಇನ್‍ಸ್ಪೆಕ್ಟರ್ ಹರೀಶ್ ಬಾಬು, ವಿಜಯನಗರ ಠಾಣೆಯ ರವಿಶಂಕರ್, ಮಂಡಿ ಠಾಣೆಯ ರಘು ಸೇರಿದಂತೆ ನರಸಿಂಹರಾಜ ವಿಭಾಗದ ಎಲ್ಲಾ ಠಾಣೆಗಳ ಇನ್‍ಸ್ಪೆಕ್ಟರ್‍ಗಳು, ಸಬ್‍ಇನ್‍ಸ್ಪೆಕ್ಟರ್‍ಗಳು, ಸಿಸಿಬಿ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಮನೆಯ ಹಾಲ್‍ನಲ್ಲೇ ಹತ್ಯೆ ನಡೆದಿತ್ತು. ಘಟನಾ ಸ್ಥಳದಿಂದ ಮನೆಯ ಸುತ್ತು ಹಾಕಿದ ಶ್ವಾನ, ಹಿಂಭಾಗದ ರಸ್ತೆಯ ರಾಜಕಾಲುವೆ ಬಳಿ, ಅದೇ ರಸ್ತೆಯಲ್ಲಿ ಟೈಲ್ಸ್ ಅಳವಡಿಸಲಾಗುತ್ತಿದ್ದ ಮನೆ ಬಳಿ ಸುತ್ತಾಡಿ ಅದೇ ರಸ್ತೆಯಲ್ಲಿ ಮುಂದಕ್ಕೆ ಸುಮಾರು ದೂರ ಹೋಗಿ ಅರ್ಧ ಗಂಟೆ ಬಳಿಕ ವಾಪಸ್ಸಾಯಿತು. ಸಂಪತ್ ಕುಮಾರ್ ಮನೆ ಪಕ್ಕದಲ್ಲಿ ಖಾಲಿ ನಿವೇಶನವಿದ್ದು, ಅಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ದುಷ್ಕರ್ಮಿ ಪರಾರಿಯಾಗಿರುವ ಹತ್ಯೆಗೆ ಬಳಸಿದ ವಸ್ತುವನ್ನು ಬಿಸಾಡಿರಬಹುದೆಂದು ಪೊಲೀಸರು ಹುಡುಕಾಟ ಮುಂದುವರೆಸಿದ್ದರು.

ಭಯಭೀತರಾದ ಜನ: ಹತ್ಯೆ ನಡೆದಿರುವ ಮನೆ ಮೇಟಗಳ್ಳಿ-ಬಿಎಂಶ್ರೀ ನಗರ ಸಂಪರ್ಕಿಸುವ ಮುಖ್ಯರಸ್ತೆ ಸಮೀಪಕ್ಕಿದೆ. ಇದೇ ರಸ್ತೆಯಲ್ಲಿರುವ ಪಾರ್ಕ್‍ನಲ್ಲಿ ಓಡಾಡುವವರಿಗೆ ಆ ಮನೆ ಕಾಣಿಸುತ್ತದೆ. ಸದಾ ಜನ ಸಂಚಾರ ಇದ್ದೇ ಇರುತ್ತದೆ. ಆದರೂ ಹಾಡಹಗಲೇ ಮನೆಗೆ ನುಗ್ಗಿ ಹತ್ಯೆ ಮಾಡಿರುವ ವಿಷಯ ತಿಳಿದ ಸ್ಥಳೀಯರು ಭಯಭೀತಗೊಂಡು ಸ್ಥಳದಲ್ಲಿ ಜಮಾಯಿಸಿದರು. ಅಲ್ಲದೆ ಸುತ್ತಮುತ್ತಲ ಬಡಾವಣೆಯ ನೂರಾರು ಮಂದಿ ಸ್ಥಳಕ್ಕೆ ದೌಡಾಯಿಸಿ, ಆತಂಕ ವ್ಯಕ್ತಪಡಿಸಿದರು.

ಸಂಪತ್ ಕುಮಾರ್ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿರಲಿಲ್ಲ. ಅಗರ ಬತ್ತಿ ಮಾರಾಟ ಮಾಡುವುದರ ಜೊತೆಗೆ ಅವಕಾಶ ಸಿಕ್ಕಾಗ ಮನೆ ಮಾರಾಟ ಮಾಡಿಸುವುದು, ಭೋಗ್ಯ ಅಥವಾ ಬಾಡಿಗೆಗೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಹಾಗಾಗಿ ಯಾರೊಂದಿಗೂ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರವಿರಲಿಲ್ಲ. ಪತ್ನಿ ಖಾಸಗಿ ಶಾಲೆ ಶಿಕ್ಷಕಿಯಾಗಿದ್ದರಿಂದ ಇಬ್ಬರ ದುಡಿಮೆಯಲ್ಲಿ ನೆಮ್ಮದಿಯಾಗಿದ್ದರು. ಕುಟುಂಬದಲ್ಲೂ ಯಾವ ಗಲಾಟೆಯೂ ಇರಲಿಲ್ಲ. ಸಂಪತ್ ಕುಮಾರ್ ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳುವು ವ್ಯಕ್ತಿಯೂ ಆಗಿರಲಿಲ್ಲ. ಆದರೂ ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂದು ನೆರೆದಿದ್ದ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ವೈಯಕ್ತಿಕ ಕಾರಣವೇ?: ಸಂಪತ್ ಕುಮಾರ್ ಪತ್ನಿ ಗಾಯತ್ರಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿವಿಪುರಂ ಠಾಣೆ ಪೊಲೀಸರು, ಗಾಯತ್ರಿ ಅವರ ಪುತ್ರನ ಹೇಳಿಕೆಯನ್ನೂ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವೈಯಕ್ತಿಕ ಕಾರಣದಿಂದ ಹತ್ಯೆ ನಡೆದಿರಬಹುದೆಂಬ ಸಂದೇಹ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನದ ಬಳಿಕವೇ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »