ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಮೈಸೂರು

ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ

August 10, 2022

ಮೈಸೂರು, ಆ. 9(ಆರ್‍ಕೆ)- ಅಪ್ರಾಪ್ತ ಮಗನೇ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ತಂದೆಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೈಸೂರಿನ ಬೃಂದಾವನ ಬಡಾ ವಣೆ 1ನೇ ಹಂತ, 7ನೇ ಕ್ರಾಸ್ ನಿವಾಸಿಯಾದ ರಿಯಲ್ ಎಸ್ಟೇಟ್ ಏಜೆಂಟ್ ಸಂಪತ್‍ಕುಮಾರ್ ನನ್ನು ಆತನ 16 ವರ್ಷದ ಪುತ್ರ, ಡಿಪ್ಲೊಮಾ ವಿದ್ಯಾರ್ಥಿ ಸೋಮ ವಾರ ಮಧ್ಯಾಹ್ನ 2.50ರ ವೇಳೆಗೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಅಮಾನುಷವಾಗಿ ಕೊಲೆ ಮಾಡಿರು ವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಘಟನೆಯ ವಿವರ: ಮನೆಯನ್ನು ಬಾಡಿಗೆಗೆ, ಭೋಗ್ಯಕ್ಕೆ ಕೊಡಿಸುವ ವೃತ್ತಿ ಮಾಡುತ್ತಿದ್ದ ಸಂಪತ್‍ಕುಮಾರ್, ಅದರಲ್ಲಿ ಬಂದ ಕಮಿಷನ್ ಹಣವನ್ನು ಮನೆಗೆ ಕೊಡದೇ ಕಾಲ ಕಳೆಯುತ್ತಿದ್ದು, ಸೋಮವಾರ ಪತ್ನಿ ಗಾಯತ್ರಿ ಎಂದಿನಂತೆ ಶಾಲೆಗೆ ಹೋಗಿದ್ದರು. ಕಾಲೇಜೊಂದರಲ್ಲಿ ಡಿಪ್ಲೊಮಾ ಓದುತ್ತಿದ್ದ ಪುತ್ರ, ನಿತ್ಯ ಮಧ್ಯಾಹ್ನ ಶಾಲೆಗೆ ಹೋಗಿ ತಾಯಿಯೊಂದಿಗೆ ಊಟ ಮಾಡಿ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವನು, ತನ್ನ ಸ್ನೇಹಿತನ ಹುಟ್ಟುಹಬ್ಬವಿದ್ದ ಕಾರಣ ಅಲ್ಲಿಯೇ ಊಟ ಮಾಡಿಕೊಂಡು ಸೋಮವಾರ ಮಧ್ಯಾಹ್ನ 2.40ಕ್ಕೆ ಮನೆಗೆ ಹಿಂದಿರುಗಿದ್ದ. ಆ ವೇಳೆ ಹಾಲ್‍ನಲ್ಲಿ ಚೇರ್ ಮೇಲೆ ಕುಳಿತು, ವಾಲ್ಯೂಂ ಜೋರಾಗಿ ಹಾಕಿಕೊಂಡು ಟಿವಿ ನೋಡುತ್ತಿದ್ದ ತಂದೆ ಬಳಿ ಹೋಗಿ ಟಿವಿ ವಾಲ್ಯೂಂ ಕಡಿಮೆ ಮಾಡುವಂತೆ ಹೇಳಿದರೂ ಕೇಳದೇ ಜಗಳ ಆರಂಭಿಸಿದ ಸಂಪತ್‍ಕುಮಾರ್ ಅವರ ತಲೆಗೆ ಕೊಠಡಿಯಲ್ಲಿದ್ದ ರಾಡ್ ತಂದು ಕುಳಿತಲ್ಲೇ ಏಳೆಂಟು ಬಾರಿ ಬಲವಾಗಿ ಹೊಡೆದು ಕೊಲೆ ಮಾಡಿದ ಪುತ್ರ, ನಂತರ ರಕ್ತದ ಕಲೆಗಳಾಗಿದ್ದ ತನ್ನ ಶರ್ಟ್, ಪ್ಯಾಂಟ್ ಅನ್ನು ಬದಲಾಯಿಸಿಕೊಂಡಿದ್ದಾನೆ. ನಂತರ ಮೊದಲು ತನ್ನ ತಾಯಿಗೆ ಕರೆ ಮಾಡಿ ಯಾರೋ ಒಬ್ಬ ಬಂದು ಅಪ್ಪನನ್ನು ಕೊಲೆ ಮಾಡಿ ಓಡಿ ಹೋದ ಎಂದು ಮಾಹಿತಿ ನೀಡಿ, ಆಕೆ ಬರುವಷ್ಟರಲ್ಲಿ ನೆರೆಹೊರೆಯವರಿಗೂ ವಿಷಯ ತಿಳಿಸಿದ ಪುತ್ರ, ರಕ್ತಸಿಕ್ತ ತಂದೆ ಮೃತದೇಹದ ಬಳಿಯೇ ಅಳುತ್ತಾ ಕುಳಿತಿದ್ದ.

