ವಿಘ್ನೇಶ್ವರನಿಗೆ ವಿಘ್ನನಿವಾರಣೆ!
News

ವಿಘ್ನೇಶ್ವರನಿಗೆ ವಿಘ್ನನಿವಾರಣೆ!

August 9, 2022

ಬೆಂಗಳೂರು, ಆ.8(ಕೆಎಂಶಿ)-ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮುಕ್ತವಾಗಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
ಕೋವಿಡ್-19 ಕಾರಣಾಂತರದಿಂದ ಸಾರ್ವಜನಿಕವಾಗಿ ಗಣೇಶೋತ್ಸವ ಸೇರಿದಂತೆ ಇತರೆ ಸಮಾರಂಭಗಳ ಆಚರಣೆಗೆ ಇದ್ದ ನಿರ್ಬಂಧವನ್ನು ಸಂಪೂರ್ಣ ಹಿಂತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.

ಕೋವಿಡ್-19 ಕಾರಣದಿಂದ ಒಂದು ವರ್ಷ ಗಣೇಶೋ ತ್ಸವ ಹಾದಿ ಬೀದಿಯಲ್ಲಿ ಆಚರಿಸಲು ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಕಳೆದ ವರ್ಷ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು, ವಾರ್ಡ್‍ಗೆ ಒಂದು ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಸಂಘಟನೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಗಣೇಶೋತ್ಸವಕ್ಕೆ ಇದ್ದ ನಿರ್ಬಂಧವನ್ನು ಪೂರ್ಣವಾಗಿ ಸಡಿಲಿಕೆ ಮಾಡಲಾಗಿದೆ ಎನ್ನಲಾಗಿದೆ.

ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಕೋವಿಡ್-19 ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ರಾಷ್ಟ್ರದ ಸರಾಸರಿ ಯಲ್ಲಿ ಕರ್ನಾಟಕದ್ದೇ ಶೇಕಡ 10 ರಷ್ಟು ಪಾಲು, ಈ ಬಗ್ಗೆ ಎಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಎಚ್ಚರಿಕೆ ನೀಡಿದ್ದರೂ, ಇದನ್ನು ಗಣನೆಗೆ ತೆಗೆದುಕೊಳ್ಳದೆ, ಸಾರ್ವಜನಿಕ ಸಮಾರಂಭಗಳಿಗಿದ್ದ ನಿರ್ಬಂಧವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಖಚಿತಪಡಿ ಸಿದ ಕಂದಾಯ ಸಚಿವ ಆರ್.ಶೋಕ್ ತಾವು ಮುಖ್ಯ ಮಂತ್ರಿಯವರನ್ನು ಇಂದು ದೂರವಾಣಿ ಮೂಲಕ ಸಂಪರ್ಕಿಸಿ, ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಆದೇಶಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಸಂಸ್ಥೆಗಳು ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿದ್ದರೂ, ಸರ್ಕಾರದ ತೀರ್ಮಾನದ ನಂತರ ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬಹುದಾಗಿದೆ ಎಂದರು.

Translate »