ದಸರಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಅರಮನೆ ವೀಕ್ಷಣೆ
ಮೈಸೂರು

ದಸರಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಅರಮನೆ ವೀಕ್ಷಣೆ

October 7, 2022

ಮೈಸೂರು, ಅ.6(ಎಸ್‍ಬಿಡಿ)- ನಾಡಹಬ್ಬ ದಸರಾ ಸಂದರ್ಭದಲ್ಲಿ ವಿಶ್ವ ಪ್ರಸಿದ್ಧ ಅಂಬಾವಿಲಾಸ ಅರಮನೆಗೆ ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಅದರಲ್ಲೂ ಕಳೆದ ನಾಲ್ಕು ದಿನಗಳಲ್ಲಿ ಅತೀ ಹೆಚ್ಚು ಮಂದಿ ಅರಮನೆ ಸೌಂದರ್ಯ ಆಸ್ವಾದಿಸಿದ್ದಾರೆ. ದಸರಾ ಮಹೋತ್ಸವಕ್ಕೆ ಸೆ.26ರಂದು ಚಾಲನೆ ದೊರಕಿತು. ಅಂದು 4099, ಸೆ.27ರಂದು 5799, ಸೆ.28ರಂದು 5798, ಸೆ.29ರಂದು 7,600, ಸೆ.30ರಂದು 7,547, ಅ.1ರಂದು 15,242, ಅ.2ರಂದು 21,062, ಅ.3ರಂದು 18,119,
ಅ.4ರಂದು(ಮಧ್ಯಾಹ್ನ 2ರಿಂದ) 12,876 ಸೇರಿ 9 ದಿನದಲ್ಲಿ ಒಟ್ಟು 98,142 ವೀಕ್ಷಕರು ಅರಮನೆಗೆ ಭೇಟಿ ನೀಡಿದ್ದಾರೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ. ಇದರಲ್ಲಿ 309 ವಿದೇಶಿಯರು, 7,335 ವಿದ್ಯಾರ್ಥಿಗಳು, 11,702 ಮಕ್ಕಳು ಹಾಗೂ 78,796 ವಯಸ್ಕರು ಟಿಕೆಟ್ ಪಡೆದು ಅರಮನೆ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ. ಇದರಲ್ಲಿ 67,299 ಮಂದಿ ಕಳೆದ ನಾಲ್ಕು ದಿನಗಳಲ್ಲಿ ಅರಮನೆಗೆ ಭೇಟಿ ನೀಡಿರುವುದು ಗಮನಾರ್ಹ. ಇನ್ನು ಹೊರ ಆವರಣದಿಂದ ಅರಮನೆ ವೀಕ್ಷಿಸಿ, ಸಂಭ್ರಮಿಸಿದವರ ಲೆಕ್ಕವಿಲ್ಲ. ನವರಾತ್ರಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಜೊತೆಗೆ ಹೊಂಬೆಳಕಲ್ಲಿ ಕಂಗೊಳಿಸುತ್ತಿದ್ದ ಅರಮನೆ ನೋಡಲು ನಿತ್ಯ ಜನಸಮೂಹವೇ ಹರಿದು ಬಂದಿತ್ತು. ಅರಮನೆ ಎದುರಿನ ಉದ್ಯಾನದಲ್ಲಿ ಅರಮನೆ ಮಂಡಳಿ ವತಿಯಿಂದ ಏರ್ಪಡಿಸಿದ್ದ `ಫಲ-ಪುಷ್ಪ’ ಪ್ರದರ್ಶನವನ್ನು ಲಕ್ಷೋಪಲಕ್ಷ ಜನ ಕಣ್ತುಂಬಿಕೊಂಡರು. ಕೆಂಪು ಕೋಟೆ, ರಾಜಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರು ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳು, ಬಣ್ಣ ಬಣ್ಣದ ಹೂಗಳು, ಔಷಧೀಯ ಗಿಡಗಳು ಸೇರಿ ಎಲ್ಲಾ ಬಗೆಯ ಸಸಿಗಳು ಸೇರಿದಂತೆ ವೈವಿದ್ಯಮಯವಾಗಿದ್ದ `ಫಲ-ಪುಷ್ಪ’ ಪ್ರದರ್ಶನವನ್ನು ವೀಕ್ಷಿಸಿದ ಜನ ಮೆಚ್ಚುಗೆ ಮಾತನಾಡಿದರು.

Translate »