ಸುಳ್ಳು ಹೇಳಿದ: ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳು, ಎಸಿಪಿ ಹಾಗೂ ಇನ್ಸ್‍ಪೆಕ್ಟರ್‍ಗಳು, ಮಹಜರು ನಡೆಸಿದ ನಂತರ ಕೊಲೆ ಹೇಗಾಯಿತು ಎಂದು ಪ್ರಶ್ನಿಸಿದಾಗ ಅಪ್ರಾಪ್ತ ಮಗ ತೊದಲುತ್ತಾ ನೀಡಿದ ಹೇಳಿಕೆಯಿಂದ ಹಲವು ಅನುಮಾನ ಮೂಡಿದ್ದವು. ಮಧ್ಯಾಹ್ನ ನಾನು ಮನೆಗೆ ಬಂದಾಗ ಅಪ್ಪ ಇದ್ದರು. ನನ್ನ ಹಿಂದೆಯೇ ಯಾರೋ ಒಬ್ಬ ಬಂದು ಏಕಾಏಕಿ ರಾಡಿನಿಂದ ಅಪ್ಪನ ತಲೆಗೆ ಹೊಡೆದು ಓಡಿ ಹೋದ. ತಡೆಯಲು ಹೋದ ನನಗೂ ಹೊಡೆದು ಕೊಲೆ ಮಾಡುತ್ತೇನೆಂದು ಹೆದರಿಸಿದ್ದರಿಂದ ನಾನು ಬಿಡಿಸಲು ಆಗಲಿಲ್ಲ ಎಂದು ಹೇಳಿದ್ದ.

ಬೇರೆ ಯಾರೂ ಬಂದಿರಲಿಲ್ಲ: ಸಂಶಯಗೊಂಡ ಪೊಲೀಸರು ಮನೆ ಸುತ್ತಲಿನ ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪರಿಶೀಲಿಸಿದಾಗ ಸೋಮವಾರ ಬೆಳಗ್ಗೆಯಿಂದಲೂ ಯಾರೂ ಆ ಮನೆಗೆ ಬಂದು ಹೋಗಿಲ್ಲ ಎಂಬುದು ದೃಢಪಟ್ಟಿತಾದರೂ, ಅಪ್ಪ ಕೊಲೆಯಾಗಿದ್ದರಿಂದ ದುಃಖದಲ್ಲಿರುವ ಮಗನಿಗೆ ಘಾಸಿ ಮಾಡಬಾರದೆಂದು ಆತನನ್ನು ಸಮಾಧಾನಪಡಿಸಿ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದ ಪೊಲೀಸರು, ಗಾಯತ್ರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ನಾನೇ ಅಪ್ಪನನ್ನು ಕೊಂದೆ: ಮಧ್ಯಾಹ್ನದಿಂದಲೂ ಯಾರೋ ಒಬ್ಬ ಬಂದು ಏಕಾಏಕಿ ಹೊಡೆದು ಕೊಲೆ ಮಾಡಿ ಪರಾರಿಯಾದ ಎಂದು ಹೇಳುತ್ತಿದ್ದ ಅಪ್ರಾಪ್ತ, ಠಾಣೆಗೆ ಕರೆಸಿ ನಯವಾಗಿ ಪ್ರಶ್ನಿಸಿದಾಗ, ತಡರಾತ್ರಿ 11.45 ಗಂಟೆ ವೇಳೆಗೆ ನಾನೇ ಅಪ್ಪನನ್ನು ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

ಮುಂದೆಯೇ ನಿಂತು ಹೊಡೆದ: ನಮ್ಮ ತಾಯಿಗೆ ನೀಡುತ್ತಿದ್ದ ಹಿಂಸೆ, ಕಿರುಕುಳದಿಂದ ರೋಸಿ ಹೋಗಿದ್ದೆ ಸಾರ್. ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ದ ನನ್ನಪ್ಪನನ್ನು ಚೇರ್ ಮೇಲೆ ಕುಳಿತಿದ್ದಾಗ ಎದುರಿನಿಂದಲೇ ತಲೆಗೆ ಏಳೆಂಟು ಬಾರಿ ಮನಸ್ಸೋ ಇಚ್ಛೆ ಹೊಡೆದು ಸಾಯಿಸಿದೆ ಸಾರ್ ಎಂದು ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

