ಕರ್ತೋಜೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೆಟ್ಟ ಕುಸಿಯುವ ಆತಂಕ
ಕೊಡಗು

ಕರ್ತೋಜೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೆಟ್ಟ ಕುಸಿಯುವ ಆತಂಕ

August 10, 2022

ಮಡಿಕೇರಿ, ಆ.9- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಂಭವವಿರುವುದರಿಂದ ಮಂಗಳವಾರ ರಾತ್ರಿಯಿಂದ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಹೆದ್ದಾರಿಯಲ್ಲಿ ಮಣ್ಣು ಕುಸಿತದ ಪರಿಣಾಮ ಮಡಿಕೇರಿ- ಮಂಗಳೂರು ರಸ್ತೆ ಸಂಚಾರವನ್ನು ರಾತ್ರಿ 9 ಗಂಟೆಯಿಂದ ನಾಳೆ (ಬುಧವಾರ) ಬೆಳಗ್ಗೆ 6.30 ಗಂಟೆವರೆಗೂ ಎಲ್ಲಾ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ. ಹೆದ್ದಾರಿ ಬಂದ್ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ಕೊಡಗು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮದೆನಾಡು ಬಳಿ ಗುಡ್ಡ ಕುಸಿತದ ಆತಂಕವಿದ್ದು, ವಾಹನ ಪ್ರಯಾಣಿಕರಿಗೆ ಅಪಾಯ ಸಾಧ್ಯತೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ವರುಣ ಸ್ವಲ್ಪ ಶಾಂತವಾಗಿದೆಯಾದರೂ, ಮದೆನಾಡು ಸಮೀಪದ ಕರ್ತೋಜೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಭಾರೀ ಬೆಟ್ಟ ಕುಸಿತವಾಗುವ ಸಾಧ್ಯತೆಗಳು ಹೆಚ್ಚಾಗಿ ರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

2018ರ ಮಳೆಗಾಲದಲ್ಲಿ ಭಾರೀ ಭೂ ಕುಸಿದು ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣವಾಗಿ ಕೊಚ್ಚಿ ಹೋದ ಸ್ಥಳದಲ್ಲೇ ಇದೀಗ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿ 2 ಅಡಿಗಳಷ್ಟು ಬೆಟ್ಟ ತಗ್ಗಲ್ಪಟ್ಟಿದೆ. ಕುಸಿದು ಬೀಳುವ ಹಂತ ದಲ್ಲಿರುವ ಬೆಟ್ಟದ ಕೆಳಭಾಗ ಅಲ್ಪ ಪ್ರಮಾಣದಲ್ಲಿ ಕುಸಿತವಾ ಗಿದ್ದು, ಹೆದ್ದಾರಿ ಬದಿಯ ಚರಂಡಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಯಾವುದೇ ಕ್ಷಣದಲ್ಲೂ ಭಾರಿ ಭೂ ಕುಸಿಯುವ ಖಚಿತತೆ ಇರುವ ಕಾರಣ ಸ್ಥಳದಲ್ಲೇ ಬೃಹತ್ ಹಿಟಾಚಿ ಯಂತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ನೂರಾರು ಲೋಡ್‍ಗಳಷ್ಟು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬೀಳಲಿದ್ದು, ಕೆಲ ಕಾಲ ಹೆದ್ದಾರಿ ಸಂಚಾರ ಬಂದ್ ಆಗಲಿದೆ. ಹೀಗಾಗಿ ಮಣ್ಣು ಸಾಗಿಸಲು ಬೇಕಾದ ಲಾರಿಗಳನ್ನು ಕೂಡ ಸಿದ್ಧವಾಗಿರಿ ಸಲಾಗಿದೆ. ಭೂ ಕುಸಿಯುವ ಸ್ಥಳದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಚೆಸ್ಕಾಂ ಇಲಾಖೆ ತೆರವು ಮಾಡುತ್ತಿದ್ದು ಜೋಡುಪಾಲ, ಕರ್ತೋಜೆ, ಕೊಯನಾಡು ವ್ಯಾಪ್ತಿಯಲ್ಲಿ ವಿದ್ಯುತ್ ಸಂಚಾರ ಕಡಿತವಾಗಿದೆ.
ಚೆಕ್‍ಪೋಸ್ಟ್: ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲೇ ಭೂ ಕುಸಿಯುವ ಸಾಧ್ಯತೆ ಇರುವ ಕಾರಣ ಬೆಟ್ಟದ ತಪ್ಪಲಿ ನಲ್ಲಿ ಪ್ರಸ್ತುತ ಬ್ಯಾರಿಕೇಡ್‍ಗಳನ್ನು ಅಳವಡಿಸಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗುಡ್ಡದ ಕೆಳಭಾಗದ ಎರಡೂ ಬದಿಯಲ್ಲಿ ಪೊಲೀಸ್ ಚೆಕ್‍ಪೋಸ್ಟ್ ಅಳವಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಯಾವುದೇ ಕ್ಷಣದಲ್ಲೂ ಗುಡ್ಡ ಕುಸಿಯುವ ಹಂತದಲ್ಲಿ ರುವುದರಿಂದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ.

