ಈ ಸಲದ ಅದ್ಧೂರಿ ಜಂಬೂಸವಾರಿಯನ್ನು ಪ್ರತ್ಯಕ್ಷವಾಗಿ 15 ಲಕ್ಷ ಜನ ವೀಕ್ಷಿಸಿದ್ದಾರೆ
ಮೈಸೂರು

ಈ ಸಲದ ಅದ್ಧೂರಿ ಜಂಬೂಸವಾರಿಯನ್ನು ಪ್ರತ್ಯಕ್ಷವಾಗಿ 15 ಲಕ್ಷ ಜನ ವೀಕ್ಷಿಸಿದ್ದಾರೆ

October 7, 2022

ಮೈಸೂರು, ಅ.6(ಆರ್‍ಕೆ)- ಈ ಬಾರಿಯ ವಿಶ್ವ ಪ್ರಸಿದ್ಧ ದಸರಾ ಮಹೋತ್ಸವದ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಿದ ಮೈಸೂರಿನ ಸರ್ವರಿಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯ ವಾದ ಅರ್ಪಿಸಿದ್ದಾರೆ. ಮೈಸೂರಿನ ಜೆ.ಪಿ.ನಗರ ದಲ್ಲಿರುವ ಸಿಂಧೂರ ಕನ್ವೆನ್ಷನ್ ಹಾಲ್‍ನಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಅವರು, ನಾಡ ಹಬ್ಬ ಮೈಸೂರು ದಸರಾ ಉತ್ಸವವು ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿದೆ. 15 ಲಕ್ಷಕ್ಕೂ ಅಧಿಕ ಜನರು ವಿಜಯದಶಮಿ ಮೆರವಣಿಗೆಯನ್ನು ಪ್ರತ್ಯಕ್ಷವಾಗಿ ನೋಡಿ ಆನಂದಿಸಿದ್ದಾರೆ ಎಂದರು.

ನವರಾತ್ರಿ ಉತ್ಸವದ ಯಶಸ್ಸಿಗೆ ಕಾರಣರಾದ ಸಚಿವರು, ಸಂಸದರಾದ ಪ್ರತಾಪ್ ಸಿಂಹ, ವಿ. ಶ್ರೀನಿವಾಸ ಪ್ರಸಾದ್, ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಜಿ.ಟಿ. ದೇವೇಗೌಡ ಹಾಗೂ ಇತರರು, ಮೇಯರ್ ಶಿವಕುಮಾರ್, ಉಪಮೇಯರ್ ಡಾ. ಆರ್. ರೂಪಾ, ಪಾಲಿಕೆ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ದಸರಾ ಉಪ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಮೈಸೂರಿನ ಮಹಾ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರು ನುಡಿದರು. ಇದೇ ಪ್ರಥಮ ಬಾರಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ನಾಡ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಆಯಾ ಉಪ ಸಮಿತಿ ಪದಾಧಿಕಾರಿಗಳು ಸುವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದರು. ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಒಟ್ಟಾರೆ ಈ ಬಾರಿಯ ದಸರಾ ಉತ್ಸವ ಸಂಪೂರ್ಣ ಯಶಸ್ವಿಯಾಗಿದೆ ಎಂಬ ತೃಪ್ತಿ ನನಗಿದೆ ಎಂದು ಎಸ್.ಟಿ. ಸೋಮಶೇಖರ್ ನುಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ದಸರಾ ಮಹೋತ್ಸವ ಆಚರಿಸುವ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ಎಲ್ಲಾ ನಾಯಕರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಇದೇ ಸಂದರ್ಭ ನುಡಿದರು.