15 ದಿನದ ಹಿಂದೆಯೇ ಪ್ಲಾನ್ ಮಾಡಿದ್ದೆ: ಗರ್ಭಿಣಿಯಾಗಿದ್ದಾಗಿನಿಂದಲೇ ಸರಿಯಾಗಿ ಊಟ, ತಿಂಡಿ ಕೊಡದೇ ಹೊಡೆದು ಹಿಂಸೆ ನೀಡುತ್ತಿದ್ದನೆಂದು ನನ್ನ ತಾಯಿ ನನಗೆ ಹೇಳಿದ್ದರು. ನಂತರವೂ ನಿತ್ಯ ಹೊಡೆದು-ಬಡಿದು ತೊಂದರೆ ನೀಡುತ್ತಿದ್ದ ತಂದೆ, ನಾನು ಬುದ್ಧಿ ಬಂದಾಗಿನಿಂದ ಮನೆ ಕಸ ಗುಡಿಸಲು ಅವಕಾಶ ಕೊಟ್ಟಿಲ್ಲ. ನಿತ್ಯ ಟಿವಿ ಮತ್ತು ಟೇಪ್‍ರೆಕಾರ್ಡರ್ ಎರಡನ್ನೂ ಒಟ್ಟಿಗೇ ಆನ್ ಮಾಡಿಕೊಂಡು ಹೆಚ್ಚುವರಿ ಸ್ಪೀಕರ್ ಹಾಕಿ ಜೋರಾಗಿ ವಾಲ್ಯೂಂ ಕೊಟ್ಟು ಹಾಡು ಕೇಳುತ್ತಿದ್ದರಿಂದ ನಮಗೆ ತಲೆ ಚಿಟ್ಟು ಹಿಡಿದುಹೋಗುತ್ತಿತ್ತು. ಅವನ ಈ ಅಸಹಜ ಮನಸ್ಥಿತಿಯಿಂದ ನಮ್ಮ ಮನೆ ದನದ ಕೊಟ್ಟಿಗೆಯಂತಿದ್ದರಿಂದ ಯಾರೂ ನಮ್ಮ ಮನೆಗೆ ಬರುತ್ತಿರಲಿಲ್ಲ. ಇನ್ನೂ ಆತನ ಉಪಟಳ ಸಹಿಸಲು ಸಾಧ್ಯವಿಲ್ಲ ಎಂದು ಕಳೆದ 15 ದಿನಗಳ ಹಿಂದೆಯೇ ಅಪ್ಪನನ್ನು ಮುಗಿಸಬೇಕೆಂದು ತೀರ್ಮಾನಿಸಿ ಕಬ್ಬಿಣದ ರಾಡ್ ತಂದು ರೂಂನಲ್ಲಿ ಬಚ್ಚಿಟ್ಟು ಸಮಯಕ್ಕಾಗಿ ಕಾಯುತ್ತಿದ್ದೆ ಎಂದು ಹೇಳಿಕೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಹಣಕ್ಕಾಗಿ ಪೀಡಿಸುತ್ತಿದ್ದ: ಇತ್ತೀಚೆಗೆ ಏನೂ ಕೆಲಸ ಮಾಡದೇ ಸದಾ ಮನೆಯಲ್ಲೇ ಇರುತ್ತಿದ್ದ ಅಪ್ಪ, ನಮ್ಮ ತಾಯಿ ಶಾಲೆಯಲ್ಲಿ ಪಾಠ ಮಾಡಿ ತರುತ್ತಿದ್ದ 10,000 ರೂ.ಗಳನ್ನೂ ಕೊಡುವಂತೆ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಜಗಳ ತೆಗೆದು ಹೊಡೆಯುತ್ತಿದ್ದರಿಂದ ಮನೆಯಲ್ಲಿ ನೆಮ್ಮದಿ ಎಂಬುದೇ ಇರಲಿಲ್ಲ. ನಾನೂ ಎಷ್ಟೂ ಅಂತ ಸಹಿಸಲಿ. ಅಮ್ಮನ ಸ್ಥಿತಿ ಕಂಡು ತುಂಬಾ ಬೇಜಾರಾಗಿತ್ತು. ಇಂತಹ ಅಪ್ಪ ಇರಲೇಬಾರದೆಂದು ತೀರ್ಮಾನಿಸಿ ಮುಗಿಸಿಬಿಟ್ಟೆ ಎಂದು ಆತ ಪೊಲೀಸರಿಗೆ ಸವಿವರವಾಗಿ ತನ್ನ ಅಳಲು ತೋಡಿಕೊಂಡಿಕೊಂಡಿದ್ದಾನೆ. ಮಧ್ಯರಾತ್ರಿಯೇ ಅಪ್ರಾಪ್ತನನ್ನು ವಶಕ್ಕೆ ಪಡೆದ ಪೊಲೀಸರು, ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಆತನನ್ನು ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಒಪ್ಪಿಸಿದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಸಂಪತ್‍ಕುಮಾರ್ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

Translate »