ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಲಹೆಗಳ ಮಹಾಪೂರ
ಹಾಸನ

ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಲಹೆಗಳ ಮಹಾಪೂರ

July 15, 2019

ಹಾಸನ,ಜು14- ಮಹಿಳಾ ಬ್ಯಾಂಕ್ ಆರಂಭಿಸಿ…, ರಾಜ್ಯ ಲೇಖಕಿಯರ ಸಂಘದ ಶಾಖೆಯನ್ನು ಹಾಸನದಲ್ಲೂ ತೆರೆಯಬೇಕು…, ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸಬೇಕು…, ಮಹಿಳೆಯರು ಕೀಳರಿಮೆ ತೊರೆದು ಎಲ್ಲವನ್ನೂ ಸಾಧಿಸಬೇಕು.., ಹೀಗೆ ಹಲವು ಸಲಹೆಗಳು ನಗರದಲ್ಲಿ ಭಾನುವಾರ ನಡೆದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿಬಂದವು.

ಅಭಿನಂದನಾ ಬಳಗ ಮತ್ತು ಜಿಲ್ಲಾ ಲೇಖಕಿಯರ ಬಳಗ ಒಟ್ಟಾಗಿ ಆಯೋಜಿ ಸಿದ್ದ ಸಮ್ಮೇಳನವನ್ನು ಹಿರಿಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತ ದಲ್ಲಿ ಮಹಿಳೆಯರನ್ನು ದೇವತೆಗೆ ಹೋಲಿಸ ಲಾಗುತ್ತದೆ. ಆದರೆ, ಅವರಿಗೆ ಸಾಧನೆ ಮಾಡಲು ಅವಕಾಶವನ್ನೇ ಕೊಡುವುದಿಲ್ಲ. ಮಹಿಳೆಯರು ಹಲವು ಅಡೆತಡೆಗಳನ್ನು ನಿವಾರಿಸಿಕೊಂಡು ಬಲು ಕಷ್ಟದಿಂದ ಸಾಧನೆ ಮಾಡಬೇಕು ಎಂದು ವಿಷಾದಿಸಿದರು.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಡೆತಡೆ ನಿರೀಕ್ಷಿತವೇ ಎಂದ ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಮಹಿಳೆಯರು ಕೀಳರಿಮೆ ತೊರೆದು ನಾವೂ ಸಾಧಿಸಬಲ್ಲೆವು ಎಂದು ಕೊಂಡು ಮುಂದಡಿ ಇಟ್ಟರೆ ಎಂಥ ಸಾಧನೆಯಾದರೂ ಸಾಧ್ಯವಾಗುತ್ತದೆ ಎಂದು ಉತ್ತೇಜನದ ಮಾತನಾಡಿದರು.

ಲೀಲಾವತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಆಶಾ ಕೃಷ್ಣಸ್ವಾಮಿ, ಲೇಖಕಿ ನಂದಿನಿ ಹೆದ್ದುರ್ಗ, ನಿಷ್ಕಲಾ, ಡಾ.ಸಾವಿತ್ರಿ, ಸಂಗೀತಾ ಮತ್ತಿತರರು ಮಾತನಾಡಿದರು.

Translate »