ಬುಧವಾರ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಸ್ತಬ್ಧ ಚಿತ್ರಗಳು, ವಿವಿಧ ಜಿಲ್ಲೆಗಳ 66 ಜಾನಪದ ಕಲಾ ತಂಡಗಳು ತಮ್ಮ ಜಿಲ್ಲೆಯ ಸಾಂಸ್ಕøತಿಕ ವೈಭವವನ್ನು ನಾಡಿನ ಜನರಿಗೆ ಪರಿಚಯಿಸಿದ್ದಾರೆ. ಐತಿಹಾಸಿಕ ವಿಜಯದಶಮಿ ಮೆರವಣಿಗೆಯಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದರು. ಸಣ್ಣ ಪುಟ್ಟ ನೂಕು ನುಗ್ಗಲು ಹೊರತುಪಡಿಸಿ ಉಳಿದಂತೆ ಮೆರವಣಿಗೆ ಮತ್ತು ಪಂಜಿನ ಕವಾಯಿತು ಪ್ರದರ್ಶನ ಸುಸೂತ್ರವಾಗಿ ನಡೆದಿದೆ. ಅದಕ್ಕೆ ತಾಯಿ ಚಾಮುಂಡೇಶ್ವರಿ ಕೃಪೆ, ಅಧಿಕಾರಿಗಳು, ಜನಪ್ರತಿನಿಧಿಗಳ ಶ್ರಮ ಹಾಗೂ ಜನರ ಸಹಕಾರ ಪ್ರಮುಖ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ಕೋವಿಡ್-19 ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಜನರು ಅದ್ಧೂರಿ ದಸರಾ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ರೈತ ದಸರಾ, ಕವಿಗೋಷ್ಠಿ, ಯುವ ಸಂಭ್ರಮ, ಯೋಗ ದಸರಾ, ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡೆ, ದಸರಾ ದರ್ಶನ, ಆರೋಗ್ಯ ದಸರಾ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜನರು ಉತ್ಸಾಹದಿಂದ ಪಾಲ್ಗೊಂಡು ಈ ನಾಡಿನ ಕಲೆ, ಸಂಸ್ಕøತಿ, ಪರಂಪರೆಯನ್ನು ವೀಕ್ಷಿಸಿದ್ದಾರೆ ಎಂದು ಅವರು ತಿಳಿಸಿದರು. ಯುವ ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸಾವಿರಾರು ಬಗೆಯ ಫಲ-ಪುಷ್ಪಗಳನ್ನು ಪ್ರದರ್ಶಿಸಲಾಗಿದೆ. ಮೈಸೂರು ನಗರದ 96 ವೃತ್ತಗಳೂ ಸೇರಿ ಒಟ್ಟು 124 ಕಿ.ಮೀ.ವರೆಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ. ಪ್ರಮುಖ 28 ವೃತ್ತಗಳಲ್ಲಿ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇನ್ನೂ 10 ದಿನಗಳ ಕಾಲ ವಿದ್ಯುದೀಪಾ ಲಂಕಾರವನ್ನು ವಿಸ್ತರಿಸುವಂತೆ ತಿಳಿಸಲಾಗಿದೆ. ಸೆಸ್ಕ್ ಅಧಿಕಾರಿಗಳು 6 ದಿನಗಳವರೆಗೆ ವಿಸ್ತರಿಸುತ್ತೇವೆ ಎನ್ನುತ್ತಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ನುಡಿದರು.

ಇದೀಗ ದಸರಾ ಮುಗಿದಿರುವುದರಿಂದ ಬುಧವಾರ ರಾತ್ರಿ 11 ಗಂಟೆಯಿಂದ ಪೌರಕಾರ್ಮಿಕರು ನಗರದಾದ್ಯಂತ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ದಸರಾ ವಿಶೇಷಾಧಿಕಾರಿಯಾಗಿ ಹಗಲು-ರಾತ್ರಿ ದುಡಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಡಿಸಿ ಡಾ. ಮಂಜುನಾಥಸ್ವಾಮಿ, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ ರೆಡ್ಡಿ, ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್. ಚೇತನ್ ಸೇರಿದಂತೆ ದಸರಾ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳುವುದಾಗಿಯೂ ಅವರು ನುಡಿದರು.

ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಡಿಸಿ ಡಾ. ಬಿ.ಎಸ್. ಮಂಜುನಾಥಸ್ವಾಮಿ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್. ಚೇತನ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ರಾಜ್ಯಾಧ್ಯಕ್ಷ ಎಂ. ಶಿವಣ್ಣ, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ದಸರಾ ಮುಂಚೂಣಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

Translate »