ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಸೋಮವಾರದ ವಿಶೇಷ ಪೂಜೆ
ಮೈಸೂರು

ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಸೋಮವಾರದ ವಿಶೇಷ ಪೂಜೆ

November 15, 2020

ಮೈಸೂರು, ನ.14(ಆರ್‍ಕೆಬಿ)- ಮೈಸೂರಿನ ಲಷ್ಕರ್ ಮೊಹಲ್ಲಾ ಗರಡಿಕೇರಿಯ 3ನೇ ಕ್ರಾಸ್‍ನಲ್ಲಿರುವ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ 43ನೇ ವರ್ಷದ ಕಾರ್ತಿಕ ಮಾಸದ ಪೂಜಾ ಮಹೋತ್ಸವದ ಅಂಗವಾಗಿ ಮೊದಲ ಕಾರ್ತಿಕ ಸೋಮವಾರವಾದ ನ.16ರಂದು ವಿಶೇಷ ಪೂಜೆ ಗಳು ನಡೆಯಲಿವೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ (ಗುಡ್ಡಪ್ಪ) ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 6 ಗಂಟೆಯಿಂದ ಸ್ವಾಮಿಗೆ ಮಹಾರುದ್ರಾಭಿಷೇಕ, ಹಾಲರವಿ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ಗಂಟೆಗೆ ಸ್ವಾಮಿಗೆ ಬಿಲ್ವಾರ್ಚನೆ, ನಿವೇದನೆ, ಮಹಾಮಂಗಳಾರತಿ, ಸಂಜೆ 7ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಕೋವಿಡ್-19 ಮಾರ್ಗಸೂಚಿಗೆ ಅನುಗುಣವಾಗಿ ಪೂಜಾ ಕಾರ್ಯಕ್ರಮ ಸರಳೀಕರಣಗೊಳಿಸಿದ್ದು, ಭಕ್ತಾದಿಗಳು ಮಾಸ್ಕ್, ಸ್ಯಾನಿಟೈಸರ್ ಜೊತೆಗೆ ಸಾಮಾಜಿಕ ಅಂತರದಡಿ ದರ್ಶನ ಮಾಡಬಹುದು. ಈ ಬಾರಿ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಉತ್ಸವಗಳನ್ನು ರದ್ದುಪಡಿಸಲಾಗಿದೆ ಎಂದರು.

ನ.23ರಂದು 2ನೇ ಕಾರ್ತಿಕ ಸೋಮವಾರ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ವಿಶೇಷ ಹೂವಿನ ಅಲಂಕಾರ, ನ.30ರಂದು 3ನೇ ಕಾರ್ತಿಕ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಡಿ.7 ಮತ್ತು 14ರಂದು ಕ್ರಮವಾಗಿ 4 ಮತ್ತು 5ನೇ ಕಾರ್ತಿಕ ಸೋಮವಾರಗಳಂದು ರುದ್ರಾಭಿಷೇಕ ನಡೆಯಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಪದಾಧಿಕಾರಿಗಳಾದ ಎಸ್. ಜಗನ್ನಾಥ್, ಆರ್.ಜಿ.ಸುರೇಶ್‍ಬಾಬು, ಮಹಾದೇವ್ ಇನ್ನಿತರರು ಇದ್ದರು.