ಶಾಸಕ ಬೋಪಯ್ಯ ಭೇಟಿ: ಇದಕ್ಕೂ ಮುನ್ನ ಇಂದು ಬೆಳಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೂ ಕುಸಿಯುವ ಹಂತಕ್ಕೆ ತಲುಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗುಡ್ಡ ಕುಸಿದ ತಕ್ಷಣವೇ ಮಣ್ಣು ತೆರವು ಕಾರ್ಯಾಚರಣೆ ನಡೆಸಬೇಕು. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೈವೇ ಪ್ರಾಧಿಕಾರದ ಇಂಜಿನಿಯರ್‍ಗಳಿಗೆ ಸೂಚಿಸಿದರು.

ಪರ್ಯಾಯ ಮಾರ್ಗವಿಲ್ಲ:ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ. ಬೋಪಯ್ಯ, ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಈ ಹಿಂದೆಯೇ ಭೂ ಕುಸಿತವಾಗಿತ್ತು. ಸಣ್ಣ ಪ್ರಮಾಣ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ತಕ್ಷಣವೇ ಮಣ್ಣು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಆದರೆ ಇದೀಗ ಕರ್ತೋಜೆ ಬಳಿ ಕುಸಿಯುವ ಹಂತದಲ್ಲಿರುವ ಗುಡ್ಡ ಕುಸಿತವಾದಲ್ಲಿ ಅನಾಹುತ ಘಟಿಸುವ ಎಲ್ಲಾ ಸಾಧ್ಯತೆ ಇದೆ. ಎಷ್ಟು ಪ್ರಮಾಣದಲ್ಲಿ ಮಣ್ಣು ಕುಸಿಯಲಿದೆ ಎಂದು ಅಂದಾಜಿ ಸಲು ಸಾಧ್ಯವಾಗುತ್ತಿಲ್ಲ. ಭೂ ಕುಸಿದು ರಸ್ತೆ ಕೊಚ್ಚಿ ಹೋದಲ್ಲಿ ಪರ್ಯಾಯ ರಸ್ತೆಯೂ ಇಲ್ಲವಾಗುತ್ತದೆ. ಕರಿಕೆ ರಸ್ತೆಯಲ್ಲೂ 10 ಕಡೆಗಳಲ್ಲಿ ಭೂ ಕುಸಿತವಾಗಿದೆ. ಆ ರಸ್ತೆಯೂ ಅಪಾಯದಲ್ಲಿದೆ. ಇದರಿಂದ ಮಡಿಕೇರಿ-ಮಂಗಳೂರು ಕಡೆಗೆ ತೆರಳಲು ಬೇರೆ ಯಾವುದೇ ರಸ್ತೆ ಸಂಪರ್ಕ ಇಲ್ಲವಾಗುತ್ತದೆ ಎಂದು ಶಾಸಕ ಬೋಪಯ್ಯ ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಮುರುಗೇಶ್ ಮಾತನಾಡಿ, ಯಾವ ಕ್ಷಣದಲ್ಲಿ ಭೂ ಕುಸಿಯಲಿದೆ ಎಂದು ಹೇಳಲಾಗದು. ಹೀಗಾಗಿ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರಸ್ತೆ ಅಗಲವಾಗಿರುವ ಕಾರಣ ಭಯದ ಆತಂಕವಿಲ್ಲ ಎಂದರು. ಈ ಎಲ್ಲಾ ಕಾರಣಗಳಿಂದ ಜಿಲ್ಲಾಧಿಕಾರಿಗಳು ಮಂಗಳವಾರ ರಾತ್ರಿ ಈ ಆದೇಶ ಹೊರಡಿಸಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.

Translate »